newsics.com
ಬೆಂಗಳೂರು: ಉಪ ಚುನಾವಣೆಯಲ್ಲಿ ಮೂರೂ ಸ್ಥಾನಗಳನ್ನು ಗೆದ್ದು ಭರ್ಜರಿ ಉಮೇದಿನಲ್ಲಿರುವ ಕಾಂಗ್ರೆಸ್, ಅದೇ ಉತ್ಸಾಹದಲ್ಲಿ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ಮಾಡಿ ಆಡಳಿತಕ್ಕೆ ಬಲ ತುಂಬಲು ಮುಂದಾಗಿದೆ.
ಒಂದು ಸ್ಥಾನದ ಜತೆಗೆ ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌ನ ಒಂದೊಂದು ಕ್ಷೇತ್ರದಲ್ಲಿ ಗೆದ್ದಿರುವ ಕಾಂಗ್ರೆಸ್‌ಗೆ ಈಗ ಮುಂದಿನ ಮೂರೂವರೆ ವರ್ಷವನ್ನು ಇನ್ನಷ್ಟು ಗಟ್ಟಿಗೊಳಿಸುವ ಇರಾದೆ ಇದೆ. ಈ ಕಾರಣದಿಂದಲೇ ಕಾಂಗ್ರೆಸ್ ವರಿಷ್ಠರು ಸಚಿವ ಸಂಪುಟ ಪುನರ್ ರಚಿಸುವ ಲೆಕ್ಕಾಚಾರದಲ್ಲಿದ್ದಾರೆ.
ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ದೆಹಲಿ ತಲುಪಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಒಂದೂವರೆ ವರ್ಷ ಕಳೆದಿದೆ. ಈಗಾಗಲೇ ಸಚಿವರಾಗಿ ಕೆಲಸ ಮಾಡಿರುವ ಕೆಲವರನ್ನು ಕೈ ಬಿಟ್ಟು ಅದೇ ಸಮುದಾಯ ಹಾಗೂ ಜಿಲ್ಲಾವಾರು ಪ್ರಾತಿನಿಧ್ಯ ನೀಡುವ ಉದ್ದೇಶವನ್ನು ಕಾಂಗ್ರೆಸ್ ಹೈಕಮಾಂಡ್ ಹೊಂದಿದೆ. 20 ತಿಂಗಳ ಅವಧಿಯನ್ನು ಮೂರು ಭಾಗ ಮಾಡಿ ಅಧಿಕಾರ ಹಂಚುವ ಇರಾದೆಯೂ ಇದ್ದಂತಿದೆ. ವಿರೋಧ ಬಂದರೆ ಎರಡೂವರೆ ವರ್ಷದ ಅವಧಿ ಹಂಚಿಕೆಯೂ ಆಗಬಹುದು ಎನ್ನಲಾಗುತ್ತಿದೆ.
ಆದರೆ, ಕಳೆದ ಬಾರಿ ಸಿದ್ದರಾಮಯ್ಯ ಅರ್ಧ ಅವಧಿಯಲ್ಲಿ ಶ್ರೀನಿವಾಸಪ್ರಸಾದ್, ಅಂಬರೀಷ್ ಸಹಿತ ಹಲವರನ್ನು ಸಂಪುಟದಿಂದ ಕೈಬಿಟ್ಟು ಭಾರೀ ಭಿನ್ನಮತ ಎದುರಿಸಬೇಕಾಯಿತು. ಹೀಗಾಗಿ ಈ ಬಾರಿ ಎಚ್ಚರಿಕೆಯಿಂದಲೇ ಹೆಜ್ಜೆ ಇಡಲು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಮುಂದಾಗಿದ್ದಾರೆ.
ಒಂದೂವರೆ ವರ್ಷದಲ್ಲಿ ಕೆಲಸ ಮಾಡಿರುವ ಹಿರಿಯರ ಸಚಿವರು ಹಾಗೂ ಮೊದಲ ಬಾರಿ ಸಚಿವರಾದವರ ಸಾಧನೆಯ ವಿವರಗಳನ್ನು ಹೈಕಮಾಂಡ್ ತರಿಸಿಕೊಂಡಿದೆ. ಸಚಿವರಿಂದಲೇ ಇಲಾಖೆ ಸಾಧನೆಗಳ ವಿವರ ಪಡೆದುಕೊಳ್ಳಲಾಗಿದ್ದು, ಸಿಎಂ ಹಾಗೂ ಡಿಸಿಎಂ ಕೂಡ ಮಾಹಿತಿ ನೀಡಿದ್ದಾರೆ.
ಇಲಾಖೆಯಲ್ಲಿ ಕೆಲಸವನ್ನೇ ಮಾಡದೇ, ಪ್ರವಾಸ ಹೋಗದೇ ಕ್ಷೇತ್ರಕ್ಕೆ ಸೀಮಿತವಾಗಿರುವ, ವಿವಾದದಿಂದ ಮುಜುಗರ ತಂದ ಕೆಲ ಸಚಿವರ ಪಟ್ಟಿ ಮಾಡಲಾಗಿದೆ. ಇದರಲ್ಲಿ ಹಲವರ ಹೆಸರುಗಳಿವೆ. ಅಂಥವರಿಗೆ ಕೊಕ್ ನೀಡುವ ಸಂಭವ ಜಾಸ್ತಿ ಇದೆ.
ಕೆ.ವೆಂಕಟೇಶ್, ರಹೀಮ್ ಖಾನ್, ಶರಣ ಪ್ರಕಾಶ್ ಪಾಟೀಲ್, ಬೋಸರಾಜು, ಡಿ.ಸುಧಾಕರ್, ಶಿವಾನಂದ ಪಾಟೀಲ್ ಸಹಿತ ಕೆಲ ಸಚಿವರು ಸಕ್ರಿಯರಾಗಿಲ್ಲ. ಮಧು ಬಂಗಾರಪ್ಪ. ಬೈರತಿ ಸುರೇಶ್, ತಿಮ್ಮಾಪುರ ಅವರು ವಿವಾದಗಳಿಂದ ಸಚಿವ ಸ್ಥಾನ ಕಳೆದುಕೊಳ್ಳಬಹುದು ಎನ್ನಲಾಗುತ್ತಿದೆ.
ಯಾರ‌್ಯಾರಿಗೆ ಕೊಕ್?
ಮಧು ಬಂಗಾರಪ್ಪ, ಆರ್.ಬಿ. ತಿಮ್ಮಾಪುರ, , ರಹೀಮ್ ಖಾನ್, ಶರಣಪ್ರಕಾಶ್ ಪಾಟೀಲ್, ಮಂಕಾಳ ವೈದ್ಯ, ಕೆ.ವೆಂಕಟೇಶ್, ಎನ್.ಎಸ್.ಬೋಸರಾಜು, ಚಲುವರಾಯಸ್ವಾಮಿ, ಕೆ.ಎನ್. ರಾಜಣ್ಣ, ಶಿವಾನಂದ ಪಾಟೀಲ್, ಬೈರತಿ ಸುರೇಶ್, ಡಾ.ಮಹದೇವಪ್ಪ, ಡಿ.ಸುಧಾಕರ್.
ಯಾರಿಗೆಲ್ಲ ಲಕ್?:
ಬಿ.ಕೆ. ಹರಿಪ್ರಸಾದ್ (ವಿಧಾನಪರಿಷತ್ ಸದಸ್ಯ), ತನ್ವೀರ್ ಸೇಠ್ (ನರಸಿಂಹರಾಜ ಕ್ಷೇತ್ರ/ಮೈಸೂರು), ನರೇಂದ್ರ ಸ್ವಾಮಿ (ಮಳವಳ್ಳಿ/ಮಂಡ್ಯ ಜಿಲ್ಲೆ), ನಾಗೇಂದ್ರ (ಬಳ್ಳಾರಿ ಗ್ರಾಮಾಂತರ/ ಬಳ್ಳಾರಿ ಜಿಲ್ಲೆ), ಶಿವಲಿಂಗೇಗೌಡ (ಅರಸೀಕೆರೆ/ ಹಾಸನ ಜಿಲ್ಲೆ), ಬಸವರಾಜ ಶಿವಣ್ಣವರ (ಬ್ಯಾಡಗಿ ಕ್ಷೇತ್ರ/ ಹಾವೇರಿ ಜಿಲ್ಲೆ), ಲಕ್ಷ್ಮಣ ಸವದಿ (ಅಥಣಿ ಕ್ಷೇತ್ರ/ ಬೆಳಗಾವಿ ಜಿಲ್ಲೆ), ಯಶವಂತರಾಯ ಗೌಡ (ಇಂಡಿ/ ವಿಜಯಪುರ ಜಿಲ್ಲೆ), ಆನೆಕಲ್ ಶಿವಣ್ಣ (ಆನೆಕಲ್/ಬೆಂಗಳೂರು), ವಿಜಯಾನಂದ ಕಾಶಪ್ಪನವರ (ಹುನಗುಂದ/ ಬಾಗಲಕೋಟೆ ಜಿಲ್ಲೆ), ಪುಟ್ಟರಂಗಶೆಟ್ಟಿ (ಚಾಮರಾಜನಗರ ಕ್ಷೇತ್ರ).
Open appeal ಮಂಡ್ಯ ಸಾಹಿತ್ಯ ಸಮ್ಮೇಳನ: ಕಸಾಪ ಅಧ್ಯಕ್ಷರಿಗೊಂದು ಬಹಿರಂಗ ಮನವಿ
health benefits: ಚಳಿಗಾಲದಲ್ಲಿ ಕ್ಯಾರೆಟ್ ಹಲ್ವಾ ತಿಂದರೆ ಇಷ್ಟೆಲ್ಲಾ ಪ್ರಯೋಜನಗಳಿವೆಯೇ?
Max Release Date Announced ಕಿಚ್ಚನ ‘ಮ್ಯಾಕ್ಸ್’ ರಿಲೀಸ್ ಡೇಟ್ ಫಿಕ್ಸ್: ಚಿತ್ರತಂಡದಿಂದ ಮಹತ್ವದ ಘೋಷಣೆ
Gang rape by teachers ಅಪ್ರಾಪ್ತ ಬಾಲಕಿ ಮೇಲೆ ಶಿಕ್ಷಕರಿಂದಲೇ ಸಾಮೂಹಿಕ ಅತ್ಯಾ*ಚಾರ, ನಾಲ್ವರ ಬಂಧನ