newsics.com | ನ್ಯೂಸಿಕ್ಸ್
ಕೊಪ್ಪಳ: ಜಿಲ್ಲೆಯ ಬಲ್ಡೋಟ ಕಾರ್ಖಾನೆ ವಿರುದ್ಧ ನಡೆಯುತ್ತಿದ್ದ ರೈತರ ಪ್ರತಿಭಟನೆ ಮಂಗಳವಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ಪೊಲೀಸರ ಭಾರೀ ಭದ್ರತೆಯ ನಡುವೆಯೂ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ರೈತರು ಕಾರ್ಖಾನೆಯ ಆವರಣ ಗೋಡೆಯನ್ನು ಒಡೆದು ಹಾಕಿ ಒಳನುಗ್ಗಿದ ಘಟನೆ ನಡೆದಿದೆ.
ಸ್ಥಳದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಹೇಮಂತಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳ ಪಡೆ ಮೊಕ್ಕಾಂ ಹೂಡಿ ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿತು. ಆದರೆ, ಆಕ್ರೋಶಗೊಂಡ ರೈತರು ಹಾಗೂ ಪೊಲೀಸರ ನಡುವೆ ತೀವ್ರ ಮಾತಿನ ಚಕಮಕಿ ಮತ್ತು ತಳ್ಳಾಟ-ನೂಕಾಟ ನಡೆಯಿತು. ಅಧಿಕಾರಿಗಳ ತಡೆಯನ್ನೂ ಲೆಕ್ಕಿಸದೆ ರೈತರು ಕಾರ್ಖಾನೆ ಕಾಂಪೌಂಡ್‌ನತ್ತ ಧಾವಿಸಿದರು.
ರೈತರ ತಂಡಗಳು ಎರಡು ವಿಭಿನ್ನ ದಿಕ್ಕುಗಳಿಂದ ದಾಳಿ ನಡೆಸಿ ಕಾರ್ಖಾನೆಯ ಆವರಣ ಗೋಡೆಯನ್ನು ಒಡೆದು ಹಾಕಿ ಒಳಪ್ರವೇಶಿಸಿದವು. ಇದೇ ಗೊಂದಲದ ನಡುವೆ ಯುವಕನೊಬ್ಬ ಆವರಣದಲ್ಲಿದ್ದ ಬಸಾಪುರ ಕೆರೆಗೆ ಜಿಗಿದಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಆತನನ್ನು ಸುರಕ್ಷಿತವಾಗಿ ರಕ್ಷಿಸಿ ಹೊರತೆಗೆದರು.
ಬಲ್ಡೋಟ ಕಾರ್ಖಾನೆ ಆವರಣದೊಳಗಿರುವ ಬಸಾಪುರ ಕೆರೆಯನ್ನು ತಕ್ಷಣವೇ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ. ಘಟನೆಯಿಂದಾಗಿ ಸ್ಥಳದಲ್ಲಿ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ