newsics.com
ಬೆಂಗಳೂರು: ರಾಜ್ಯದಲ್ಲಿ ಐಪಿಎಸ್ ಅಧಿಕಾರಿ ಡಿ. ರೂಪಾ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಆರೋಪ-ಪ್ರತ್ಯಾರೋಪದ ಬಳಿಕ ಈಗ ಡಿ. ರೂಪಾ ವಿರುದ್ಧ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದಾರೆ.
ಕೆಳಹಂತದ ಅಧಿಕಾರಿಯ ಕಚೇರಿಯನ್ನು ಅತಿಕ್ರಮವಾಗಿ ಪ್ರವೇಶಿಸಿದ ಆರೋಪಕ್ಕೆ ಆಂತರಿಕ ಭದ್ರತ ದಳ (ಐಎಸ್‌ಡಿ)ದ ಐಜಿಪಿ, ಹಿರಿಯ ಐಪಿಎಸ್ ಅಧಿಕಾರಿ ಡಿ.ರೂಪಾ ಗುರಿಯಾಗಿದ್ದು, ಈ ಸಂಬಂಧ ಐಎಸ್‌ಡಿ ಡಿಐಜಿಪಿ ವರ್ತಿಕಾ ಕಟಿಯಾರ್ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕ ಮತ್ತು ಐಎಸ್‌ಡಿ ಡಿಜಿಪಿಗೂ ದೂರು ನೀಡಿದ್ದಾರೆ.
ಐಜಿಪಿ ರೂಪಾ ಅವರ ಆದೇಶದಂತೆ, 2024ರ ಸೆ. 6ರಂದು ಹೆಡ್‌ಕಾನ್‌ಸ್ಟೆಬಲ್ ಟಿ.ಎಸ್. ಮಂಜುನಾಥ್, ಐಜಿಪಿ ರೂಪಾ ಅವರ ಕಚೇರಿ ಸೆಂಟ್ರಿ ಆಗಿರುವ ಹೋಮ್ ಗಾರ್ಡ್ ಮಲ್ಲಿಕಾರ್ಜುನ್, ಕಂಟ್ರೋಲ್ ರೂಂನಿಂದ ನಮ್ಮ ಕಚೇರಿಯ ಕೀಯನ್ನು ತೆಗೆದುಕೊಂಡು ಬಂದು ನನ್ನ ಅನುಮತಿ ಇಲ್ಲದೆ, ಕಚೇರಿಯ ಬಾಗಿಲು ತೆರೆದಿದ್ದಾರೆ. ಅಲ್ಲದೆ ಮಲ್ಲಿಕಾರ್ಜುನ್ ಕೆಲವೊಂದು ಕಡತಗಳನ್ನು ನಮ್ಮ ಕಚೇರಿಯಲ್ಲಿ ಇರಿಸಿ, ಕಚೇರಿಯ ಫೋಟೋಗಳನ್ನು ತೆಗೆದು ಐಜಿಪಿ ರೂಪಾಗೆ ವಾಟ್ಸ್‌ಆಯಪ್ ಮೂಲಕ ಕಳುಹಿಸಿದ್ದಾರೆ.
ಅದಕ್ಕೂ ಮೊದಲು ನನ್ನ ಆಪ್ತಸಹಾಯಕ ಕಿರಣ್‌ಕುಮಾರ್ ಅವರು, ಮಂಜುನಾಥ್‌ಗೆ ಡಿಐಪಿ ಅವರ ಅನುಮತಿ ಇಲ್ಲದೆ ಕಚೇರಿ ಬಾಗಿಲು ತೆರೆಯುವಂತಿಲ್ಲ ಎಂದು ಎಚ್ಚರಿಕೆ ನೀಡಿದರೂ ಅತಿಕ್ರಮವಾಗಿ ಕಚೇರಿ ಪ್ರವೇಶಿದ್ದಲ್ಲದೆ, ಕಡತಗಳನ್ನು ಇರಿಸಿ ಫೋಟೋ ಕಳುಹಿಸಿದ್ದಾರೆ ಎಂದು ವರ್ತಿಕಾ ಕಟಿಯಾರ್ ದೂರಿನಲ್ಲಿ ಆರೋಪಿಸಿದ್ದಾರೆ.
ರೂಪಾ ಸೂಚನೆಯಂತೆ ಸಿಬಂದಿ ಕೆಲಸ
ನಮ್ಮ ಕಚೇರಿಯಲ್ಲಿ ಗೌಪ್ಯ ದಾಖಲೆಗಳು ಮತ್ತು ಇತರ ಕಚೇರಿಗೆ ಸಂಬಂಧಿಸಿದ ದಾಖಲೆಗಳನ್ನು ಇರಿಸಲಾಗಿದ್ದು, ಕಚೇರಿ ಅವಧಿ ಮುಗಿದ ಬಳಿಕ ಮತ್ತು ಅಧಿಕಾರಿಗಳು ಕೊಠಡಿಯಲ್ಲಿ ಇಲ್ಲದ ಸಮಯದಲ್ಲಿ ಹಾಗೂ ಅವರ ಅನುಮತಿ ಇಲ್ಲದೆ ನಮ್ಮ ಕಚೇರಿ ಕೊಠಡಿಯ ಬೀಗವನ್ನು ತೆಗೆದು ಅನಧಿಕೃತ ಪ್ರವೇಶ ಮಾಡಿಸಿರುವುದು ಅಕ್ಷಮ್ಯ ಅಪರಾಧವಾಗಿದೆ. ಇತ್ತೀಚೆಗಷ್ಟೇ ಈ ವಿಚಾರ ನಮ್ಮ ಗಮನಕ್ಕೆ ಬಂದಿದ್ದು, ಕೂಡಲೇ ನನ್ನ ಕಚೇರಿ ಆಪ್ತ ಸಹಾಯಕ ಕಿರಣ್‌ಕುಮಾರ್, ಮಂಜುನಾಥ್, ಮಲ್ಲಿಕಾರ್ಜುನ್ ಅವರನ್ನು ಕರೆದು ವಿಚಾರಿಸಿದಾಗ, ಡಿ. ರೂಪಾ ಅವರ ಸೂಚನೆ ಮೇರೆಗೆ ಕಚೇರಿ ತೆರೆದು, ಕಡತ ಇರಿಸಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ.
ಇದು ಕಾನೂನುಬಾಹಿರವಾಗಿದ್ದು, ಉದ್ದೇಶಪೂರ್ವಕ ವಾಗಿ ದುರ್ಬಳಕೆ ಮಾಡಿಕೊಂಡಿರುತ್ತಾರೆ. ಈ ಒಂದು ಘಟನೆ ನನ್ನ ಗಮನಕ್ಕೆ ಬಂದಿದ್ದು, ಈ ರೀತಿಯ ಎಷ್ಟೋ ಘಟನೆಗಳು ಈ ಹಿಂದೆ ನಡೆದಿದ್ದರೂ ಅದು ನನ್ನ ಗಮನಕ್ಕೆ ಬಂದಿರುವುದಿಲ್ಲ. ಮುಂದೆಯೂ ಈ ರೀತಿಯ ಘಟನೆಗಳು ನಡೆಯಬಹುದಾಗಿದೆ. ಈ ರೀತಿಯ ಘಟನೆಗಳು ಕಚೇರಿಯ ವಾತಾವರಣ ಮತ್ತು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ-ಸಿಬಂದಿ ಮನಸ್ಥಿತಿಗೆ ಹಾನಿ ಉುಂಟುಮಾಡುತ್ತವೆ. ಇನ್ನು ಮುಂದೆ ನನ್ನ ಕಚೇರಿ ಕೊಠಡಿಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಲ್ಲಿ ಅದಕ್ಕೆ ಐಜಿಪಿ ಡಿ. ರೂಪಾ ಅವರೇ ನೇರ ಹೊಣೆಗಾರರಾಗಿರುತ್ತಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನನ್ನ ವಾರ್ಷಿಕ ವರದಿ ಹಾಳು
ಮಾಡುವುದಾಗಿ ಬೆದರಿಕೆ
ನನ್ನ ಕಚೇರಿಯನ್ನು ಅತಿಕ್ರಮ ಪ್ರವೇಶಿಸಿರುವ ಡಿ. ರೂಪಾ ಅವರು ಈ ಘಟನೆಯನ್ನು ಯಾವ ರೀತಿ ಬೇಕಾದರೂ ನಮ್ಮ ವಿರುದ್ಧ ಸೇಡು ತೀರಿಸಿಕೊಳ್ಳಲು ದುರುಪಯೋಗಪಡಿಸಿಕೊಳ್ಳಬಹುದಾಗಿದೆ. ಆದ್ದರಿಂದ ಡಿ. ರೂಪಾ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಹಾಗೂ ನನಗೆ ನ್ಯಾಯ ಒದಗಿಸಬೇಕು ಎಂದು ಡಿಐಜಿಪಿ ವರ್ತಿಕಾ ಕಟಿಯಾರ್ ದೂರಿನಲ್ಲಿ ಉಲ್ಲೇಖೀಸಿದ್ದಾರೆ.