newsics.com
ಹಮೀರ್‌ಪುರ: ನದಿ ದಡದಲ್ಲಿ ಮೃತ ವ್ಯಕ್ತಿಯ ಅಂತ್ಯಕ್ರಿಯೆ ಮಾಡುತ್ತಿದ್ದ ವೇಳೆ ನದಿಯ ನೀರಿನ ಮಟ್ಟ ಇದ್ದಕ್ಕಿದ್ದಂತೆ ಮೇಲಕ್ಕೆ ಏರಿತು. ಇದರಿಂದ ಆತಂಕಗೊಂಡ ಸಂಬಂಧಿಕರು ಅರೆಬರೆ ಸುಟ್ಟ ಮೃತದೇಹವನ್ನು ಹೊತ್ತೊಯ್ದಿದ್ದಾರೆ. ಈ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ. ಈ ಸಂಬಂಧದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಏನಿದು ಘಟನೆ?
ಕಳೆದ ಮೂರು ದಿನಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ ಮತ್ತು ಹಿಮಪಾತವಾಗುತ್ತಿದೆ. ಹಮೀರ್‌ಪುರ ಮತ್ತು ಕಾಂಗ್ರಾ ಗಡಿಯಲ್ಲಿರುವ ವ್ಯಾಸ್ ನದಿಯ ಇನ್ನೊಂದು ಬದಿಯಲ್ಲಿ ಕೆಲವರು ಮೃತದೇಹದ ಅಂತ್ಯಕ್ರಿಯೆ ನಡೆಸುತ್ತಿದ್ದರು. ಚಿತೆಗೆ ಬೆಂಕಿ ಇಟ್ಟು ಅಂತಿಮ ವಿಧಿವಿಧಾನ ಶುರು ಮಾಡಿದ್ದರು. ಆಗ ಇದ್ದಕ್ಕಿದ್ದಂತೆ ನದಿಯ ನೀರಿನ ಮಟ್ಟ ಏರಿತು. ಇದನ್ನು ಕಂಡ ಸಂಬಂಧಿಕರು ಗಾಬರಿಗೊಂಡು ಏನು ಮಾಡಬೇಕೆಂದು ತಿಳಿಯದೆ ದಿಕ್ಕು ತೋಚದಂತಾಗಿದ್ದರು. ತಕ್ಷಣ ಸಂಬಂಧಿಕರು ಟ್ರ್ಯಾಕ್ಟರ್ ಸಹಾಯದಿಂದ ಉರಿಯುತ್ತಿರುವ ಕಟ್ಟಿಗೆಯೊಂದಿಗೆ ಶವವನ್ನು ಎತ್ತಿಕೊಂಡು ಬಂದರು. ನಂತರ ಬೇರೆಡೆ ಅಂತ್ಯಕ್ರಿಯೆ ವಿಧಿ ವಿಧಾನಗಳನ್ನು ನಡೆಸಲಾಯಿತು. ವ್ಯಾಸ್ ನದಿಯಲ್ಲಿ ನೀರಿನ ಮಟ್ಟ ಏರುತ್ತಿರುವಾಗ ನಡೆದ ಈ ಸಂಪೂರ್ಣ ಘಟನೆಯನ್ನು ಯಾರೋ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.