newsics.com | ನ್ಯೂಸಿಕ್ಸ್
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ನಟ ವಿಜಯ್ ಅಭಿನಯದ ಕೊನೆಯ ಚಿತ್ರ ‘ಜನ ನಾಯಗನ್’ ತೆರೆಗೆ ಬರಲು ಸಂಪೂರ್ಣ ಸಜ್ಜಾಗಿದೆ. ಸುಮಾರು ಏಳು ತಿಂಗಳ ಸುದೀರ್ಘ ವಿಳಂಬದ ನಂತರ ಜುಲೈ 23ರಂದು ಈ ಸಿನಿಮಾ ಜಾಗತಿಕ ಮಟ್ಟದಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದ್ದು, ಅಡ್ವಾನ್ಸ್ ಬುಕಿಂಗ್‌ನಲ್ಲಿ ಸರ್ವಕಾಲಿಕ ದಾಖಲೆ ಬರೆದಿದೆ.
ಭಾನುವಾರದಿಂದ ಆರಂಭವಾದ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಗೆ ಪ್ರೇಕ್ಷಕರಿಂದ ಅಭೂತಪೂರ್ವ ಅಭಿನಂದನೆ ಲಭಿಸಿದೆ. ಮೊದಲ ದಿನದ ಪ್ರದರ್ಶನಕ್ಕೆ ದೇಶಾದ್ಯಂತ ಈಗಾಗಲೇ 6 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗಿದ್ದು, ದೇಶದಾದ್ಯಂತ ಒಟ್ಟು 8,೦೦೦ಕ್ಕೂ ಹೆಚ್ಚು ಪ್ರದರ್ಶನಗಳು ನಿಗದಿಯಾಗಿವೆ. ತಮಿಳುನಾಡಿನ ಪ್ರಮುಖ ಥಿಯೇಟರ್‌ಗಳಲ್ಲಿ ಆನ್‌ಲೈನ್ ಬುಕಿಂಗ್ ಓಪನ್ ಆದ ಕೆಲವೇ ನಿಮಿಷಗಳಲ್ಲಿ ಶೋಗಳು ಹೌಸ್‌ಫುಲ್ ಆಗಿವೆ.
ಬಾಕ್ಸ್ ಆಫೀಸ್ ಟ್ರ್ಯಾಕರ್ ‘ಸ್ಯಾಕ್ನಿಲ್ಕ್’ ವರದಿ ಪ್ರಕಾರ, ಜಾಗತಿಕ ಮಟ್ಟದಲ್ಲಿ ಮೊದಲ ವಾರಾಂತ್ಯದ ಮುಂಗಡ ಬುಕಿಂಗ್ ಬಿಸ್ನೆಸ್ ಈಗಾಗಲೇ 27 ಕೋಟಿ ರೂಪಾಯಿ ಗಡಿ ದಾಟಿದೆ. ಯಾವುದೇ ಬೃಹತ್ ಪ್ಯಾನ್-ಇಂಡಿಯಾ ಪ್ರಚಾರವಿಲ್ಲದೆ, ಕೇವಲ ತಮಿಳು ಮಾರುಕಟ್ಟೆಯನ್ನೇ ಪ್ರಮುಖವಾಗಿ ನೆಚ್ಚಿಕೊಂಡ ಸಿನಿಮಾವೊಂದಕ್ಕೆ ಈ ಮಟ್ಟದ ಕ್ರೇಜ್ ಸಿಕ್ಕಿರುವುದು ಭಾರತೀಯ ಚಿತ್ರರಂಗದಲ್ಲೇ ಅಪರೂಪದ ದಾಖಲೆಯಾಗಿದೆ.
ಎಚ್. ವಿನೋದ್ ನಿರ್ದೇಶನದ ಈ ಚಿತ್ರವು ಆರಂಭದಲ್ಲಿ ಜನವರಿಯಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ ಸೆನ್ಸಾರ್ ಮಂಡಳಿಯ ಪ್ರಮಾಣಪತ್ರ ವಿಳಂಬದಿಂದಾಗಿ ಮುಂದೂಡಲ್ಪಟ್ಟಿತ್ತು. ಈ ನಡುವೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಅವರ ‘ಟಿವಿಕೆ’ (TVK) ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿ, ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಪೂರ್ಣ ಪ್ರಮಾಣದ ರಾಜಕೀಯ ಜೀವನಕ್ಕೆ ಕಾಲಿಡುವ ಮುನ್ನ ವಿಜಯ್ ನಟಿಸಿರುವ ಕೊನೆಯ ಚಿತ್ರ ಇದಾಗಿರುವುದರಿಂದ ಪ್ರೇಕ್ಷಕರಲ್ಲಿ ಕಾತರ ಇಮ್ಮಡಿಸಿದೆ.
Jana Nayagan ಸಿಎಂ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ ರಿಲೀಸ್‌ಗೆ ಕೌಂಟ್‌ಡೌನ್; ಅಭಿಮಾನಿಗಳಿಗೆ ಡಬಲ್ ಧಮಾಕಾ