newsics.com | ನ್ಯೂಸಿಕ್ಸ್
ಮೈಸೂರು: ಹೆಂಡತಿ ಮತ್ತು ಇಬ್ಬರು ಪುಟ್ಟ ಮಕ್ಕಳನ್ನು ಕೊಂದು, ಪತಿಯೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಭೀಕರ ಘಟನೆಯೊಂದು ಮೈಸೂರು ಜಿಲ್ಲೆಯ ಹುಣಸೂರು ನಗರದ ‘ನ್ಯೂ ಮಾರುತಿ ಬಡಾವಣೆ’ಯಲ್ಲಿ ಬೆಳಕಿಗೆ ಬಂದಿದೆ.
ಮೃತರನ್ನು ಹರೀಶ್ (43), ಅವರ ಪತ್ನಿ ನಿಶ್ಚಿತಾ (4೦), ಮಕ್ಕಳಾದ ನೆಕ್ಸಾ (7) ಹಾಗೂ ರಕ್ಷಾ ಎಂದು ಗುರುತಿಸಲಾಗಿದೆ. ಹರೀಶ್ ಅವರು ತಮ್ಮ ಪತ್ನಿ ಹಾಗೂ ಮಕ್ಕಳ ಬಾಯಿ ಮತ್ತು ಮೂಗಿಗೆ ಪ್ಲಾಸ್ಟರ್ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದು, ಬಳಿಕ ತಾವು ಮಹಡಿಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಪೊಲೀಸರಿಗೆ ಡೆತ್ನೋಟ್ ಹಾಗೂ ಡೈರಿಯೊಂದು ಲಭ್ಯವಾಗಿದ್ದು, ಅದರಲ್ಲಿ ತಮ್ಮ ಕೊನೆಯ ಆಸೆಗಳ ಬಗ್ಗೆ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಈ ಮನೆಯಲ್ಲಿ ಹರೀಶ್ ಅವರ ತಾಯಿಯೂ ವಾಸವಾಗಿದ್ದರು. ಆದರೆ ಮೂರು ದಿನಗಳ ಹಿಂದಷ್ಟೇ ಹರೀಶ್ ತಮ್ಮ ತಾಯಿಯನ್ನು ಅಜ್ಜಿ ಮನೆಗೆ ಕಳುಹಿಸಿದ್ದರು. ಮನೆಯಲ್ಲಿ ಬೇರೆ ಯಾರೂ ಇಲ್ಲದ ಸಮಯ ನೋಡಿಕೊಂಡು ಈ ಕೃತ್ಯ ಎಸಗಿದ್ದಾರೆ.
ಹರೀಶ್ ಅವರಿಗೆ ಯಾವುದೇ ಆರ್ಥಿಕ ತೊಂದರೆ ಇರಲಿಲ್ಲ, ಘಟನೆಗೂ ಮುನ್ನ ಸ್ನೇಹಿತರೊಂದಿಗೆ ಸಾಧಾರಣವಾಗಿಯೇ ಮಾತನಾಡಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಕೃತ್ಯಕ್ಕೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ಕೌಟುಂಬಿಕ ಕಲಹವೇ ಕಾರಣವಿರಬಹುದು ಎಂದು ಶಂಕಿಸಲಾಗಿದೆ.
ಘಟನಾ ಸ್ಥಳಕ್ಕೆ ಹುಣಸೂರು ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಲ್ಲಾ ಕೋನಗಳಿಂದ ತನಿಖೆ ಚುರುಕುಗೊಳಿಸಿದ್ದಾರೆ.