newsics.com
ಹಣ, ಬಡತನದಿಂದ ಬಸವಳಿದ ಇಂಡೋನೇಷ್ಯಾ ಯುವತಿಯರು ಹಣದಾಸೆಗಾಗಿ ಪುರುಷ ಪ್ರವಾಸಿಗರ ಕೈಹಿಡಿಯುತ್ತಿದ್ದಾರೆ. ಪ್ರವಾಸಿಗರ ಬಗ್ಗೆ ಯಾವೊಂದು ಮಾಹಿತಿ ಇಲ್ಲದೆ ಈ ಹಳ್ಳಿಯ ಯುವತಿಯರು ವಿವಾಹವಾಗುತ್ತಿದ್ದು, ಇಲ್ಲಿಗೆ ಬರುವ ಪುರುಷ ಪ್ರವಾಸಿಗರು ಕೂಡ ಪ್ಲೆಷರ್ ವಿವಾಹದ ಲಾಭ ಪಡೆದುಕೊಳ್ಳುತ್ತಿದ್ದಾರೆ.
ಇಂಡೋನೇಷ್ಯಾದ ಕಡಿಮೆ ಆದಾಯ ಹೊಂದಿರುವ ಕುಟುಂಬಗಳ ಯುವತಿಯರು ಬಡತನ ಹಾಗೂ ಆರ್ಥಿಕ ಸಂಕಷ್ಟದಿಂದಾಗಿ ಪ್ರವಾಸಿ ಪುರುಷರೊಂದಿಗೆ ದಿಢೀರ್ ವಿವಾಹವಾಗುತ್ತಿದ್ದಾರೆ. ಅಷ್ಟೇ ಬೇಗ ಅಂದರೆ ಪ್ರವಾಸಿಗರು ಹೊರಟಾಕ್ಷಣ ವಿಚ್ಛೇದನವೂ ಆಗುತ್ತಿದೆ. ಈ ಮೂಲಕ ಶೋಷಣೆಗೂ ಒಳಗಾಗುತ್ತಿದ್ದಾರೆ.
ಆನಂದಕರ (ಪ್ಲೆಶರ್) ವಿವಾಹವೆಂದು ಕರೆಯಲಾದ ಈ ರೀತಿಯ ವಿವಾಹಗಳು ದೇಶದಲ್ಲಿ ಅತಿ ಹೆಚ್ಚಾಗಿ ನಡೆಯುತ್ತಿದ್ದು, ಪ್ರವಾಸೋದ್ಯಮ ಹಾಗೂ ಸ್ಥಳೀಯ ಅರ್ಥಿಕತೆ ಎರಡಕ್ಕೂ ಲಾಭಕರವಾಗಿದೆ. ಆದರೆ ಮಹಿಳೆಯರ ಶೋಷಣೆ ಹೆಚ್ಚುತ್ತಿದೆ.
ಇಂಡೋನೇಷ್ಯಾದ ಪುಂಕಾಕ್ ಹಳ್ಳಿಯಲ್ಲಿ ಪ್ರವಾಸಿಗರನ್ನು ಅಲ್ಲಿನ ಯುವತಿಯರು ಮದುವೆ ಮಾಡಿಕೊಳ್ಳುತ್ತಿದ್ದು ಇಲ್ಲವೇ ಅವರನ್ನು ಮದುವೆ ಮಾಡಿಕೊಳ್ಳಲು ಪ್ರೇರೇಪಿಸುತ್ತಿದ್ದು, ಇದೀಗ ಸಾಮಾಜಿಕ ತಾಣದಲ್ಲೂ ಇಂತಹ ವಿವಾಹಗಳ ಬಗ್ಗೆ ಭಾರೀ ಟೀಕೆ ಕೇಳಿಬಂದಿದೆ.
ಆನಂದದ ಮದುವೆ ಎಂದೇ ಕರೆಸಿಕೊಂಡಿರುವ ಶೀಘ್ರ ವಿವಾಹಗಳು ಪುರುಷ ಪ್ರವಾಸಿ ಹಾಗೂ ಇಂಡೋನೇಷ್ಯಾದ ಬಡ ಕುಟುಂಬಗಳ ಹೆಣ್ಣು ಮಕ್ಕಳ ನಡುವೆ ನಡೆಯುವ ಅಲ್ಪಾವಧಿ ವಿವಾಹವಾಗಿದೆ. ಇಲ್ಲಿ ಮದುವೆ ನಡೆಯುವುದೇ ಹಣದ ಉದ್ದೇಶಕ್ಕಾಗಿ ಎಂಬುದು ಇನ್ನೊಂದು ಸೋಜಿಗದ ವಿಷಯ.
ಲಾಸ್ ಏಂಜಲೀಸ್ ಟೈಮ್ಸ್ ಪ್ರಕಾರ, ಅರಬ್ ಪ್ರವಾಸಿಗರನ್ನು ಆಕರ್ಷಿಸುವ ಪಶ್ಚಿಮ ಇಂಡೋನೇಷ್ಯಾದ ಜನಪ್ರಿಯ ತಾಣವಾದ ಪುಂಕಾಕ್ನಲ್ಲಿ ಪ್ರವಾಸೋದ್ಯಮ ಮತ್ತು ಸ್ಥಳೀಯ ಆರ್ಥಿಕತೆಯನ್ನು ಉತ್ತೇಜಿಸುವ ಮೂಲಕ ಈ ವಿವಾಹ ಇದೀಗ ಲಾಭದಾಯಕ ಉದ್ಯಮವಾಗಿ ಹೊರಹೊಮ್ಮಿದೆ.
ಆರಂಭದಲ್ಲಿ ಕುಟುಂಬ ಸದಸ್ಯರು ಅಥವಾ ಸ್ನೇಹಿತರು ಪ್ರವಾಸಿಗರು ಹಾಗೂ ಸ್ಥಳೀಯ ಮಹಿಳೆಯರ ನಡುವೆ ಪರಿಚಯವನ್ನೇರ್ಪಡಿಸುತ್ತಾರೆ. ಈ ವ್ಯವಸ್ಥೆಯಲ್ಲಿ ಪರಿಣಿತಿ ಹೊಂದಿರುವ ಕಂಪನಿಗಳು ಈಗ ತೊಡಗಿಸಿಕೊಂಡಿರುವುದರಿಂದ ಇಂತಹ ವಿವಾಹಗಳು ವ್ಯಾಪಾರವಾಗಿ ಮಾರ್ಪಟ್ಟಿದೆ.
ಕೋಟಾ ಬುಂಗಾ ಎಂಬ ಹೈಲ್ಯಾಂಡ್ ರೆಸಾರ್ಟ್ನಲ್ಲಿರುವ ಏಜೆನ್ಸಿಗಳು ಸ್ಥಳೀಯ ಮಹಿಳೆಯರಿಗೆ ಪ್ರವಾಸಿಗರನ್ನು ಪರಿಚಯಿಸುತ್ತಿವೆ.