newsics.com
ಬೆಂಗಳೂರು: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳಾಗಿರುವ ಬಿಜೆಪಿ-ಜೆಡಿಎಸ್ ನಡುವೆ ಜಿದ್ದಾಜಿದ್ದಿಗೆ ಕಾರಣವಾಗಿರುವ ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಗೆ ಮತದಾನ ಪ್ರಕ್ರಿಯೆ ಬುಧವಾರ ಆರಂಭವಾಗಿದ್ದು, 45 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಲಿದೆ.
ಬೆಳಗ್ಗೆ 7ಕ್ಕೆ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಸಂಜೆ 6 ಗಂಟೆಯವರೆಗೆ ನಡೆಯಲಿದೆ. ಶಾಂತಿಯುತ ಮತದಾನಕ್ಕೆ 3 ಕ್ಷೇತ್ರಗಳಲ್ಲಿ ಜಿಲ್ಲಾಡಳಿತಗಳು ಸಕಲ ಸಿದ್ಧತೆಯ ಜತೆಗೆ ಸೂಕ್ತ ಬಂದೋಬಸ್ತ್ ಕೈಗೊಂಡಿವೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಪ್ರಮುಖವಾಗಿ ಕಾಂಗ್ರೆಸ್ನಿಂದ ಸಿ.ಪಿ.ಯೋಗೇಶ್ವರ ಮತ್ತು ಎನ್ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಮಧ್ಯೆ ನೇರ ಪೈಪೋಟಿ ಏರ್ಪಟ್ಟಿದೆ. ಈ ಕ್ಷೇತ್ರ ವ್ಯಾಪ್ತಿಯಲ್ಲಿ 276 ಮತಗಟ್ಟೆಗಳಿದ್ದು, 62 ನಗರ ವ್ಯಾಪ್ತಿ ಹಾಗೂ 214 ಗ್ರಾಮಾಂತರ ಪ್ರದೇಶದಲ್ಲಿ ಸ್ಥಾಪಿಸಲಾಗಿದೆ.
ಚನ್ನಪಟ್ಟಣದಲ್ಲಿ ಒಟ್ಟು 2,32,949 ಮತದಾರರಿದ್ದು, ಈ ಪೈಕಿ 1,12,324 ಪುರುಷ ಮತದಾರರು, 1,20,617 ಮಹಿಳಾ ಮತದಾರರಿದ್ದಾರೆ. 8,338 ಯುವ ಮತದಾರರು ಹಕ್ಕು ಚಲಾಯಿಸಲಿದ್ದಾರೆ.
ಚನ್ನಪಟ್ಟಣದಲ್ಲಿ ಒಕ್ಕಲಿಗ ಮತಗಳ ಪ್ರಾಬಲ್ಯವಿದೆ. 1.05 ಲಕ್ಷದಷ್ಟಿರುವ ಒಕ್ಕಲಿಗ ಮತಗಳೇ ನಿರ್ಣಾಯಕವಾಗಿದೆ. 40 ಸಾವಿರ ಪರಿಶಿಷ್ಟ ಪಂಗಡ, 32 ಸಾವಿರ ಮುಸ್ಲಿಂ, 21 ಸಾವಿರ ಹಿಂದುಳಿದ ವರ್ಗ, 8 ಸಾವಿರ ಕುರುಬ, 10 ಸಾವಿರಕ್ಕೂ ಹೆಚ್ಚು ಇತರೆ ಮತಗಳಿವೆ.
ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಕಣದಲ್ಲಿದರೆ, ಕಾಂಗ್ರೆಸ್‌ನಿಂದ ಯಾಸೀರ್ ಖಾನ್ ಪಠಾಣ್ ಸೇರಿ ಅಂತಿಮ ಕಣದಲ್ಲಿರುವ 8 ಅಭ್ಯರ್ಥಿಗಳಿದ್ದಾರೆ. ಇಲ್ಲೂ ಎರಡು ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ.
ಶಿಗ್ಗಾಂವಿಯಲ್ಲಿ ಒಟ್ಟು 2,37,525 ಮತದಾರರಿದ್ದಾರೆ. ಈ ಪೈಕಿ ಪುರುಷರು 1,21,443 ಹಾಗೂ ಮಹಿಳೆಯರು 1,16,76 ಮತಗಳಿವೆ. ಒಟ್ಟು 241 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ಈ ಪೈಕಿ 92 ಮತಗಟ್ಟೆಗಳು ಸೂಕ್ಷ್ಮವೆಂದು ಗುರ್ತಿಸಲಾಗಿದೆ. ಓರ್ವ ಎಎಸ್ಪಿ, ನಾಲ್ವರು ಡಿವೈಎಸ್ಪಿ, 12 ಸಿಪಿಐ, 24 ಪಿಎಸ್ಐ, 68 ಎಎಸ್ಐ ಸೇರಿ 716 ಸಿಬ್ಬಂದಿಯನ್ನ ಭದ್ರತೆಗೆ ನಿಯೋಜನೆ ಮಾಡಲಾಗಿದೆ.
ಶಿಗ್ಗಾಂವಿಯಲ್ಲಿ ಲಿಂಗಾಯತ ಮತಗಳೇ ನಿರ್ಣಾಯಕವಾಗಿವೆ. ಲಿಂಗಾಯತ 85 ಸಾವಿರ, ಮುಸ್ಲಿಂ 58 ಸಾವಿರ, ಕುರುಬ 27 ಸಾವಿರ, ಎಸ್ಸಿ, ಎಸ್ಟಿ 52 ಸಾವಿರ, ಇತರೆ 15 ಸಾವಿರ ಮತಗಳಿವೆ.
ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅನ್ನಪೂರ್ಣ ತುಕಾರಾಂ ಹಾಗೂ ಬಿಜೆಪಿಯ ಬಂಗಾರು ಹನುಮಂತು ನಡುವೆ ನೇರಾ ಹಣಾಹಣಿ ನಡೆದಿದೆ. ಒಟ್ಟಾರೆ 7 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ.
ಸಂಡೂರಿನಲ್ಲಿ ಒಟ್ಟು 2,36,100 ಮತದಾರರಿದ್ದು, ಈ ಪೈಕಿ 1,18,282 ಮಹಿಳಾ ಮತದಾರರು, 1,17,789 ಪುರುಷ ಮತದಾರರಿದ್ದಾರೆ. ಒಟ್ಟು 253 ಮತಗಟ್ಟೆ ಸ್ಥಾಪನೆ ಮಾಡಲಾಗಿದ್ದು, 55 ಸೂಕ್ಷ್ಮ ಮತಗಟ್ಟೆಗಳಿವೆ.
ಸಂಡೂರು ಎಸ್ಟಿ ಮೀಸಲು ಕ್ಷೇತ್ರವಾಗಿದೆ. ಎಸ್ಟಿ ಮತಗಳೇ ನಿರ್ಣಾಯಕ ಮತಗಳಾಗಿವೆ. ಎಸ್ಟಿ 68 ಸಾವಿರ, ಎಸ್ಸಿ 40 ಸಾವಿರ, ಲಿಂಗಾಯಿತ 38 ಸಾವಿರ, ಕುರುಬ ಮತಗಳು 34 ಸಾವಿರ, ಮುಸ್ಲಿಂ ಮತಗಳು 20 ಸಾವಿರ, ಇತರೆ 40 ಸಾವಿರ ಮತಗಳಿವೆ.
ನದಿಗೆ ದಿಬ್ಬಣದ ಬಸ್ ಉರುಳಿ 16 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ
ಇದೇ ರೊಮ್ಯಾನ್ಸ್‌ಗೆ ಅತ್ಯುತ್ತಮ ಸಮಯ… ಈ ವೇಳೆ ಭಯವಿಲ್ಲದೆ ನೀವು ‘ಒಂದಾಗಬಹುದು’!
ರಾಜ್ಯದ 6 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರು! 530 ಶಾಲೆಗಳಲ್ಲಿ ಮಕ್ಕಳೇ ಇಲ್ಲ!