newsics.com
ನವದೆಹಲಿ: 2022 ರ ಕೇಂದ್ರ ನಾಗರಿಕ ಸೇವಾ ಪರೀಕ್ಷೆಗಾಗಿ ಯುಪಿಎಸ್‌ಸಿಗೆ ಸಲ್ಲಿಸಿದ ಅರ್ಜಿಯಲ್ಲಿ ಸುಳ್ಳು ದಾಖಲೆ ನೀಡಿಕೆ ಆರೋಪಿಯಾಗಿರುವ ಮಾಜಿ ಪ್ರೊಬೇಷನರ್ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್‌ಗೆ ದೆಹಲಿ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನಿರಾಕರಿಸಿದೆ. ಇದರಿಂದಾಗಿ ಪೂಜಾ ಖೇಡ್ಕರ್‌ಗೆ ಬಂಧನ ಭೀತಿ ಎದುರಾಗಿದೆ.
ಮತ್ತಷ್ಟು ಆಳವಾಗಿ ಮತ್ತು ನ್ಯಾಯಯುತವಾಗಿ ತನಿಖೆ ನಡೆಸುವಂತೆ ತನಿಖಾ ಏಜೆನ್ಸಿಗೆ ಪಟಿಯಾಲ ಹೌಸ್ ಕೋರ್ಟ್‌ನ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ದೇವೆಂದರ್ ಕುಮಾರ್ ಜಂಗಾಲ ಗುರುವಾರ ನಿರ್ದೇಶನ ನೀಡಿದರು.
ಪರೀಕ್ಷೆ ಬರೆಯಲು ಇರುವ ಅವಕಾಶಗಳನ್ನು ಮೀರಿ ಪ್ರಯೋಜನ ಪಡೆದಿರುವ ಮತ್ತು ಅರ್ಹತೆ ಇಲ್ಲದೆ ಒಬಿಸಿ ವರ್ಗದಡಿ ಲಾಭ ಪಡೆದ ಅಭ್ಯರ್ಥಿಗಳನ್ನು ಪತ್ತೆ ಮಾಡುವಂತೆ ನ್ಯಾಯಾಲಯವು ತನಿಖಾ ಸಂಸ್ಥೆಗೆ ನಿರ್ದೇಶನ ನೀಡಿದೆ.
ಅರ್ಹತೆ ಇಲ್ಲದಿದ್ದರೂ ವಿಶೇಷಚೇತನ ಕೋಟಾದಡಿ ಪ್ರಯೋಜನ ಪಡೆದಿರುವ ಅಭ್ಯರ್ಥಿಗಳನ್ನು ಗುರುತಿಸುವಂತೆ ನ್ಯಾಯಾಧೀಶರು ತನಿಖಾ ಏಜೆನ್ಸಿಗೆ ನಿರ್ದೇಶನ ನೀಡಿದರು. ಯುಪಿಎಸ್‌ಸಿ ಒಳಗೆ ಇರುವವರೇ ಖೇಡ್ಕರ್ ಅವರಿಗೆ ಸಹಾಯ ಮಾಡಿರುವರೇ ಎಂಬುದರ ಬಗ್ಗೆಯೂ ತನಿಖೆ ನಡೆಸುವಂತೆ ಆದೇಶದಲ್ಲಿ ಸೂಚಿಸಿದ್ದಾರೆ.
ಪೂಜಾ ಖೇಡ್ಕರ್ ಅವರ ಉಮೇದುವಾರಿಕೆಯನ್ನು ರದ್ದುಗೊಳಿಸಿದ್ದ ಯುಪಿಎಸ್‌ಸಿ, ಭವಿಷ್ಯದ ಎಲ್ಲಾ ಪರೀಕ್ಷೆಗಳಿಂದ ನಿರ್ಬಂಧಿಸಿತ್ತು. ಖೇಡ್ಕರ್ ಪರ ವಾದ ಮಂಡಿಸಿದ ವಕೀಲ ಮಾಧವನ್, ಬಂಧನಕ್ಕೆ ತಡೆ ನೀಡಬೇಕು, ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಮನವಿ ಮಾಡಿದರು.
ಪೂಜಾ ಖೇಡ್ಕರ್ 5ನೇ ಪ್ರಯತ್ನದಲ್ಲಿಯೇ ಪರೀಕ್ಷೆ ಪೂರ್ಣಗೊಳಿಸಿದ್ದು, ಯಾವುದೇ ಅಕ್ರಮ ನಡೆದಿಲ್ಲ. ಆಕೆ ಶೇ.47ರಷ್ಟು ಅಂಗವೈಕಲ್ಯ ಹೊಂದಿರುವ ಬಗ್ಗೆ ಏಮ್ಸ್ ಪ್ರಮಾಣಪತ್ರ ನೀಡಿದ್ದು, ತನ್ನ ಕಚೇರಿಗೆ ಕರೆದ ಜಿಲ್ಲಾಧಿಕಾರಿ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ ಹಿನ್ನೆಲೆಯಲ್ಲಿ ಪೂಜಾ ಖೇಡ್ಕರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.
ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿ ಒಳವರ್ಗೀಕರಣಕ್ಕೆ ರಾಜ್ಯಗಳಿಗೆ ಅಧಿಕಾರವಿದೆ: ಸುಪ್ರೀಂ
ಮುಡಾ ಹಗರಣ: ನೊಟಿಸ್ ಹಿಂಪಡೆಯಲು ರಾಜ್ಯಪಾಲರಿಗೆ ಸಂಪುಟ ಸಭೆ ಒತ್ತಾಯ, ಕಾನೂನು ಹೋರಾಟಕ್ಕೆ ನಿರ್ಧಾರ