newsics.com| ನ್ಯೂಸಿಕ್ಸ್
ಜಾಗತಿಕ ಆಟೋಮೊಬೈಲ್(Automobile) ಮಾರುಕಟ್ಟೆಯಲ್ಲಿ ಉಂಟಾಗಿರುವ ತೀವ್ರ ಪೈಪೋಟಿಯನ್ನು ಎದುರಿಸಲು ಯುರೋಪಿನ ದೈತ್ಯ ಕಾರು ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್(Volkswagen) ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲು ಮುಂದಾಗಿದೆ.
ಸಂಸ್ಥೆಯನ್ನು ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಒಂದು ಲಕ್ಷ ಉದ್ಯೋಗಿಗಳನ್ನು(Employees) ಕೆಲಸದಿಂದ ತೆಗೆದುಹಾಕಲು ಮತ್ತು ಹಲವು ಪ್ರಮುಖ ಉತ್ಪಾದನಾ ಘಟಕಗಳನ್ನು ಮುಚ್ಚಲು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಲಿವರ್ ಬ್ಲೂಮ್ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದ್ದಾರೆ ಎಂದು ಜರ್ಮನಿಯ ಮಾಧ್ಯಮಗಳು ವರದಿ ಮಾಡಿವೆ.
ಕಳೆದ ವಾರ ನಡೆದ ಉನ್ನತ ಮಟ್ಟದ ಆಡಳಿತ ಮಂಡಳಿ ಸಭೆಯಲ್ಲಿ ಸಿಇಒ ಆಲಿವರ್ ಬ್ಲೂಮ್ ಅವರು ವೆಚ್ಚ ನಿಯಂತ್ರಣದ ಹೊಸ ನೀತಿಯನ್ನು ಮಂಡಿಸಿದ್ದಾರೆ. ಇದರ ಪ್ರಕಾರ, ಈ ಹಿಂದೆ ಅಂದಾಜಿಸಲಾಗಿದ್ದ ಸಿಬ್ಬಂದಿ ಕಡಿತದ ಪ್ರಮಾಣವನ್ನು ದ್ವಿಗುಣಗೊಳಿಸಲಾಗುತ್ತಿದ್ದು, ಸುಮಾರು ಒಂದು ಲಕ್ಷ ನೌಕರರನ್ನು ಕೆಲಸದಿಂದ ವಜಾಗೊಳಿಸಲು ಸಿದ್ಧತೆ ನಡೆಸಲಾಗಿದೆ. ಪ್ರಸ್ತುತ ಪೋರ್ಷೆ ಮತ್ತು ಆಡಿ ಸೇರಿದಂತೆ ಹಲವು ಪ್ರಮುಖ ಬ್ರ್ಯಾಂಡ್‌ಗಳನ್ನು ಒಳಗೊಂಡಿರುವ ವೋಕ್ಸ್‌ವ್ಯಾಗನ್ ಸಮೂಹದಲ್ಲಿ ವಿಶ್ವಾದ್ಯಂತ 6,57,000 ಜನರು ಕೆಲಸ ಮಾಡುತ್ತಿದ್ದು, ಇದರಲ್ಲಿ ಶೇಕಡಾ ಹದಿನೈದಕ್ಕಿಂತ ಹೆಚ್ಚು ಉದ್ಯೋಗಿಗಳಿಗೆ ಕಡಿತದ ಬಿಸಿ ತಟ್ಟುವ ಸಾಧ್ಯತೆ ಇದೆ.
ವೆಚ್ಚ ಕಡಿತದ ಭಾಗವಾಗಿ 2030ರ ವೇಳೆಗೆ 11 ಬಿಲಿಯನ್ ಯುರೋಗಳಷ್ಟು ಓವರ್‌ಹೆಡ್ ವೆಚ್ಚವನ್ನು ಉಳಿಸುವ ಗುರಿಯನ್ನು ಕಂಪನಿ ಹೊಂದಿದೆ. ಇದಕ್ಕಾಗಿ ಜರ್ಮನಿಯಲ್ಲೇ ಇರುವ ಆಡಿ ತಾಣದ ನೆಕ್ಕರ್‌ಸಲ್ಮ್ ಘಟಕ, ಹ್ಯಾನೋವರ್, ಜ್ವಿಕೌ ಮತ್ತು ಎಮ್ಡೆನ್‌ನಲ್ಲಿರುವ ಫೋಕ್ಸ್‌ವ್ಯಾಗನ್‌ನ ನಾಲ್ಕು ಪ್ರಮುಖ ಕಾರು ಉತ್ಪಾದನಾ ಘಟಕಗಳಿಗೆ ಬೀಗ ಹಾಕಲು ಚಿಂತನೆ ನಡೆಸಲಾಗಿದೆ. ಇದರೊಂದಿಗೆ, ಕಡಿಮೆ ಲಾಭ ತರುತ್ತಿರುವ ಮುಖ್ಯ ಫೋಕ್ಸ್‌ವ್ಯಾಗನ್ ಬ್ರ್ಯಾಂಡ್ ಅನ್ನು ಇಡೀ ಗ್ರೂಪ್‌ನಿಂದ ಪ್ರತ್ಯೇಕಿಸಿ ಸಂಸ್ಥೆಯನ್ನು ಇನ್ನಷ್ಟು ಚುರುಕುಗೊಳಿಸಲು ಸಿಇಒ ಯೋಜಿಸುತ್ತಿದ್ದಾರೆ.
ವಿಶ್ವದ ಅತಿ ದೊಡ್ಡ ಆಟೋ ಮಾರುಕಟ್ಟೆಯಾದ ಚೀನಾದಲ್ಲಿ ಫೋಕ್ಸ್‌ವ್ಯಾಗನ್ ಕಾರುಗಳ ಮಾರಾಟ ಕುಸಿದಿರುವುದು ಕಂಪನಿಗೆ ದೊಡ್ಡ ಹಿನ್ನಡೆಯಾಗಿದೆ. ಚೀನಾದ ಬಿವೈಡಿ ಮತ್ತು ಯುರೋಪಿನ ಸ್ಟೆಲ್ಲಾಂಟಿಸ್‌ನಂತಹ ಇವಿ ಮಾರುಕಟ್ಟೆಯ ದೈತ್ಯ ಕಂಪನಿಗಳಿಂದ ಫೋಕ್ಸ್‌ವ್ಯಾಗನ್ ಕಠಿಣ ಸವಾಲು ಎದುರಿಸುತ್ತಿದೆ. ಮತ್ತೊಂದೆಡೆ ಅಮೆರಿಕ ವಿಧಿಸುತ್ತಿರುವ ಹೊಸ ಆಮದು ಸುಂಕಗಳು ಜರ್ಮನ್ ಕಾರುಗಳ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರಿವೆ. ಪರಿಸ್ಥಿತಿಯನ್ನು ನಿಭಾಯಿಸಲು ಕಂಪನಿಯು ಈಗಾಗಲೇ ತನ್ನ ವಾರ್ಷಿಕ ಉತ್ಪಾದನಾ ಸಾಮರ್ಥ್ಯವನ್ನು 12 ಮಿಲಿಯನ್ ವಾಹನಗಳಿಂದ 9 ಮಿಲಿಯನ್‌ಗೆ ತಗ್ಗಿಸಿದೆ.
ಇನ್ನು, ಸಿಇಒ ಅವರ ಈ ಪರಿಷ್ಕೃತ ಯೋಜನೆಯನ್ನು ಮುಂದಿನ ತಿಂಗಳು ಮೇಲ್ವಿಚಾರಣಾ ಮಂಡಳಿಯ ಮುಂದೆ ಮಂಡಿಸಲಾಗುತ್ತಿದ್ದು, ಇದಕ್ಕೆ ಕಾರ್ಮಿಕ ಸಂಘಟನೆಗಳಿಂದ ಉಗ್ರ ಪ್ರತಿಭಟನೆಯ ಎಚ್ಚರಿಕೆ ವ್ಯಕ್ತವಾಗಿದೆ. ಈ ನಿರ್ಧಾರಗಳು ಒಟ್ಟಾರೆ ಕಾರ್ಯಪಡೆಯನ್ನು ಅಸ್ಥಿರಗೊಳಿಸಲಿದ್ದು, ಹಠ ಹಿಡಿದು ಜಾರಿಗೊಳಿಸಲು ಮುಂದಾದರೆ ಸಂಪೂರ್ಣ ಶಕ್ತಿ ಬಳಸಿ ಪ್ರತಿರೋಧಿಸುವುದಾಗಿ ಕಾರ್ಮಿಕ ಮಂಡಳಿ ಮತ್ತು ಐಜಿ ಮೆಟಾಲ್ ಒಕ್ಕೂಟ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ. ಕಂಪನಿಯ ಮೇಲ್ವಿಚಾರಣಾ ಮಂಡಳಿಯಲ್ಲಿ ಅರ್ಧದಷ್ಟು ಸ್ಥಾನಗಳು ಕಾರ್ಮಿಕ ಪ್ರತಿನಿಧಿಗಳದ್ದೇ ಆಗಿರುವುದರಿಂದ, ಮುಂದಿನ ದಿನಗಳಲ್ಲಿ ಕಂಪನಿ ಮತ್ತು ಕಾರ್ಮಿಕ ಸಂಘಟನೆಗಳ ನಡುವೆ ದೊಡ್ಡ ಮಟ್ಟದ ಸಂಘರ್ಷ ಏರ್ಪಡುವ ಲಕ್ಷಣಗಳು ಕಾಣಿಸುತ್ತಿವೆ.
ಅಮೆಜಾನ್ ಉದ್ಯೋಗಿಯ ಭಾವನಾತ್ಮಕ ಕ್ಷಣ: ಪೋಷಕರಿಗೆ ಕಚೇರಿ ತೋರಿಸಿ ಕನಸು ನನಸು