newsics.com
ಬೆಂಗಳೂರು: ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ನಿರಂತರವಾಗಿ ಧಾರಾಕಾರ ಮಳೆ ಮುಂದುವರಿದಿದ್ದು, ಹಲವೆಡೆ ಮಳೆಯಿಂದಾಗಿ ಅವಾಂತರಗಳು ಸಂಭವಿಸುತ್ತಿವೆ.
ಭಾರೀ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿವೆ. ಕೆಲವೆಡೆ ಗುಡ್ಡ ಕುಸಿತ ಭೀತಿ ಎದುರಾಗುತ್ತಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಶನಿವಾರ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಹಾಸನ ಜಿಲ್ಲೆಗಳಲ್ಲಿ ಶನಿವಾರ(ಜು.20) ರಜೆ ಘೋಷಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಹೀಗಾಗಿ ಶನಿವಾರ ಜಿಲ್ಲೆಯಾದ್ಯಂತ ಎಲ್ಲಾ ಶಾಲಾ ಕಾಲೇಜಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಆದೇಶ ಹೊರಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಾಳೆಯೂ ಭಾರೀ ಮಳೆಯಾಗುವ ಸಾಧ್ಯತೆ ಹಿನ್ನೆಲೆ ಜಿಲ್ಲೆಯಲ್ಲಿ ಅಂಗನವಾಡಿಯಿಂದ ಪದವಿ ಪೂರ್ವ ಕಾಲೇಜುವರೆಗೆ ರಜೆ ನೀಡಿ ಡಿಸಿ ಮುಳೈ ಮುಗಿಲನ್ ಆದೇಶಿಸಿದ್ದಾರೆ. ಶನಿವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಇರಲಿದೆ.
ಉಡುಪಿ ಜಿಲ್ಲೆಯಲ್ಲಿ ವರ್ಷಧಾರೆ ಮುಂದುವರೆದ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ & ಪ್ರೌಢಶಾಲೆ, PU ಕಾಲೇಜಿಗಳಿಗೆ ನಾಳೆಯೂ ರಜೆ ನೀಡಲಾಗಿದೆ. ಯುಜಿ, ಪಿಜಿ, ITI, ಡಿಪ್ಲೊಮಾ,ಇಂಜಿನಿಯರಿಂಗ್ ಕಾಲೇಜಿಗೆ ರಜೆ ಇಲ್ಲ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದು, ಜಿಲ್ಲೆಯಲ್ಲಿ ನಾಳೆಯೂ ರೆಡ್ ಅಲರ್ಟ್ ಘೋಷಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಧಾರಾಕಾರ ಮಳೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಸಾಗರ, ಸೊರಬ, ಹೊಸನಗರ ತಾಲೂಕಿನ ಶಾಲಾ ಕಾಲೇಜಿಗೆ ಆಯಾ ತಹಶೀಲ್ದಾರ್ಗಳು ಶನಿವಾರ ರಜೆ ಘೋಷಣೆ ಮಾಡಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರಿದಿದೆ. ಹಾಗಾಗಿ ಜಿಲ್ಲೆಯ ಆರು ತಾಲ್ಲೂಕುಗಳ ಶಾಲೆಗಳಿಗೆ ಶನಿವಾರ ರಜೆ ಘೋಷಣೆ ಮಾಡಲಾಗಿದೆ. ಸಕಲೇಶಪುರ, ಆಲೂರು, ಬೇಲೂರು, ಹಾಸನ, ಹೊಳೆನರಸೀಪುರ ಮತ್ತು ಅರಕಲಗೂಡು ತಾಲ್ಲೂಕಿನ ಅಂಗನವಾಡಿ, ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ನಾಳೆ ರಜೆ ನೀಡಿ ಡಿಡಿಪಿಐ ಹೆಚ್ಕೆ ಪಾಂಡು ಆದೇಶಿಸಿದ್ದಾರೆ.
ಕೊಡಗು ಜಿಲ್ಲೆಯ ಅಂಗನವಾಡಿ ಶಾಲೆ ಪದವಿಪೂರ್ವ ಕಾಲೇಜುಗಳಿಗೆ ಶನಿವಾರ ರಜೆ ಘೋಷಿಸಿ ಜಿಲ್ಲಾಧಿಕಾರಿ ವೆಂಕಟರಾಜ ಆದೇಶಿಸಿದ್ದಾರೆ. ಶನಿವಾರವೂ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಕಪಿಲಾ ನದಿ ಪ್ರವಾಹ: ಸೇತುವೆ, ರಸ್ತೆ, ಮುಳುಗಡೆ, ನಂಜನಗೂಡು ದೇಗುಲಕ್ಕೆ ಜಲದಿಗ್ಬಂಧನ
ಸ್ವಂತ ದುಡ್ಡಿನಲ್ಲಿ ಮೋದಿ ದೇವಾಲಯ ನಿರ್ಮಿಸಿ ಭಕ್ತಿ, ಅಭಿಮಾನ ಮೆರೆದ ಅನ್ನದಾತ!