newsics.com | ನ್ಯೂಸಿಕ್ಸ್
ನವದೆಹಲಿ: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ ಅತ್ಯುನ್ನತ ನ್ಯಾಯಾಲಯ ಮಹತ್ವದ ಹೆಜ್ಜೆ ಇಟ್ಟಿದೆ. ಈ ಹಳೆಯ ಪ್ರಕರಣದ ಮರುತನಿಖೆ ನಡೆಸಲು ಹಸಿರು ನಿಶಾನೆ ತೋರಿಸಿರುವ ಸುಪ್ರೀಂ ಕೋರ್ಟ್, ತನಿಖೆಯ ಮುಂದಿನ ಸ್ವರೂಪದ ಕುರಿತಾದ ಅಂತಿಮ ನಿರ್ಧಾರವನ್ನು ಕಾಯ್ದಿರಿಸಿದೆ.
ಸೌಜನ್ಯ ಅವರ ತಾಯಿ ಕುಸುಮಾವತಿ ಗೌಡ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರಿದ್ದ ದ್ವಿಸದಸ್ಯ ಪೀಠವು, ತನಿಖಾ ಸಂಸ್ಥೆಯಾದ ಸಿಬಿಐ ಅನ್ನು ಕಠಿಣವಾಗಿ ಪ್ರಶ್ನಿಸಿತು. ಘಟನೆ ನಡೆದು 14 ವರ್ಷಗಳು ಕಳೆದಿದ್ದರೂ ಸೂಕ್ತ ರೀತಿಯಲ್ಲಿ ವಿಚಾರಣೆ ನಡೆಸದಿರುವುದು ಮತ್ತು ತನಿಖಾಧಿಕಾರಿಗಳು ಘಟನಾ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡದಿರುವುದಕ್ಕೆ ಪೀಠವು ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಈ ಸಂದರ್ಭದಲ್ಲಿ ಸಾಕ್ಷಿದಾರರ ಭದ್ರತೆಯನ್ನು ಮುಂದುವರಿಸಲು ನಿರ್ದೇಶಿಸಿದ ನ್ಯಾಯಾಲಯ, ಎಸ್‌ಐಟಿ ರಚನೆಯ ಬಾಬ್ತು ತಾವು ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿತು.
ಕೋರ್ಟ್ ಕಲಾಪದ ವೇಳೆ, ಮರುತನಿಖೆಗಾಗಿ ವಿಶೇಷ ತನಿಖಾ ಪಡೆಯನ್ನು (SIT) ನಿಯೋಜಿಸಲು ತಾನು ಸಂಪೂರ್ಣ ಸಹಕರಿಸುವುದಾಗಿ ರಾಜ್ಯ ಸರ್ಕಾರ ಸ್ಪಷ್ಟಪಡಿಸಿತು. ಆದರೆ, ಸಂತ್ರಸ್ತೆಯ ತಾಯಿಯ ಪರ ವಕೀಲರು, ಉನ್ನತ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ನೇರ ಉಸ್ತುವಾರಿಯಲ್ಲೇ ತನಿಖಾ ಪ್ರಕ್ರಿಯೆ ನಡೆಯಬೇಕೆಂದು ಪಟ್ಟುಹಿಡಿದರು. ಎರಡು ಕಡೆಯ ವಾದ ಆಲಿಸಿರುವ ಸರ್ವೋಚ್ಚ ನ್ಯಾಯಾಲಯವು, ತನಿಖಾ ಸಂಸ್ಥೆಯ ಆಯ್ಕೆ ಮತ್ತು ತನಿಖೆಯ ರೂಪುರೇಷೆಗಳ ಬಗ್ಗೆ ಶೀಘ್ರದಲ್ಲೇ ಸ್ಪಷ್ಟ ನಿರ್ದೇಶನ ನೀಡಲಿದೆ.
Smriti Mandhana ಎಲ್‌ಎಸ್‌ಜಿ ಜರ್ಸಿಯಲ್ಲಿ ಆರ್‌ಸಿಬಿ ನಾಯಕಿ? ಸ್ಮೃತಿ ಮಂದಾನಾ ಹೊಸ ಫೋಟೋ ವೈರಲ್