newsics.com
ಬೆಂಗಳೂರು: ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಎಲ್ಲೆಡೆ ಕಡ್ಡಾಯವಾಗಿ ಆಚರಿಸಬೇಕೆಂದು ರಾಜ್ಯ ಸರ್ಕಾರ ಆದೇಶಿಸಿದೆ.
ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಖಡಕ್ ಸೂಚನೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನವೆಂಬರ್ 1ರಂದು ಎಲ್ಲ ಶಾಲಾ, ಕಾಲೇಜುಗಳು, ಕಾರ್ಖಾನೆಗಳು ಮತ್ತು ಐಟಿಬಿಟಿ ಕಂಪನಿಗಳಲ್ಲಿ ಕನ್ನಡ ಬಾವುಟವನ್ನು ಕಡ್ಡಾಯವಾಗಿ ಹಾರಿಸಲೇಬೇಕು ಎಂದು ಸೂಚಿಸಿದ್ದಾರೆ.
ನವೆಂಬರ್ 1 ಎಂದರೆ ನಮ್ಮ ಕರ್ನಾಟಕಕ್ಕೆ ಬಹಳ ಹೆಮ್ಮೆಯ ದಿನ. ಅಂದು ನಮ್ಮ ನೆಲದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುವ ದಿನ. ಹಾಗಾಗಿ ಎಲ್ಲ ಕಂಪನಿಗಳು ಹಾಗೂ ಶಿಕ್ಷಣ ಸಂಸ್ಥೆಗಳು ಕನ್ನಡದ ಧ್ವಜಾರೋಹಣ ಮಾಡಬೇಕು. ಈ ಬಗ್ಗೆ ಶೀಘ್ರ ಅಧಿಕೃತ ಆದೇಶ ಕೂಡ ಹೊರಡಿಸಲಾಗುವುದು ಎಂದಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಶೇ.50ರಷ್ಟು ಮಂದಿ ಹೊರಗಿನವರೇ ಇದ್ದಾರೆ. ಅವರು ಕೂಡ ನಮ್ಮ ಕನ್ನಡವನ್ನು ಕಲಿತುಕೊಳ್ಳಬೇಕು. ಆ ದಿನ ಕನ್ನಡಕ್ಕೆ ಸಂಬಂಧಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಆಯೋಜಿಸಬೇಕು. ನಮ್ಮ ರಾಷ್ಟ್ರಧ್ವಜದ ರೀತಿಯಲ್ಲೇ ಕನ್ನಡದ ಬಾವುಟಕ್ಕೂ ಗೌರವ ಕೊಡಬೇಕು. ಈ ಮೂಲಕ ಕನ್ನಡಕ್ಕೆ ಶ್ರದ್ಧೆ ಹಾಗೂ ಗೌರವ ತೋರಬೇಕು ಎಂದು ಶಿವಕುಮಾರ್ ತಾಕೀತು ಮಾಡಿದ್ದಾರೆ.