newsics. com| ನ್ಯೂಸಿಕ್ಸ್
ಬ್ಯಾಂಕ್ ಗ್ರಾಹಕರು ತಮ್ಮ ಖಾತೆಗಳಲ್ಲಿ ಕನಿಷ್ಠ ಠೇವಣಿಯನ್ನು ಕಾಯ್ದುಕೊಳ್ಳದಿದ್ದಾಗ ಬ್ಯಾಂಕುಗಳು ವಿಧಿಸುವ ದಂಡದ ಮೊತ್ತಕ್ಕೆ ಜಿಎಸ್‌ಟಿ ಅನ್ವಯಿಸುವುದಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಖಾತೆಯಲ್ಲಿ ಕನಿಷ್ಠ ಮೊತ್ತವನ್ನು ನಿರ್ವಹಿಸುವುದು ಬ್ಯಾಂಕ್ ಮತ್ತು ಗ್ರಾಹಕರ ನಡುವಿನ ಒಪ್ಪಂದದ ಒಂದು ನಿಯಮವಾಗಿದ್ದು, ಅದು ತೆರಿಗೆ ವಿಧಿಸಬಹುದಾದ ಯಾವುದೇ ಸೇವಾ ಶುಲ್ಕವಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಖಾತೆಗಳಲ್ಲಿ ಕನಿಷ್ಠ ಸರಾಸರಿ ಠೇವಣಿ ಕಾಯ್ದಿರಿಸದ ಗ್ರಾಹಕರಿಗೆ ವಿಧಿಸುವ ದಂಡಕ್ಕೆ ಜಿಎಸ್‌ಟಿ ಪಾವತಿಸುವಂತೆ ಜಿಎಸ್‌ಟಿ ಮಂಡಳಿ ಜಾರಿ ಮಾಡಿದ್ದ ನೋಟಿಸ್ ರದ್ದು ಕೋರಿ ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಮತ್ತು ಕರ್ನಾಟಕ ಬ್ಯಾಂಕ್ ಪ್ರತ್ಯೇಕವಾಗಿ ಹೈಕೋರ್ಟ್ಗೆ ಅರ್ಜಿಗಳನ್ನು ಸಲ್ಲಿಸಿದ್ದವು. ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣ ಕುಮಾರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ತೆರಿಗೆ ಮಂಡಳಿ ಜಾರಿ ಮಾಡಿದ್ದ ಶೋಕಾಸ್ ನೋಟಿಸ್ಗಳನ್ನು ರದ್ದುಪಡಿಸಿ ಆದೇಶಿಸಿದೆ.
ಬ್ಯಾಂಕ್ ಗ್ರಾಹಕರು ತಮ್ಮ ಖಾತೆಗಳಲ್ಲಿ ಕನಿಷ್ಠ ಸರಾಸರಿ ಠೇವಣಿ ಇಡುವುದನ್ನು ಹಣಕಾಸು ಕಾಯಿದೆ 1994ರ ಅಡಿಯಲ್ಲಿ ಬ್ಯಾಂಕಿಂಗ್ ಸೇವೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ. ಬ್ಯಾಂಕುಗಳು ಈ ಸೌಲಭ್ಯಕ್ಕಾಗಿ ಗ್ರಾಹಕರಿಂದ ಯಾವುದೇ ಹೆಚ್ಚುವರಿ ಸೇವಾ ಶುಲ್ಕವನ್ನು ವಸೂಲಿ ಮಾಡುವುದಿಲ್ಲ. ಹೀಗಿರುವಾಗ ಕೇಂದ್ರ ಸರ್ಕಾರವು ಕಾಲ್ಪನಿಕ ಮೌಲ್ಯವನ್ನು ಸೃಷ್ಟಿಸಿ ಅದಕ್ಕೆ ತೆರಿಗೆ ವಿಧಿಸುವುದು ಕಾನೂನುಬಾಹಿರವಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಖಾತೆಯಲ್ಲಿರುವ ಕನಿಷ್ಠ ಸರಾಸರಿ ಠೇವಣಿಯ ಮೇಲೆ ಗ್ರಾಹಕರಿಗೆ ಸಂಪೂರ್ಣ ನಿಯಂತ್ರಣವಿರುತ್ತದೆ ಮತ್ತು ಅವರು ಯಾವಾಗ ಬೇಕಾದರೂ ಆ ಹಣವನ್ನು ಹಿಂಪಡೆಯುವ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ. ಗ್ರಾಹಕರು ಬ್ಯಾಂಕಿನಲ್ಲಿ ಹಣ ಇಟ್ಟಾಗ ಅದಕ್ಕೆ ಬ್ಯಾಂಕ್ ಬಡ್ಡಿ ನೀಡುತ್ತದೆ. ಒಂದು ವೇಳೆ ಕನಿಷ್ಠ ಠೇವಣಿ ನಿಯಮವನ್ನು ಉಲ್ಲಂಘಿಸಿದರೆ ಮಾತ್ರ ದಂಡ ವಿಧಿಸಲಾಗುತ್ತದೆ. ಈ ದಂಡದ ಮೊತ್ತವು ಕೇವಲ ನಿಯಮ ಉಲ್ಲಂಘನೆಗೆ ವಿಧಿಸುವ ಶಿಕ್ಷೆಯ ಸ್ವರೂಪದ್ದಾಗಿದೆಯೇ ಹೊರತು, ಇದನ್ನು ಬ್ಯಾಂಕಿಗೆ ಸಂದಾಯವಾಗುವ ಲಾಭ ಅಥವಾ ಸೇವಾ ತೆರಿಗೆ ವ್ಯಾಪ್ತಿಯಲ್ಲಿ ಬರುವ ಆದಾಯ ಎಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಪೀಠವು ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ:
ಗ್ರಾಹಕರು ತಮ್ಮ ಖಾತೆಯಲ್ಲಿ ಕನಿಷ್ಠ ಸರಾಸರಿ ಠೇವಣಿ ಕಾಯ್ದರಿಸಿಕೊಳ್ಳಬೇಕಾಗುವುದು ನಿಯಮವಾಗಿದೆ. ಆದರೆ, ಈ ಮೊತ್ತವನ್ನು ಕಾಯ್ದಿರಿಸಿಕೊಳ್ಳದಿದ್ದಲ್ಲಿ ಅಂತಹ ಗ್ರಾಹಕರಿಗೆ ದಂಡ ವಿಧಿಸುತ್ತಿತ್ತು. ಆದರೆ, ಕನಿಷ್ಠ ಮೊತ್ತ ಕಾಯ್ದಿರಿಸದ ಗ್ರಾಹಕರಿಗೆ ವಿಧಿಸುವ ದಂಡಕ್ಕೆ ಜಿಎಸ್‌ಟಿ ಪಾವತಿಸುವಂತೆ ಜಿಎಸ್‌ಟಿ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಅಲ್ಲದೆ, ಈ ಕನಿಷ್ಠ ಮೊತ್ತದಿಂದ ಬ್ಯಾಂಕುಗಳಿಗೆ ದ್ರವ್ಯತೆ (ಲಿಕ್ವಿಡಿಟಿ) ಹಾಗೂ ಲಾಭ ಸಿಗುವುದರಿಂದ, ಇದನ್ನು ಒಪ್ಪಂದದ ಲಾಭ ಎಂದು ಪರಿಗಣಿಸಬೇಕು ಎಂದು ವಾದ ಮಂಡಿಸಿತ್ತು.