newsics.com
ಬೆಂಗಳೂರು: ಬಸವನಗುಡಿ ಕಡಲೆಕಾಯಿ ಪರಿಷೆಗೂ ಮುನ್ನ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಕಡಲೆಕಾಯಿ ಪರಿಷೆ ನಡೆಯಲಿದೆ.
ಹೌದು, ಕಾಡುಮಲ್ಲೇಶ್ವರ ಗೆಳೆಯರ ಬಳಗವು ನವೆಂಬರ್ 15 ರಿಂದ 18 ರವರೆಗೆ ಮಲ್ಲೇಶ್ವರಂನಲ್ಲಿ ನಾಲ್ಕು ದಿನಗಳ ಕಡಲೆಕಾಯಿ ಪರಿಷೆಯನ್ನು ಆಯೋಜಿಸಿದೆ. ಇನ್ನು ಈ ವರ್ಷ ಪ್ಲಾಸ್ಟಿಕ್ ಬದಲಿಗೆ ಕಾಗದ ಮತ್ತು ಬಟ್ಟೆಯ ಚೀಲಗಳನ್ನೇ ಬಳಸಲು ನಿರ್ಧರಿಸಲಾಗಿದೆಯಂತೆ.
ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಿಂದ ಹಾಗೂ ತಮಿಳುನಾಡು, ಆಂಧ್ರಪ್ರದೇಶದ ರೈತರು ಕೂಡ ಪರಿಷೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಅಂದಹಾಗೆ, ಬಸವನಗುಡಿಯ ಕಡಲೆಕಾಯಿ ಪರಿಷೆ ನವೆಂಬರ್ 25ರಿಂದ ಆರಂಭವಾಗಲಿದೆ.
ಇನ್ನು ಕಡಲೆಕಾಯಿ ಪರಿಷೆ ಹಿನ್ನೆಲೆ ನೋಡುವುದಾದ್ರೆ, ಕಡಲೆಕಾಯಿ ರೈತರು ತಮ್ಮ ಬೆಳೆಯನ್ನು ಜಾನುವಾರುಗಳಿಂದ ರಕ್ಷಿಸಿಕೊಳ್ಳಲು ಬಸವನನ್ನು ಪೂಜಿಸುತ್ತಾರೆ. ಜಾನುವಾರುಗಳು ಜಮೀನಿಗೆ ಬರುವಂತೆ ಮಾಡುವ ಶಕ್ತಿಗಳನ್ನು ಹತ್ತಿಕ್ಕಲು ರೈತರು ಸಾಂಪ್ರದಾಯಿಕವಾಗಿ ತಮ್ಮ ಮೊದಲ ಬೆಳೆಯನ್ನು ಬಸವ ದೇವರಿಗೆ ಅರ್ಪಿಸುತ್ತಾರೆ. ಇದರಿಂದ ಬೆಳೆ ರಕ್ಷಣೆಯಾಗುತ್ತದೆ ಎಂಬ ನಂಬಿಕೆ. ಈ ಬಾರಿ ಕಡಲೆಕಾಯಿ ಪರಿಷೆಯಲ್ಲಿ ಎಂಟು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ.