newsics.com | ನ್ಯೂಸಿಕ್ಸ್
ರಾಮನಗರ: ಸಾಂಸ್ಕೃತಿಕ ನಗರಿ ಮೈಸೂರು ಹಾಗೂ ರಾಜಧಾನಿ ಬೆಂಗಳೂರು ನಡುವೆ ಸಂಚರಿಸುವ ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತೊಮ್ಮೆ ಬಿಗ್ ಶಾಕ್ ನೀಡಿದೆ. ಕೇವಲ ಕೆಲವೇ ತಿಂಗಳ ಅಂತರದಲ್ಲಿ ಸದ್ದಿಲ್ಲದೆ ಎರಡನೇ ಬಾರಿಗೆ ಟೋಲ್ ದರ ಹೆಚ್ಚಳ ಮಾಡಲಾಗಿದ್ದು, ಎಕ್ಸ್‌ಪ್ರೆಸ್‌ವೇ ಪ್ರಯಾಣ ಈಗ ಮತ್ತಷ್ಟು ದುಬಾರಿಯಾಗಿದೆ.
ಕಳೆದ ಏಪ್ರಿಲ್ 1 ರಂದುಷ್ಟೇ ಟೋಲ್ ದರಗಳನ್ನು ಪರಿಷ್ಕರಿಸಿದ್ದ ಪ್ರಾಧಿಕಾರ, ಇದೀಗ ಬೆಂಗಳೂರು-ನಿಡಘಟ್ಟ ಮಾರ್ಗದ ಟೋಲ್‌ಪ್ಲಾಜಾಗಳಲ್ಲಿ ವಿವಿಧ ವರ್ಗದ ವಾಹನಗಳಿಗೆ 5 ರೂಪಾಯಿಯಿಂದ ಬರೋಬ್ಬರಿ 35 ರೂಪಾಯಿವರೆಗೆ ದರ ಹೆಚ್ಚಳ ಮಾಡಿ ಅಧಿಕೃತ ಆದೇಶ ಹೊರಡಿಸಿದೆ.
ಹೊಸ ಟೋಲ್ ದರಗಳ ವಿವರ
- ಕಾರು/ಜೀಪ್: ಹಳೆಯ ದರ ₹180 ಇದ್ದು, ನೂತನ ದರ ₹185 ಆಗಿದೆ.
- ಲಘು ವಾಣಿಜ್ಯ ವಾಹನ (LCV): ₹285 ರಿಂದ ₹295 ಕ್ಕೆ ಏರಿಕೆಯಾಗಿದೆ.
- ಟ್ರಕ್ ಮತ್ತು ಬಸ್‌ಗಳು: ₹600 ರಿಂದ ₹620 ಕ್ಕೆ ದರ ಹೆಚ್ಚಿಸಲಾಗಿದೆ.
- 3-ಆಕ್ಸಲ್ ವಾಣಿಜ್ಯ ವಾಹನ: ₹655 ಇದ್ದ ದರ ಈಗ ₹675 ತಲುಪಿದೆ.
- ಭಾರಿ ವಾಹನಗಳು (HCM/EME): ₹940 ರಿಂದ ₹970 ಕ್ಕೆ ಹೆಚ್ಚಳವಾಗಿದೆ.
- ಅತಿ ಭಾರಿ ವಾಹನಗಳು (7 ಅಥವಾ ಹೆಚ್ಚು ಆಕ್ಸಲ್): ₹1,145 ಇದ್ದ ದರವನ್ನು ₹1,180 ಕ್ಕೆ ಏರಿಸಲಾಗಿದೆ.
ಹೆದ್ದಾರಿ ಮೂಲಸೌಕರ್ಯ ಪೂರ್ಣಗೊಳ್ಳುವ ಮುನ್ನವೇ ಮತ್ತು ಒಂದೇ ವರ್ಷದಲ್ಲಿ ಎರಡೆರಡು ಬಾರಿ ಅನಗತ್ಯವಾಗಿ ಟೋಲ್ ದರ ಹೆಚ್ಚಿಸಿರುವ ಹೆದ್ದಾರಿ ಪ್ರಾಧಿಕಾರದ ನಡೆಗೆ ವಾಹನ ಚಾಲಕರು ಹಾಗೂ ನಿತ್ಯ ಪ್ರಯಾಣಿಕರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.