newsics.com
ಹೆಚ್.ಡಿ.ಕೋಟೆ: ಡಿ.ಕೆ.ಶಿವಕುಮಾರ್ ಹಾಗು ನನ್ನ ನಡುವೆ ಒಡಕು ಉಂಟುಮಾಡುವ ಪ್ರಯತ್ನವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಹಾಗಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಾರೆ. ಇದರಿಂದ ರಾಜಕೀಯ ಲಾಭವಾಗಬಹುದೆಂಬ ಭ್ರಮೆ ಅವರಿಗಿದೆ. ಇದು ಸದಾ ಭ್ರಮೆಯಾಗಿಯೇ ಇರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಭಾನುವಾರ ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶನಿವಾರ ಮೈಸೂರಿನಲ್ಲಿ ನಡೆದ ಸರ್ಕಾರದ ಸಾಧನಾ ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ನಾನು ಅವಮಾನಿಸಿಲ್ಲ. ಕಾರ್ಯಕ್ರಮದಲ್ಲಿ ಇರುವವರಿಗೆ ಸ್ವಾಗತ ಮಾಡುವುದು ಪರಿಪಾಠ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಾರ್ಯಕ್ರಮಕ್ಕೆ ಬಂದು ನಂತರ ದೆಹಲಿಯಲ್ಲಿ ಅರ್ಜೆಂಟ್ ಕೆಲಸವಿದೆ ಎಂದು ಹೇಳಿ ಹೋದರು. ನಾನು ಮಾತನಾಡುವ ಆ ವೇಳೆಯಲ್ಲಿ ಅವರು ಇರಲಿಲ್ಲ. ಹಾಗಾಗಿ ಅವರ ಹೆಸರು ತೆಗೆದುಕೊಳ್ಳಲಿಲ್ಲ. ಇದರಲ್ಲಿ ಅವಮಾನ ಮಾಡುವ ಪ್ರಶ್ನೆ ಇಲ್ಲ ಡಿ.ಕೆ.ಶಿವಕುಮಾರ್ ಅವರ ಮುಂದೆ ಸ್ಪಷ್ಟಪಡಿಸಿದರು. ಬಿಜೆಪಿಯವರು ಯಾವಾಗಲೂ ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ. ಹಾಗೆನೇ ನನ್ನ ಹಾಗೂ ಡಿ,ಕೆ.ಶಿವಕುಮಾರ್ ನಡುವೆ ತಂದಿಡುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.