newsics.com
ಚೆನ್ನೈ: ಮೈಸೂರು ದರ್ಭಾಂಗ ಬಾಗ್ಮತಿ ಎಕ್ಸ್ಪ್ರೆಸ್ ರೈಲು ತಮಿಳುನಾಡಿನ ತಿರುವಳ್ಳುವರ್ ಗುಮ್ಮುಡಿಪೂಂಡಿಯಲ್ಲಿ ಶುಕ್ರವಾರ ರಾತ್ರಿ 8.30ರ ಸಮಯದಲ್ಲಿ ಗೂಡ್ಸ್ ರೈಲಿಗೆ ಗುದ್ದಿದ ಪರಿಣಾಮ 13 ರೈಲು ಬೋಗಿಗಳು ಹಳಿ ತಪ್ಪಿದ್ದು, ಮೂರು ಬೋಗಿಗಳು ಸಂಪೂರ್ಣವಾಗಿ ಸುಟ್ಟಿವೆ.
ಕವರಪೆಟ್ಟೈ ಎಂಬ ಸ್ಥಳದಲ್ಲಿ ಈ ದುರ್ಘಟನೆ ನಡೆದಿದ್ದು, ಅಪಘಾತಕ್ಕೀಡಾಗುವ ವೇಳೆ ರೈಲು ಗಂಟೆಗೆ 75 ಕಿ.ಮೀ. ವೇಗದಲ್ಲಿ ಚಲಿಸುತ್ತಿತ್ತು ಎಂದು ದಕ್ಷಿಣ ರೈಲ್ವೆ ತಿಳಿಸಿದೆ.
ತಮಿಳುನಾಡು ಸರ್ಕಾರದ ಮಾಹಿತಿಯಂತೆ, 20ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದ್ದು, ಇದರಲ್ಲಿ 14 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನೆಲ್ಲ ಚೆನ್ನೈನ ಸ್ಟಾನ್ಲಿ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ. ಸಣ್ಣ ಪುಟ್ಟ ಗಾಯವಾದವರನ್ನು ಪೊನ್ನೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರ, ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಸ್ಥಳೀಯರು ಕೂಡ ಸಹಾಯಹಸ್ತ ಚಾಚಿದ್ದು, ನೀರು, ಆಹಾರ ಪೂರೈಕೆ ಮಾಡುತ್ತಿದ್ದಾರೆ. ಉಳಿದುಕೊಳ್ಳಲು ಸಹಾಯ ಮಾಡುತ್ತಿದ್ದಾರೆ. ಸುಮಾರು 45ಕ್ಕೂ ಹೆಚ್ಚು ಕನ್ನಡಿಗರು ಈ ಘಟನೆಯಲ್ಲಿ ಸಿಲುಕಿದ್ದಾರೆಂದು ವರದಿ ತಿಳಿಸಿದೆ.
ದೆಹಲಿಯ ರೈಲ್ವೆ ವಾರ್ ರೂಂನಿಂದ ತಮಿಳುನಾಡು ರೈಲು ಅಪಘಾತದ ನಂತರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಪರಿಸ್ಥಿತಿಯ ಮಾಹಿತಿ ಪಡೆದುಕೊಂಡಿದ್ದಾರೆ. ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ಕಳೆದೊಯ್ಯವಂತೆ ಸಂಬಂಧಿಸಿದವರಿಗೆ ಮಾಹಿತಿ ನೀಡಿದ್ದಾರೆ.
ರೈಲು ದುರಂತದ ಪರಿಣಾಮ ತಿರುಚಿರಾಪಳ್ಳಿ-ಹೌರಾ ಎಕ್ಸ್ಪ್ರೆಸ್, ಎರ್ನಾಕುಲಂ-ಟಾಟಾನಗರ ಎಕ್ಸ್ಪ್ರೆಸ್, ಮತ್ತು ಕಾಕಿನಾಡ-ಧನ್ಬಾದ್ ವಿಶೇಷ ಎಕ್ಸ್ಪ್ರೆಸ್ ರೈಲು ಸಂಚಾರಕ್ಕೆ ಅಡ್ಡಿಯಾಗಿದ್ದು, ಈ ರೈಲುಗಳ ಮಾರ್ಗಗಳ ಬದಲಾವಣೆಯಾಗುವ ಸಾಧ್ಯತೆ ಇದೆ.
ಮೈಸೂರಿನಿಂದ ಹೊರಡುವ ಬಿಹಾರದ ದರ್ಭಾಂಗ 8 ರಾಜ್ಯಗಳನ್ನು ಹಾದು ಹೋಗುವ ರೈಲು ಇದಾಗಿದೆ. ಸುಮಾರು 1360 ಪ್ರಯಾಣಿಕರು ಇದರಲ್ಲಿ ಪ್ರಯಾಣಿಸುತ್ತಿದ್ದರು ಎಂದು
ತಿರುವಳ್ಳೂರು ಜಿಲ್ಲಾಧಿಕಾರಿ ಡಾ.ಟಿ.ಪ್ರಭುಶಂಕರ್ ಮಾಹಿತಿ ನೀಡಿದ್ದಾರೆ. ಸಿಗ್ನಲ್ ಸಮಸ್ಯೆಯೇ ಅಪಘಾತಕ್ಕೆ ಕಾರಣ ಎಂದು ಶಂಕಿಸಲಾಗಿದೆ.
ಮೈಸೂರಿನಿಂದ ಬೆಳಗ್ಗೆ 10.30ರ ಸಮಯದಲ್ಲಿ ಈ ರೈಲು ಹೊರಟಿತ್ತು. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ ಮೂಲಕ ಬಿಹಾರ ತಲುಪಲಿದೆ. ಈ ರೈಲು 3035 ಕಿಮೀ ಪ್ರಯಾಣ ಮಾಡಲಿದೆ. ಲೂಪ್ ಲೈನ್ನಲ್ಲಿ ಟ್ರೈನ್ ಹೋಗಿದ್ದೇ ಈ ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಮೈಸೂರು- ದರ್ಭಾಂಗ್ ರೈಲು ಡಿಕ್ಕಿ: ಎರಡು ಬೋಗಿಗೆ ಬೆಂಕಿ, ಹಲವರಿಗೆ ಗಾಯ, ವಿಡಿಯೋ ನೋಡಿ
ರಾಜ್ಯದ ಪಿಜಿ, ಹಾಸ್ಟೆಲ್ಗಳಲ್ಲಿರುವವರಲ್ಲಿ ಎಚ್ಐವಿ ಸೋಂಕು, ಹೆಚ್ಚಿದ ಆತಂಕ
‘ಬಯಕೆ’ ಈಡೇರಿಕೆಗೆ ಮಹಿಳೆಯರಿಗೆ ರೋಬೋಟ್ಗಳೇ ಹೆಚ್ಚು ಇಷ್ಟವಂತೆ! ಸಡಿಲವಾಗಲಿದ್ಯಾ ಮಹಿಳೆ- ಪುರುಷರ ನಡುವಿನ ಬಂಧ?
ಕನ್ನಡ ರಾಜ್ಯೋತ್ಸವ ಆಚರಣೆ ಕಡ್ಡಾಯಗೊಳಿಸಿದ ಸರ್ಕಾರ, ಖಾಸಗಿ ಕಂಪನಿಗಳಿಗೂ ಅನ್ವಯ