newsics.com | ನ್ಯೂಸಿಕ್ಸ್
ಕುವೈತ್ ನಗರ: ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಮತ್ತಷ್ಟು ತೀವ್ರಗೊಂಡಿದ್ದು, ಕುವೈತ್ ಹಾಗೂ ಬಹ್ರೇನ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳು ಮತ್ತು ವಾಯು ರಕ್ಷಣಾ ವ್ಯವಸ್ಥೆಗಳನ್ನು ಗುರಿಯಾಗಿಸಿಕೊಂಡು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾಪ್ಸ್ (IRGC) ಮಂಗಳವಾರ ಭೀಕರ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿದೆ.
ಕುವೈತ್‌ನಲ್ಲಿರುವ ‘ಅಲಿ ಅಲ್-ಸೇಲಂ’ ವಾಯು ನೆಲೆ ಹಾಗೂ ‘ಕ್ಯಾಂಪ್ ಆರಿಫ್‌ಜಾನ್’ ಮೇಲೆ ದಾಳಿ ನಡೆಸಿರುವ ಇರಾನ್, ಬಹ್ರೇನ್‌ನಲ್ಲಿರುವ ಅಮೆರಿಕ ನೌಕಾಪಡೆಯ 5ನೇ ಫ್ಲೀಟ್ ಕೇಂದ್ರ ಕಚೇರಿಯನ್ನೂ ಗುರಿಯಾಗಿಸಿಕೊಂಡಿದೆ. ಅಮೆರಿಕ ತನ್ನ ಮೇಲಿನ ದಾಳಿಗಳನ್ನು ಮುಂದುವರಿಸಿದರೆ, ಈ ಭಾಗದಲ್ಲಿರುವ ಅಮೆರಿಕದ ಪ್ರತಿಯೊಂದು ನೆಲೆಯನ್ನು ಧೂಳಿಪಟ ಮಾಡುವುದಾಗಿ ಹಾಗೂ ಅವರಿಗೆ ಸಹಕರಿಸುವ ನೆರೆಹೊರೆಯ ದೇಶಗಳನ್ನೂ ಶತ್ರುಗಳೆಂದು ಪರಿಗಣಿಸಿ ದಾಳಿ ನಡೆಸುವುದಾಗಿ ಇರಾನ್ ಮಿಲಿಟರಿ ಆಡಳಿತ ಮಂಡಳಿ ಗಂಭೀರ ಎಚ್ಚರಿಕೆ ನೀಡಿದೆ.
ಈ ಕ್ಷಿಪಣಿ ದಾಳಿಯಲ್ಲಿ ಮತ್ತೊಬ್ಬ ಅಮೆರಿಕನ್ ಸೈನಿಕ ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಇದಕ್ಕೆ ತಮ್ಮ ‘ಟ್ರುತ್ ಸೋಶಿಯಲ್’ ಖಾತೆಯಲ್ಲಿ ಕಟುವಾಗಿ ಪ್ರತಿಕ್ರಿಯಿಸಿರುವ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ನಮ್ಮ ಪ್ರತಿಯೊಬ್ಬ ಸೈನಿಕನ ಸಾವಿಗೂ ಇರಾನ್ ಹಲವು ಪಟ್ಟು ಹೆಚ್ಚಿನ ಬೆಲೆ ತೆರಬೇಕಾಗುತ್ತದೆ” ಎಂದು ಬೆದರಿಕೆ ಹಾಕಿದ್ದಾರೆ.
ದಾಳಿಯ ಬೆನ್ನಲ್ಲೇ ಗಲ್ಫ್ ಪ್ರದೇಶದಾದ್ಯಂತ ನಾಗರಿಕ ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿದ್ದು, ವಾಯುಪ್ರದೇಶವನ್ನು ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ. ಈ ಸಂಘರ್ಷದಿಂದಾಗಿ ಜಾಗತಿಕ ತೈಲ ಪೂರೈಕೆ ತಡೆಹಿಡಿಯುವ ಹಾಗೂ ಅಂತಾರಾಷ್ಟ್ರೀಯ ಷೇರು ಮಾರುಕಟ್ಟೆ ಕುಸಿಯುವ ಭೀತಿ ಎದುರಾಗಿದೆ.
Cyber Crime ಎಚ್ಚರ..! ವಾಟ್ಸಾಪ್‌ಗೆ ಬಂದ ಮದುವೆ ಕಾರ್ಡ್ ನೋಡ್ತಿದ್ದಂತೆ ಖಾಲಿಯಾಯ್ತು ₹9 ಲಕ್ಷ ರೂ