newsics.com | ನ್ಯೂಸಿಕ್ಸ್
ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ಉದ್ಯಮಿ ಪುತ್ರ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರಿಗೆ ತನಿಖೆಯ ವೇಳೆ ಹಲವು ಸ್ಫೋಟಕ ಮಾಹಿತಿಗಳು ಲಭ್ಯವಾಗಿವೆ. ನಿಶ್ಚಿತಾರ್ಥ ಮುಗಿದು ಮದುವೆಗೆ ಸಿದ್ಧತೆಗಳು ನಡೆಯುತ್ತಿದ್ದ ಬೆನ್ನಲ್ಲೇ, ಭಾವಿ ಪತ್ನಿ ಸಿಯಾ ಗೊಯೆಲ್ ತನ್ನ ಪ್ರಿಯಕರನೊಂದಿಗೆ ಸೇರಿ ಕೇತನ್‌ನನ್ನು ಪುಣೆಯ ಲೋಹಘಡ ಬೆಟ್ಟದ ಮೇಲಿನಿಂದ ತಳ್ಳಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ, ಸಿಯಾ ಗೊಯೆಲ್ ಹಾಗೂ ಚೇತನ್ ಚೌಧರಿ ನಡುವೆ ಪ್ರೀತಿಯಿತ್ತಾದರೂ ಅದು ಅಷ್ಟೊಂದು ಗಾಢವಾಗಿರಲಿಲ್ಲ. ಸಿಯಾ ಸಹೋದರ ಸಾಹಿಲ್ ಗೊಯೆಲ್ ಒಬ್ಬ ಕ್ರಿಕೆಟಿಗನಾಗಿದ್ದು, ಆತ ಆಡುತ್ತಿದ್ದ ತಂಡದಲ್ಲೇ ಚೇತನ್ ಚೌಧರಿ ಕೂಡ ಆಡುತ್ತಿದ್ದನು. ಸಹೋದರನ ಪಂದ್ಯ ವೀಕ್ಷಿಸಲು ಹೋಗುತ್ತಿದ್ದ ಸಿಯಾಗೆ ಚೇತನ್ ಪರಿಚಯವಾಗಿದ್ದನು. ಇವರಿಬ್ಬರ ಪರಿಚಯಕ್ಕೆ ಸಾಹಿಲ್ ಕಾರಣನಾಗಿದ್ದರಿಂದ ಪ್ರಸ್ತುತ ಪೊಲೀಸರು ಸಾಹಿಲ್‌ನನ್ನು ಸಹ ವಿಚಾರಣೆಗೆ ಒಳಪಡಿಸಿದ್ದಾರೆ.
ಮೊದಲಿಗೆ ಕ್ರಿಕೆಟ್ ಮೂಲಕ ಪರಿಚಯವಾಗಿ ಚಾಟಿಂಗ್ ಆರಂಭಿಸಿದ್ದ ಸಿಯಾ, ಆ ಬಳಿಕ ಚೇತನ್‌ನಿಂದ ದೂರವಾಗಿದ್ದಳು. ಆದರೆ, 2025ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಗೆಳೆಯರೊಬ್ಬರು ಆಯೋಜಿಸಿದ್ದ ಪಾರ್ಟಿಯಲ್ಲಿ ಇವರಿಬ್ಬರು ಮತ್ತೆ ಭೇಟಿಯಾದರು. ಈ ಪಾರ್ಟಿಯ ನಂತರ ಇಬ್ಬರ ನಡುವೆ ಮಾತುಕತೆ ಮತ್ತೆ ಆರಂಭವಾಗಿತ್ತು.
ಕೇತನ್ ಜೊತೆ ಮದುವೆ ಇಷ್ಟವಿಲ್ಲದ ಸಿಯಾ, ಚೇತನ್ ಜೊತೆ ನಿರಂತರ ಸಂಪರ್ಕದಲ್ಲಿದ್ದಳು. ಕೇವಲ ಆರು ತಿಂಗಳ ಅವಧಿಯಲ್ಲಿ (ಜನವರಿಯಿಂದ) ಇವರಿಬ್ಬರು ಬರೋಬ್ಬರಿ 2,004 ಬಾರಿ ಫೋನ್ ಕರೆ ಮಾಡಿ ಮಾತನಾಡಿದ್ದಾರೆ. ಇಬ್ಬರ ಒಟ್ಟು ಮಾತುಕತೆಯ ಅವಧಿ 238 ಗಂಟೆಗಳಾಗಿವೆ ಎಂದು ಮೊಬೈಲ್ ಕರೆ ದಾಖಲೆಗಳಿಂದ (CDR) ತಿಳಿದುಬಂದಿದೆ.
ಜೂನ್ 17 ರಂದು ಪುಣೆಯ ಲುಲ್ಲಾನಗರದಲ್ಲಿರುವ ಕೆಫೆಯೊಂದರಲ್ಲಿ ಸಂಜೆ 4.30 ರಿಂದ 5.30 ರ ಅವಧಿಯಲ್ಲಿ ಸಿಯಾ ಮತ್ತು ಚೇತನ್ ಭೇಟಿಯಾಗಿದ್ದರು. ಈ ಭೇಟಿಯ ವೇಳೆಯಲ್ಲೇ ಕೇತನ್‌ನನ್ನು ಕೊಲ್ಲಲು ಇಬ್ಬರು ಮಾಸ್ಟರ್ ಪ್ಲಾನ್ ಮಾಡಿರಬಹುದು ಎಂದು ಪೊಲೀಸರು ಬಲವಾಗಿ ಶಂಕಿಸಿದ್ದಾರೆ. ಈ ನಿಟ್ಟಿನಲ್ಲಿ ಕೆಫೆಯ ಸಿಸಿಟಿವಿ ದೃಶ್ಯಾವಳಿ ಹಾಗೂ ಇಬ್ಬರ ಚರ್ಚೆಯ ಕುರಿತು ತನಿಖೆ ಚುರುಕುಗೊಂಡಿದೆ.
ಇನ್ನು, ಮಗನನ್ನು ಕಳೆದುಕೊಂಡ ಪುಣೆಯ ಉದ್ಯಮಿ ವಿಶಾಲ್ ಅಗರ್ವಾಲ್ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಮಗನ ಅಗಲಿಕೆಯ ನೋವಿನಿಂದಾಗಿ ಅವರು ಸದ್ಯ ಯಾರ ಫೋನ್ ಕರೆಗಳನ್ನೂ ಸ್ವೀಕರಿಸುತ್ತಿಲ್ಲ, ಯಾರೊಂದಿಗೂ ಮಾತನಾಡುತ್ತಿಲ್ಲ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಅವರ ಕುಟುಂಬ ಆಗ್ರಹಿಸಿದೆ.
ಇತ್ತ ಆರೋಪಿ ಸಿಯಾ ಗೊಯೆಲ್ ಪೋಷಕರು ಸಹ ಮಗಳ ಕೃತ್ಯಕ್ಕೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ. “ನಮ್ಮ ಮಗಳು ತಪ್ಪು ಮಾಡಿದ್ದರೆ ಆಕೆಯನ್ನು ಗಲ್ಲಿಗೇರಿಸಲಿ, ಇಲ್ಲವೇ ಆಕೆ ಕೇತನ್‌ನನ್ನು ತಳ್ಳಿದ ಅದೇ ಕೋಟೆಯ ಮೇಲಿನಿಂದ ತಳ್ಳಿ ಸಾಯಿಸಲಿ” ಎಂದು ಕಠಿಣ ಶಿಕ್ಷೆಗೆ ಒತ್ತಾಯಿಸಿದ್ದಾರೆ.
Layoffs ಫೋಕ್ಸ್‌ವ್ಯಾಗನ್ ಕಂಪನಿಯಲ್ಲಿ 1 ಲಕ್ಷ ನೌಕರರ ವಜಾ! 4 ಪ್ರಮುಖ ಕಾರ್ಖಾನೆ ಬಂದ್?