newsics.com
ಬೆಂಗಳೂರು: ಇತ್ತೀಚೆಗೆ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ಗಳಲ್ಲಿ ನಿರ್ವಾಹಕರು ಹಾಗೂ ಚಾಲಕರು ರೀಲ್ಸ್ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ರೀಲ್ಸ್ ಮಾಡುವ ಸಿಬ್ಬಂದಿಗೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕರ್ತವ್ಯದ ವೇಳೆ ಕರ್ನಾಟಕ ಸಾರಿಗೆ ಇಲಾಖೆಯ ಚಾಲಕರು ಮತ್ತು ನಿರ್ವಾಹಕರು ರೀಲ್ಸ್ ಮಾಡಿದರೆ ಅವರನ್ನು ಮುಲಾಜಿಲ್ಲದೇ ಅಮಾನತು ಮಾಡಲಾಗುವುದು. ರೀಲ್ಸ್ ಮಾಡಿದವರು ಕರ್ನಾಟಕ ಸಾರಿಗೆ ಇಲಾಖೆಯಲ್ಲಿ ಇರಲು ಲಾಯಕ್ಕಲ್ಲ ಎಂದು ಹೇಳಿದ್ದಾರೆ.
ಮೇನಲ್ಲಿ ಚಾಲಕ ಕೊಡೆ ಹಿಡಿದುಕೊಂಡು ಬಸ್ ಓಡಿಸುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಮತ್ತೊಂದು ಪ್ರಕರಣದಲ್ಲಿ ಬಾಗಲಕೋಟೆ ಮಾರ್ಗದಲ್ಲಿ ಬಸ್ ಚಾಲಕ ರೀಲ್ಸ್ ಮಾಡುವಾಗ ಹಿಂಬದಿಯಿಂದ ಎತ್ತಿನ ಗಾಡಿಗೆ ಡಿಕ್ಕಿ ಹೊಡೆದಿದ್ದರು. ಪರಿಣಾಮ ಎರಡು ಎತ್ತುಗಳು ಸ್ಥಳದಲ್ಲೇ ಸಾವನ್ನಪ್ಪಿದ್ದವು. ರೈತ ಮಂಜುನಾಥ್ ರಂಗಪ್ಪ ಎಂಬುವರ ಮೆದುಳು ನಿಷ್ಕ್ರಿಯಗೊಂಡಿತ್ತು. ಇದಲ್ಲದೇ ಬಸ್ಗಳ ವೇಗದ ಚಾಲನೆ ವೀಡಿಯೋ ಮಾಡುವುದು, ಓವರ್ಟೇಕ್ ಮಾಡುವ, ಇತರ ಬಸ್ಗಳನ್ನು ಪ್ರತಿಸ್ಪರ್ಧಿಗಳಂತೆ ಕಂಡು ಅವುಗಳನ್ನು ಹಿಂದಿಕ್ಕುವ ವೀಡಿಯೋ ಮಾಡುವ ಮೊದಲಾದ ಅಪಾಯಕಾರಿ ಚಾಲನೆಗೆ ಕಡಿವಾಣ ಹಾಕಲು ಸಾರಿಗೆ ಇಲಾಖೆ ಈ ಕ್ರಮ ಕೈಗೊಂಡಿದೆ.
ಕೇರಳದಲ್ಲಿ ನಿಫಾಗೆ ಬಾಲಕ ಬಲಿ: ಹೃದಯಸ್ತಂಭನದಿಂದ ಸಾವು, ಹೆಚ್ಚಿದ ಆತಂಕ