newsics.com| ನ್ಯೂಸಿಕ್ಸ್
ಅಯೋಧ್ಯೆ: ಅಯೋಧ್ಯೆ ರಾಮ ಮಂದಿರ(Ram Mandir)ದ ದೇಣಿಗೆ ಲೂಟಿ ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (SIT) ಸಿದ್ಧಪಡಿಸಿರುವ ವರದಿಯು ಸ್ಪೋಟಕ ಮಾಹಿತಿಗಳನ್ನು ಹೊರಹಾಕಿದೆ.
ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಶುಕ್ರವಾರ ದಿಢೀರ್ ರಾಜೀನಾಮೆ ನೀಡಿದ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ಅವರ ಪಾತ್ರದ ಬಗ್ಗೆ ಎಸ್ಐಟಿ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದು, ಇಡೀ ಹಗರಣದಲ್ಲಿ ಇವರ ಆಪ್ತರೇ ಭಾಗಿಯಾಗಿರುವುದು ದೃಢಪಟ್ಟಿದೆ.
40 ದಿನ, 70 ಬಾರಿ ಕಳ್ಳತನ ಚಂಪತ್ ರಾಯ್ಗೆ ತಿಳಿದಿತ್ತೇ?
ಎಸ್ಐಟಿ ಅಧಿಕಾರಿಗಳು ಏಪ್ರಿಲ್ 27 ರಿಂದ ಜೂನ್ 5 ರವರೆಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡಿದಾಗ ಬೆಚ್ಚಿಬೀಳುವ ಸತ್ಯ ಬಯಲಾಗಿದೆ. ದೇಗುಲದ ಹಣ ಎಣಿಸುವ ಸಿಬ್ಬಂದಿ ಕೇವಲ 40 ದಿನಗಳ ಅವಧಿಯಲ್ಲಿ ಬರೋಬ್ಬರಿ 70 ಬಾರಿ ಕಾಣಿಕೆ ಹಣವನ್ನು ಕದ್ದಿದ್ದಾರೆ.
ಈ ಹಿಂದೆಯೇ ಹಣದ ವ್ಯತ್ಯಾಸದ ಬಗ್ಗೆ ಚಂಪತ್ ರಾಯ್ ಅವರಿಗೆ ದೂರುಗಳು ಬಂದಿದ್ದರೂ, ಅವರು ಪೊಲೀಸರಿಗೆ ದೂರು ನೀಡದೆ ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ್ದರು ಎಂದು ವರದಿ ಹೇಳಿದೆ.
ಬಂಧಿತ ಎಂಟು ಆರೋಪಿಗಳೂ ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ಅವರ ನೇರ ಶಿಫಾರಸಿನ ಮೇರೆಗೆ ಬ್ಯಾಕ್ ಗ್ರೌಂಡ್ ವೆರಿಫಿಕೇಶನ್ ಇಲ್ಲದೆ ಕೆಲಸಕ್ಕೆ ಸೇರಿದವರಾಗಿದ್ದಾರೆ.
ಹಗರಣದ ಮುಖ್ಯ ಸೂತ್ರಧಾರಿ ಚಂಪತ್ ರಾಯ್ ಅವರ ಆಪ್ತ ಸಹಾಯಕ ರಾಮ್ ಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್ ಎಂದು ಎಸ್ಐಟಿ ಹೆಸರಿಸಿದೆ.
ದೇಣಿಗೆ ಪೆಟ್ಟಿಗೆಗಳ (ಹುಂಡಿ) ಕೀಲಿಗಳು ಇವರ ಬಳಿಯೇ ಇರುತ್ತಿದ್ದವು. ಯಾರನ್ನು ಕೆಲಸಕ್ಕೆ ತರಬೇಕು, ಯಾರಿಗೆ ಹಣ ಎಣಿಸುವ ಜವಾಬ್ದಾರಿ ನೀಡಬೇಕು ಮತ್ತು ದೇವಸ್ಥಾನದ ಆವರಣದಲ್ಲಿ ಪೊಲೀಸರನ್ನು ಎಲ್ಲಿ ನಿಯೋಜಿಸಬೇಕು ಎಂಬುದನ್ನು ಸ್ವತಃ ಇವರೇ ನಿರ್ಧರಿಸುವಷ್ಟು ಪ್ರಭಾವಶಾಲಿಯಾಗಿದ್ದರು.
ಸಿಸಿಟಿವಿ ಆಫ್ ಮಾಡ್ತಿದ್ದರೂ ಸಿಕ್ಕಿಬಿದ್ದದ್ದು ಹೇಗೆ?
ಆರೋಪಿಗಳಾದ ಟಿನ್ನು ಯಾದವ್, ಮನೀಶ್, ಲವ್ ಕುಶ್ ಮತ್ತು ಅನುಕಲ್ಪ್ ಅವರಿಗೆ ಎಣಿಕೆ ಕೊಠಡಿಯಲ್ಲಿದ್ದ ಸಾಮಾನ್ಯ ಸಿಸಿಟಿವಿ ಕ್ಯಾಮೆರಾಗಳು ಎಲ್ಲೆಲ್ಲಿವೆ ಮತ್ತು ಅವುಗಳ ಕಣ್ಣು ತಪ್ಪಿಸುವ ‘ಬ್ಲೈಂಡ್ ಸ್ಪಾಟ್ಗಳು’ ಯಾವುವು ಎಂಬುದು ಚೆನ್ನಾಗಿ ಗೊತ್ತಿತ್ತು.
ಹಣವನ್ನು ಜೇಬಿಗೆ ಇಳಿಸುವಾಗ ಇವರು ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡುತ್ತಿದ್ದರು ಅಥವಾ ಅದರ ವೀಕ್ಷಣೆಗೆ ಅಡ್ಡಿಪಡಿಸುತ್ತಿದ್ದರು. ಆದರೆ, ತನಿಖಾಧಿಕಾರಿಗಳು ಆ ಕೊಠಡಿಯೊಳಗೆ ಯಾರಿಗೂ ತಿಳಿಯದಂತೆ ಅಳವಡಿಸಿದ್ದ ‘ಗುಪ್ತ ಕಣ್ಗಾವಲು ಕ್ಯಾಮೆರಾ’ (Hidden Spy Camera) ಬಗ್ಗೆ ಆರೋಪಿಗಳಿಗೆ ಸುಳಿವಿರಲಿಲ್ಲ. ಈ ರಹಸ್ಯ ಕ್ಯಾಮೆರಾದಲ್ಲಿ ಇವರು ನಗದು ಕದಿಯುವ ದೃಶ್ಯಗಳು ಡಿಜಿಟಲ್ ಸಾಕ್ಷಿಯಾಗಿ ಸೆರೆಯಾಗಿದ್ದು, ಇಡೀ ಗ್ಯಾಂಗ್ ಜೈಲುಪಾಲಾಗುವಂತೆ ಮಾಡಿದೆ.
ಬಂಧಿತರಲ್ಲಿ ಟಿನ್ನು ಯಾದವ್ ಮತ್ತು ಸುಭಾಷ್ ಟ್ರಸ್ಟ್ನ ನೌಕರರಾದರೆ, ಉಳಿದ ಆರು ಜನ ಎಣಿಕೆಗೆ ಸಹಾಯ ಮಾಡಲು ಬಂದಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ದ ಸಿಬ್ಬಂದಿಯಾಗಿದ್ದಾರೆ. ಸದ್ಯ ಈ ಆರೋಪಗಳ ಕುರಿತು ನ್ಯಾಯಾಲಯದಲ್ಲಿ ಅಂತಿಮ ತೀರ್ಪು ಬರಬೇಕಿದೆ.
Layoffs ಫೋಕ್ಸ್ವ್ಯಾಗನ್ ಕಂಪನಿಯಲ್ಲಿ 1 ಲಕ್ಷ ನೌಕರರ ವಜಾ! 4 ಪ್ರಮುಖ ಕಾರ್ಖಾನೆ ಬಂದ್?
War atmosphere ಇರಾನ್ ದಾಳಿಗೆ ಅಮೆರಿಕ ಪ್ರತಿದಾಳಿ: ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧ ವಾತಾವರಣ
Women living alone ಮದುವೆ ಬಳಿಕವೂ ಒಂಟಿ ಜೀವನ ನಡೆಸುವ ಮಹಿಳೆಯರ ಪ್ರಮಾಣ ಗಣನೀಯ ಹೆಚ್ಚಳ! ಟಾಪ್ 3ನಲ್ಲಿ ಕರ್ನಾಟಕ
Richest CEO Shankh ಈ ವ್ಯಕ್ತಿಯ ದಿನದ ಸಂಬಳ 21 ಕೋಟಿ! ಎಲ್ಲೆಲ್ಲೂ ಈಗ ಇವರದೇ ಚರ್ಚೆ… ಯಾರಿವರು?