newsics.com
ಇದು ಡಿಜಿಟಲ್ ಯುಗ. ನಮ್ಮ ಜೀವನವೆಲ್ಲ ಡಿಜಿಟಲ್ಮಯ. ಎದ್ದಾಗಿನಿಂದ ಮಲಗುವವರೆಗೆ ಎಲ್ಲವೂ ಡಿಜಿಟಲ್ ಡಿಜಿಟಲ್. ಇದೀಗ ಡಿಜಿಟಲ್ ಕಾಂಡೋಮ್ ಕೂಡ ಲಾಂಚ್ ಆಗಿದೆ.
ಇದನ್ನು CAMDOM ಆ್ಯಪ್ ಹೆಸರಿನಿಂದ ಕರೆಯಲಾಗುತ್ತದೆ. ಇದು ಯಾವುದೇ ವಸ್ತು ಅಲ್ಲ, ಮೊಬೈಲ್ನಲ್ಲಿರುವ ಆ್ಯಪ್ ಆಗಿದ್ದು, ನಿಜವಾದ ಕಾಂಡೋಮ್ ಬಳಸುವಷ್ಟು ಸುಲಭ ಎಂಬ ಟ್ಯಾಗ್ಲೈನ್ ಸಹ ಹೊಂದಿದೆ.
ದೈಹಿಕ ಸಂಬಂಧ ಬೆಳೆಸುವ ಸಂದರ್ಭದಲ್ಲಿ ಅನುಮತಿಯಿಲ್ಲದೆ ರೆಕಾರ್ಡಿಂಗ್ನಿಂದ ರಕ್ಷಿಸುವ ಕೆಲಸವನ್ನು ಈ ಆ್ಯಪ್ ಮಾಡುತ್ತದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಡಿಜಿಟಲ್ ಕಾಂಡೋಮ್ ಆ್ಯಪ್ ಹಲ್ಚಲ್ ಸೃಷ್ಟಿಸಿದೆ.
ಹೊಸ ತರಹದ ಸುರಕ್ಷತೆ ನೀಡುವ ಉದ್ದೇಶದಿಂದ ಹಲವು ಆ್ಯಪ್ಗಳು ಅಂತರ್ಜಾಲದಲ್ಲಿ ಲಭ್ಯ ಇವೆ. CAMDOM ಆ್ಯಪ್ ಸಂಗಾತಿಯ ಒಪ್ಪಿಗೆ ಇಲ್ಲದೆ ರೆಕಾರ್ಡಿಂಗ್ ಮಾಡುವುದನ್ನು ತಡೆಯುತ್ತದೆ. ಇದರಿಂದ ಖಾಸಗಿ ಜೀವನಕ್ಕೆ ಧಕ್ಕೆಯಾಗುವುದನ್ನು ತಡೆಯುವ ಕೆಲಸವನ್ನು CAMDOM ಆ್ಯಪ್ ಮಾಡಲಿದೆ.
ಜರ್ಮನಿಯ ಬ್ರಾಂಡ್ Billy Boy ಮತ್ತು ಏಜೆನ್ಸಿ Innocean Berlin ಜತೆಯಾಗಿ CAMDOM ಆ್ಯಪ್ನ್ನು ಡೆವಲಪ್ ಮಾಡಿವೆ. ಸಮ್ಮತಿಯಿಲ್ಲದ ರೆಕಾರ್ಡಿಂಗ್ ಅನ್ನು ತಡೆಯುವುದು ಇದರ ಉದ್ದೇಶ.
CAMDOM ಆ್ಯಪ್ ಬಳಸಿ ಬಳಕೆದಾರರು ತಮ್ಮ ಸ್ಮಾರ್ಟ್ಫೋನ್ನ ಕ್ಯಾಮೆರಾ ಮತ್ತು ಮೈಕ್ರೋಫೋನ್ ಅನ್ನು ಬ್ಲೂಟೂತ್ ಮೂಲಕ ನಿರ್ಬಂಧಿಸಬಹುದು. ಇದರಿಂದಾಗಿ ಯಾವುದೇ ಒಪ್ಪಿಗೆಯಿಲ್ಲದ ವೀಡಿಯೊ ಅಥವಾ ಆಡಿಯೊ ರೆಕಾರ್ಡಿಂಗ್ ಅನ್ನು ತಡೆಯಬಹುದು ಎಂದು ಡೆವಲಪರ್ ಹೇಳುತ್ತಾರೆ.
ಹೇಗೆ ಕೆಲಸ ಮಾಡುತ್ತೆ?
ಸುರಕ್ಷತೆಗಾಗಿಯೇ ಈ ಆ್ಯಪ್ ಡೆವಲಪ್ ಮಾಡಲಾಗಿದೆ. ಸ್ಮಾರ್ಟ್ಫೋನ್ ಬ್ಲಾಕ್ ಮಾಡಿ ಅನುಮತಿ ಅಥವಾ ಒಪ್ಪಿಗೆ ಇಲ್ಲದೆ ವಿಡಿಯೋ ರೆಕಾರ್ಡಿಂಗ್ ಮಾಡುವುದನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತದೆ. ಬಳಕೆದಾರರು ತಮ್ಮ ಸಂಗಾತಿಯ ಸ್ಮಾರ್ಟ್ಫೋನ್ ಬಳಿಯೇ ತಮ್ಮ ಫೋನ್ ಇರಿಸಿ ವರ್ಚುವಲ್ ಬಟನ್ ಸ್ವೈಪ್ ಮಾಡಬೇಕಾಗುತ್ತದೆ. ಹೀಗೆ ಮಾಡುವುದರಿಂದ ಕೋಣೆಯಲ್ಲಿರುವ ಎಲ್ಲಾ ಕ್ಯಾಮೆರಾ ಮತ್ತು ಮೈಕ್ರೋಫೋನ್ಗಳು ಬಂದ್ ಆಗಲಿವೆ. ಇಷ್ಟೇ ಅಲ್ಲ, ಇಬ್ಬರಲ್ಲಿ ಯಾರೇ ಹೇಳದೇ ಹೊರಡುತ್ತಿದ್ದರೆ ಅಲಾರಾಂ ಆಗುವ ಮೂಲಕ ನಿಮ್ಮನ್ನು ಎಚ್ಚರಿಸುವ ಕೆಲಸವನ್ನು ಮಾಡುತ್ತದೆ.
ಈ CAMDOM ಆ್ಯಪ್ ಸಕ್ರಿಯವಾಗಿ ಯಾವುದೇ ಅಡೆತಡೆಯಿಲ್ಲದೆ ಕೆಲಸ ಮಾಡಬೇಕಾದರೆ ನಿಮ್ಮ ಫೋನ್ನನ್ನು ಸಂಗಾತಿ ಫೋನ್ ಪಕ್ಕದಲ್ಲಿಯೇ ಇರಿಸಬೇಕು. ಮೊಬೈಲ್ ಅಲ್ಲದೆ ಕೋಣೆಯಲ್ಲಿ ರಹಸ್ಯ ಕ್ಯಾಮೆರಾ ಇರಿಸಿದ್ದರೂ ಅದನ್ನು ಆಫ್ ಮಾಡುವಲ್ಲಿ CAMDOM ಆ್ಯಪ್ ಯಶಸ್ವಿಯಾಗುತ್ತದೆ. ಅಪಾಯದ ಸಂದರ್ಭದಲ್ಲಿಯೂ ಅಲಾರಾಂ ಮೂಲಕ ನಿಮ್ಮನ್ನು ರಕ್ಷಣೆ ಮಾಡುತ್ತದೆ.
CAMDOM ಆ್ಯಪ್ ಡೆವಲಪರ್ ಆಗಿರುವ ಫಿಲಿಪ್ ಅಲ್ಮೀದಾ (Felipe Almeida) ಕೆಲವು ಮಾಹಿತಿಯನ್ನು ಸಹ ನೀಡಿದ್ದಾರೆ. ಈ ಆ್ಯಪ್ನಲ್ಲಿ ದಾಖಲಾಗುವ ಎಲ್ಲಾ ಡೇಟಾ ಗೌಪ್ಯವಾಗಿರಿಸಲಾಗುತ್ತದೆ ಮತ್ತು ಸುರಕ್ಷಿತವಾಗಿರುತ್ತದೆ ಎಂಬ ಭರವಸೆಯನ್ನು ನೀಡಿದ್ದಾರೆ.
Billy Boy ಮತ್ತು Innocean Berlin ಜಂಟಿಯಾಗಿ CAMDOM ಆ್ಯಪ್ ರಚಿಸಲಾಗಿದೆ. ಇಂದಿನ ಕಾಲದಲ್ಲಿ ಖಾಸಗಿ ಫೋಟೋ ಮತ್ತು ದೃಶ್ಯಗಳನ್ನು ರಹಸ್ಯವಾಗಿ ಚಿತ್ರೀಕರಿಸಿ ನಂತರ ಬ್ಲ್ಯಾಕ್ಮೇಲ್ ಮಾಡುವ ಪ್ರಕರಣಗಳು ಹೆಚ್ಚು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಸುರಕ್ಷತೆಗಾಗಿ CAMDOM ಆ್ಯಪ್ ಡೆವಲಪ್ ಮಾಡಲಾಗಿದೆ. ನಮ್ಮ ಆ್ಯಪ್ ಇಂತಹ ಘಟನೆಗಳನ್ನು ತಡೆಯುವ ಕೆಲಸ ಮಾಡುತ್ತದೆ ಎಂದು ಫಿಲಿಪ್ ಅಲ್ಮೀದಾ (Felipe Almeida) ಹೇಳುತ್ತಾರೆ.
ಇದು ಏಕಕಾಲದಲ್ಲಿ ಹಲವು ಡಿವೈಸ್ಗಳನ್ನು ಬ್ಲಾಕ್ ಮಾಡುವ ಸಾಮರ್ಥ್ಯ ಹೊಂದಿದೆ. ನೀವು ಒಂದಕ್ಕಿಂತ ಹೆಚ್ಚು ಫೋನ್ಗಳನ್ನು ಹೊಂದಿದ್ದರೂ ರಕ್ಷಣೆ ನೀಡುತ್ತದೆ. ಈ ಅಪ್ಲಿಕೇಶನ್ ಅನ್ನು ವಿಶೇಷವಾಗಿ ಲೈಂಗಿಕ ಸುರಕ್ಷತೆ ಜಾಗೃತ ಡಿಜಿಟಲ್ ಪೀಳಿಗೆಗಾಗಿ ವಿನ್ಯಾಸಗೊಳಿಸಲಾಗಿದೆ. ಇದರಿಂದ ಅವರ ಗೌಪ್ಯತೆಯನ್ನು ರಕ್ಷಿಸಬಹುದು ಎಂದು ಆ್ಯಪ್ ಡೆವಲಪರ್ ಹೇಳಿದ್ದಾರೆ.
ಜನರಿಗೆ ಲೈಂಗಿಕತೆಯೂ ಈಗ ಆದ್ಯತೆಯ ವಿಚಾರವಾಗುತ್ತಿದೆಯಂತೆ…! ಯಾಕೆ ಹೀಗೆ?