newsics.com
ಶಿವಮೊಗ್ಗ: ಫೈನಾನ್ಸ್ ಕಂಪನಿಯ ಉದ್ಯೋಗಿ ಅಲ್ಲಿಯೇ ಕೆಲಸ ಮಾಡುತ್ತಿದ್ದ ಯುವಕನನ್ನು ಪ್ರೀತಿಸಿ ಅಂತರ್ಜಾತಿ ವಿವಾಹ ಮಾಡಿಕೊಂಡಿದ್ದ ಯುವತಿ, ಗಂಡನ ಮನೆಗೆ ಹೋಗುವ ಮಾರ್ಗ ಮಧ್ಯೆಯೇ ಭೀಕರವಾಗಿ ಹತ್ಯೆಯಾಗಿದ್ದಾಳೆ.
ಚಿಕ್ಕಮಗಳೂರಿನ ಕೊಪ್ಪದ ದಲಿತ ಯುವತಿಯ ಪ್ರೇಮ ಪ್ರಕರಣ ಕೊಲೆಯಲ್ಲಿ ಅಂತ್ಯವಾಗಿದೆ. ಪ್ರೀತಿಸಿ ಓಡಿಹೋಗಿ ಮದುವೆಯಾಗಿದ್ದ ಯುವತಿ ಶವವಾಗಿ ಪತ್ತೆಯಾಗಿದ್ದಾಳೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದ ಸೌಮ್ಯ ಹತ್ಯೆಯಾದ ಮಹಿಳೆ. ಕೊಪ್ಪ ಪಟ್ಟಣದ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸೌಮ್ಯ, ಅಲ್ಲಿಯೇ ಕೆಲಸ ಮಾಡುತ್ತಿದ್ದ ಶಿವಮೊಗ್ಗ ಜಿಲ್ಲೆ ಸಾಗರ ಮೂಲದ ಸೃಜನ್ ಅಲಿಯಾಸ್ ಲೋಕೇಶ್ ಎಂಬಾತನನ್ನು ಪ್ರೀತಿಸಿ ಇಬ್ಬರೂ ಮನೆಯವರ ವಿರೋಧದಿಂದ ಊರು ಬಿಟ್ಟು ಓಡಿ ಹೋಗಿ ಅಂತರ್ಜಾತಿ ಮದುವೆ ಮಾಡಿಕೊಂಡಿದ್ದರು.
ಮದುವೆ ಬಳಿಕ ಸೃಜನ್ ಹಾಗೂ ಸೌಮ್ಯಾ ಕೊಪ್ಪ ಪಟ್ಟಣದಲ್ಲಿಯೇ ವಾಸ ಮಾಡುತ್ತಿದ್ದರು. ಸಾಗರದಲ್ಲಿರುವ ಗಂಡನ ಮನೆಗೆ ಹೋಗಲೇಬೇಕು ಎಂದು ಹಠ ತೊಟ್ಟ ಸೌಮ್ಯ, ಪತಿ ಸೃಜನ್ ಜತೆ ಜಗಳಕ್ಕಿಳಿದಿದ್ದಾಳೆ. ಅಂತರ್ಜಾತಿ ಮದುವೆ ಮಾಡಿಕೊಂಡಿರುವುದರಿಂದ ನಮ್ಮನ್ನು ಮನೆಯಲ್ಲಿ ಸೇರಿಸುವುದಿಲ್ಲ ಎಂದು ಸೃಜನ್ ಪರಿಪರಿಯಾಗಿ ಹೇಳಿದರೂ ಕೇಳದ ಸೌಮ್ಯ ಗಂಡನ ಮನೆ ಸಾಗರದತ್ತ ಹೊರಟಿದ್ದಾಳೆ. ಮಾರ್ಗ ಮಧ್ಯೆಯೂ ಇದೇ ವಿಚಾರವಾಗಿ ಜಗಳವಾಗಿದ್ದು, ಸೃಜನ್ ಸಹನೆ ಕಳೆದುಕೊಂಡು ಸೌಮ್ಯ ಮೇಲೆ ಹಲ್ಲೆ ನಡೆಸಿದ್ದಾನೆ. ಸೌಮ್ಯ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ.
ಕಳೆದ ಕೆಲ ದಿನಗಳ ಹಿಂದೆ ಕೊಪ್ಪ ಪೊಲೀಸ್ ಠಾಣೆಯಲ್ಲಿ ಯುವತಿಯ ಪೋಷಕರು ನಾಪತ್ತೆ ಆಗಿರುವ ಬಗ್ಗೆ ಮಿಸ್ಸಿಂಗ್ ಕೇಸ್ ದಾಖಲಿಸಿದ್ದಾರೆ. ಈ ಪ್ರಕರಣ ಬೆನ್ನು ಹತ್ತಿದ ಕೊಪ್ಪ ಪೊಲೀಸರು ಕೊನೆಗೆ ಸೃಜನನ್ನು ವಿಚಾರಣೆಗೊಳಪಡಿಸಿದಾಗ ಆತ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಯುವತಿಯನ್ನು ಕೊಂದು ಆಕೆಯನ್ನು ಆನಂದಪುರದ ಮುಂಬಾಳು ಸಮೀಪ ಮಣ್ಣಿನಲ್ಲಿ ಹೂತು ಹಾಕಿರುವ ವಿಚಾರವನ್ನು ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ.
ಸೌಮ್ಯಳ ಮೃತದೇಹವನ್ನು ಬುಧವಾರ (ಜುಲೈ 24) ತಹಸೀಲ್ದಾರ್ ಸಮ್ಮುಖದಲ್ಲಿ ಪೊಲೀಸರು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಅವಾರ್ಡ್ ಸ್ವೀಕರಿಸುವಾಗಲೇ ನಟಿ ಸೋನಿಯಾಗೆ ಹಾರ್ಟ್ ಅಟ್ಯಾಕ್! ನೋವಿನಿಂದ ನರಳಾಡುತ್ತಿರುವ ವಿಡಿಯೋ ವೈರಲ್…