* ನಂದಿನಿ ಹೆದ್ದುರ್ಗ,
ಸಾಹಿತಿ
[email protected]
—
ಮತ್ತೊಂದು ಸಾಹಿತ್ಯ ಸಮ್ಮೇಳನ ಬರುತ್ತಿದೆ. ಅತಿವೃಷ್ಟಿ ಅನಾವೃಷ್ಟಿ ಬರ ಎನ್ನುವ ಕಾರಣದೊಂದಿಗೆ ಈ ವರ್ಷ ಸಮ್ಮೇಳನ ಬೇಡ ಎನ್ನುವ ಮಾತೂ ಒಂದಷ್ಟು ಕಾಲ ಚಾಲ್ತಿಯಲ್ಲಿತ್ತು. ಉಳಿದದ್ದೆಲ್ಲಾ ಅದ್ದೂರಿಯಲ್ಲೇ ನಡೀತಿರುವಾಗ ಕನ್ನಡದ ಹಬ್ಬಕ್ಕೆ ಮಾತ್ರ ಸಮಸ್ಯೆಗಳ ಕಾರಣ ಹೇಳುವುದು ಸರಿಯಲ್ಲ ಎಂದೋ ಏನೋmದು ನಿರ್ಧರಿಸಲಾಯಿತಂತೆ.
ಸಮ್ಮೇಳನ ಎಲ್ಲಾಗಬೇಕು ಎನ್ನುವುದು ಮೊದಲೇ
ನಿಶ್ಚಯವಾಗಿರುತ್ತದೆಯಾದ್ದರಿಂದ ಅದರ ಕುರಿತು ಗೊಂದಲಗಳು ಇರುವುದಿಲ್ಲ. ಸಮ್ಮೇಳನದ ಅಧ್ಯಕ್ಷರು ಯಾರಾಗಬೇಕು ಎನ್ನುವ ಸಂಗತಿ ಸತತ ಮೂರು ತಿಂಗಳು ಕಾಲ ಆಸಕ್ತರನ್ನು ಎಂಗೇಜ್ಡ್ ಆಗಿ ಇಟ್ಟಿದ್ದು, ಸಾಹಿತ್ಯೇತರರು ಈ ಬಾರಿಯ ಅಧ್ಯಕ್ಷರು ಎಂದು ಒಂದಷ್ಟು ಕಾಲ ಹೊಯ್ದಾಡಿ ಅದರ ರಸಪ್ರಸಂಗಗಳು ನಡೆದಿದ್ದೂ ಆಯ್ತು. ಮಹಿಳಾ ಅಧ್ಯಕ್ಷತೆಗಾಗಿ ಒತ್ತಾಯವೂ ನಡೆಯಿತು. ಜಾತಿ ಪ್ರಶ್ನೆ ಒಂದಷ್ಟು ಕಾಲ ಪಾರುಪತ್ಯ ನಡೆಸಿ ಅಲ್ಪಸಂಖ್ಯಾತರು ಅಧ್ಯಕ್ಷರಾಗಬೇಕು ಎಂದು ಮೂವರು ಮುಸ್ಲಿಂ ಸಾಹಿತಿಗಳ ಹೆಸರನ್ನು ಎದುರಿಗಿಟ್ಟರು. ಈ ಎಲ್ಲಾ ಸಂಗತಿಗಳೂ ಸಾಕಷ್ಟು ಮಂದಿಗೆ ಎಫ್‌ಬಿ(FB)ಯಲ್ಲಿ ದೊಡ್ಡ ಮಟ್ಟದ ಉದ್ಯೋಗ ಕೊಟ್ಟಿದ್ದಂತೂ ನಿಜ.
ಕೊನೆಗೆ ಹಿರಿಯರಾದ ಗೊರುಚ (ಗೊ.ರು. ಚನ್ನಬಸಪ್ಪ) ಅವರು ಎಂಬತ್ತೇಳನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾದರು.
ಮನೆಯಲ್ಲಿ ಮದುವೆಯೋ ನಾಮಕರಣವೋ ಮನೆ ಕಟ್ಟುವುದೋ ನಡೀತಿದ್ದಾಗ ಹೇಗೆ ಭಿನ್ನ ಅಭಿಪ್ರಾಯಗಳೂ ಭಿನ್ನಾಭಿಪ್ರಾಯಗಳೂ ಬರುತ್ತವೋ ಹಾಗೇ ಇಂತಹ ಊರೊಟ್ಟಿನ ಕೆಲಸ ಮಾಡುವಾಗ ತರ್ಕ, ವಾದ, ನಮ್ಮದೇ ನಡೀಬೇಕು ಎಂದೆಲ್ಲ ಇರುತ್ತೆ. ಇದು ಸಮ್ಮೇಳನದ ಪೂರ್ವಭಾವಿ ಉತ್ಸವ ಮತ್ತು ಉತ್ಸಾಹ.
***
ಇನ್ನು ಗೋಷ್ಠಿಗಳಿಗೆ ಆಯ್ಕೆ ಶುರುವಾಗಿದೆಯೋ ಇಲ್ಲವೊ ಗೊತ್ತಿಲ್ಲ. ಸಣ್ಣಪುಟ್ಟದಾಗಿ ಇನ್‌ಫ್ಲುಯೆನ್ಸ್ ಮಾಡಿಸುವುದು ಇದ್ದದ್ದೆ. ನಂಗೆ ಕವಿಗೋಷ್ಠಿ ಗೆ ಹಾಕ್ಸಿ , ನಂಗೆ ವಿಚಾರ ಗೋಷ್ಠಿಯಲ್ಲಿ ಪಾತ್ರ ಬೇಕು, ರೈತ ಗೋಷ್ಠಿಲಿ ನಾನಿರದಿದ್ದರೆ ಹೇಗೆ ಎಂದೆಲ್ಲಾ ವಾಗ್ವಾದಗಳು ವಾಗ್ಯುದ್ಧಗಳೂ ನಡೆಯುತ್ತವೆ. ಇದಾದ ನಂತರ ನಮ್ ಜಾತಿಗೆ, ಅಲ್ಪಸಂಖ್ಯಾತರಿಗೆ, ನಮ್ ಭಾಷಿಕರಿಗೆ, ನಮ್ಮ ಜಿಲ್ಲೆಗೆ, ಕಲ್ಯಾಣ ಕರ್ಣಾಟಕಕ್ಕೆ, ಉತ್ತರಕ್ಕೆ ದಕ್ಷಿಣಕ್ಕೆ ಪೂರ್ವಕ್ಕೆ ಪಶ್ಚಿಮಕ್ಕೆ ಪ್ರಾತಿನಿಧ್ಯ ದೊರೆತಿಲ್ಲ ಎಂದೆಲ್ಲ ಶುರುವಾಗುತ್ತೆ.
ಲಿಂಗ ಸಮಾನತೆ ಪ್ರಶ್ನೆಯೂ ಎದ್ದು ಒಂದು ಗೋಷ್ಠಿಯಲ್ಲಿ ಸರಿಸಮನಾಗಿ ಹೆಣ್ಮಕ್ಳಿಗೂ ಅವಕಾಶ ಇರ್ಬೇಕು ಅಂತಲೋ, ಟ್ರಾನ್ಸ್ಜೆಂಡರ್ಸ್‌ಗಳಿಗೆ ಅವಕಾಶ ಇಲ್ಲವೆಂತಲೊ ಜಟಾಪಟಿ ನಡೆದು ಕೊನೆಗೂ ಎಲ್ಲಾ ಸರಿಹೋಯ್ತು ಎನ್ನುವಾಗ ಯಾವುದೋ ಕಾರಣಕ್ಕೆ ಒಂದು ಗುಂಪು ಬಂಡಾಯ ಸಮ್ಮೇಳನದ ಸಿದ್ಧತೆ ಆರಂಭಿಸುತ್ತದೆ.
ಇದು ಪ್ರಜಾರಾಜ್ಯ. ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಜತೆಗೆ ಅವಕಾಶವನ್ನು ಯುದ್ಧ ಮಾಡಿಯೇ ಪಡೆದುಕೊಳ್ಳಬೇಕಾದ ಪರಿಸ್ಥಿತಿ ಪರಿಸರವೂ ಇದೆ. ಅದು ಸರಿ ಇದು ತಪ್ಪು ಎನ್ನುವುದಕ್ಕೆ ಅರ್ಥವೇ ಇಲ್ಲ. ಅವರವರ ದೃಷ್ಟಿಯಿಂದ ಅವರವರ ವಾದ ಸಿದ್ಧಾಂತಗಳು ಸರಿಯೆ.
(ಶಾಮಿಯಾನ ಕಾಂಟ್ರಾಕ್ಟ್ ,ಮಣ್ಣು ಹೊಡೆಸೊ ಕಾಂಟ್ರಾಕ್ಟ್, ಕಾಡು ಕೊಚ್ಚಿಸುವ ಕಾಂಟ್ರಾಕ್ಟ್, ನೆಲ ಸಮತಟ್ಟು ಮಾಡುವ ಕಾಂಟ್ರಾಕ್ಟ್‌ಗಳ ಸಲುವಾದ ಕಮಿಷನ್ ವಗೈರೆ ಎನ್ನುವ ಸಂಗತಿಗಳು ರಹಸ್ಯವಾಗಿಯೆ ಉಳಿಯಲಿ.)
***
ಯಾವುದೇ ಸಮ್ಮೇಳನ ಉತ್ಸವ ಸಂತೆ ಜಾತ್ರೆ ಪರಿಷೆ ಮದುವೆ ಮುಷ್ಕರಗಳಿಗೆ ತನ್ನದೇ ಆದ ಧಾರಣ ಸಾಮರ್ಥ್ಯವಿರುತ್ತದೆ. ಆಯಾ ವಿಷಯವನ್ನು ವಿಚಾರವನ್ನು ಪ್ರತಿನಿಧಿಸುವ ಪ್ರದೇಶಗಳಿಗನ್ವಯ ಜನ ಸೇರುತ್ತಾರೆ. ಆಗಮಿಸುವ ಅತಿಥಿಗಳು ಮತ್ತು ಆಸಕ್ತರ ಅನ್ವಯ ಸಂಪನ್ಮೂಲಗಳ ವಿನಿಯೋಗ ಆಗುತ್ತವೆ. ಮತ್ತು ಇದೆಲ್ಲದರಿಂದ ಒಂದು ಗಾತ್ರದ ಕಸ ಉತ್ಪಾದನೆ ಆಗುತ್ತದೆ. (ವಿಘಟಿಸಬಹುದಾದ ಕಸ ನಿಜದಲ್ಲಿ ಸಂಪನ್ಮೂಲವೇ.)
ಪರಿಸರ, ಪರಿಸರದ ಕಾಳಜಿ, ಸಂಪನ್ಮೂಲಗಳ ಮಿತ ಬಳಕೆಯ ಕುರಿತು ಹಿಂದೆಂದಿಗಿಂತಲೂ ಹೆಚ್ಚು ಜಾಗರೂಕರಾಗಿರಬೇಕಾಗಿರುವ ಕಾಲ ಇದು.
ಋತುಗಳು ತಮ್ಮ ರೂಪ ಬದಲಿಸಿಕೊಂಡಿವೆ. ಮಳೆ ಚಳಿ ಬಿಸಿಲು ಮೂರೂ ಸಂಗತಿಗಳು ಅಸಹಜವಾಗುತ್ತಿವೆ. ಗುಡ್ಡ ಕುಸಿತ, ಕಣಿವೆ ಜರಿತ, ರಸ್ತೆ ಬಿರಿತಗಳು ತೀರಾ ಸಾಮಾನ್ಯ ಘಟನೆಗಳಾಗಿವೆ. ಹತ್ತು ವರ್ಷಗಳ ಹಿಂದೆ ನಮ್ಮ ರಾಜ್ಯಕ್ಕೆ ಪರಿಚಯವೇ ಇಲ್ಲದ ಭೂಕುಸಿತದಂತಹ ಸಂಗತಿಗಳು ಈಚಿನ ಐದು ವರ್ಷಗಳಲ್ಲಿ ಸಾಧಾರಣ ಘಟನೆಗಳೆಂಬಂತೆ ಸ್ವೀಕಾರವಾಗ್ತಿವೆ. ಬೇಕೋ ಬೇಡವೋ, ಸಾಧುವೋ ಶೂನ್ಯವೋ ಸಹ್ಯಾದ್ರಿ ಶ್ರೇಣಿಗಳನ್ನು ಅಭಿವೃದ್ಧಿಯ ಹೆಸರಿನಲ್ಲಿ ಎಬ್ಬಿ ತೆಗೆಯಲಾಗುತ್ತಿದೆ. ಹರಿವ ಸಣ್ಣ ಹೊಳೆಯೂ ಒಡ್ಡು ಕಟ್ಟಿಸಿಕೊಂಡು ಮಿನಿ ಹೈಡ್ರೊ ಎಲೆಕ್ಟ್ರಿಸಿಟಿ ಹೆಸರು ಪಡೆದುಕೊಳ್ತಿದೆ. ಕುಡಿಯುವ ನೀರು ಯೋಜನೆಯ ಹೆಸರಿನಲ್ಲಿ ಭೂಮಿಯ ಆಳಕ್ಕೆ ವೈಬ್ರೇಟರ್ ಇಳೀತಿದೆ. ಭೂಮಂಡಲದ ಅತೀ ವೃದ್ಧ ರಚನೆಗಳಲ್ಲಿ ಆದ ಈ ಬದಲಾವಣೆ ಶತ ಶತಮಾನಗಳಿಂದ ಒಂದು ನಿಶ್ಚಿತ ಮಾದರಿಯಲ್ಲಿದ್ದ ಗಾಳಿಯ ಚಲನೆಯ ಮೇಲೆ ಪರಿಣಾಮ ಬೀರಿದೆ ಎನ್ನಲಾಗ್ತಿದೆ. ಅಸಹಜ ಮಳೆ, ಅಕಾಲಿಕ ಮಳೆ,
ಮೇಘಸ್ಪೋಟಗಳಂತಹ ಸಂಗತಿಗಳಿಗೆ ನೇರ ಕಾರಣ ಇದೇ ಎನ್ನುವುದನ್ನು ಖಂಡಿತವಾಗಿ ಒಪ್ಪಬಹುದು.
***
* ಒಂದು ಸಮ್ಮೇಳನವೆಂದರೆ ಕೇವಲ ಅಕ್ಷರಗಳ ಮಾತುಕತೆಯೇ?
* ಗೋಷ್ಠಿ ಭಾಷಣ ಗೌರವ ಸಮರ್ಪಣೆ ಇದು ಮಾತ್ರ ನಡೆದರೆ ಸಾಕೇ?
* ಊರು ಬೋರಿಡುವ ಹೊತ್ತಿನಲ್ಲಿ ನೂರು ಗ್ರಾಮಿನ ಕವಿತೆ ಓದಿ ಆಂಗಿಕವಾಗಿ, ಮೇಜುಗೀಜು ಕುಟ್ಟಿ, ದೊಡ್ಡ, ಸಣ್ಣ ಸ್ವರದಲ್ಲಿ ಭಾಷಣ ಮಾಡಿದರೆ ಸಮ್ಮೇಳನದ ಪಾತ್ರ ಮುಗಿಯಿತೇ?
* ಬದಲಾಗುವ ಸರ್ಕಾರಗಳು, ಬದಲಾಗುವ ಜನಪ್ರತಿನಿಧಿಗಳು, ಬಣ್ಣ ಬದಲಿಸುವ ಗೋಸುಂಬೆಗಳು ಮತ್ತವರ ಕಿಸೆ ತುಂಬಿಸುವ ಯೋಜನೆಗಳಿಗೆ ಸಮಾಜದ ಈ ಎಲೈಟ್ ವರ್ಗ ಎನಿಸಿಕೊಳ್ಳುವ ಅಕ್ಷರಪ್ರಿಯರು ಪ್ರತಿಕ್ರಿಯಿಸಬೇಕಾಗಿರುವುದು ಹೇಗೆ?
* ಪರಿಸರ ಅಪಸ್ವರವೆತ್ತಿದಾಗ ಅದರ ನೇರ ಮತ್ತು ತೀವ್ರ ಪರಿಣಾಮ ಎದುರಿಸುವ ರೈತರ ಬವಣೆಗಳಿಗೆ ಸಾಹಿತಿಗಳ ಸ್ಪಂದನೆ ಏನು?
* ಸಹ್ಯಾದ್ರಿ ಉಳಿಸಿ, ಕಾಗದ ಕಡಿಮೆ ಬಳಸಿ, ನವೀಕರಿಸಬಹುದಾದ ಸಂಪನ್ಮೂಲಗಳಿಗೆ ಆದ್ಯತೆ ಕೊಡಿ ಎನ್ನುವುದನ್ನು ದೊಡ್ಡ ಸ್ವರದಲ್ಲಿ ಹೇಳಬೇಕೆಂದರೂ ನೋಡುವವರ ದೃಷ್ಟಿಯಲ್ಲಿ ಔಟ್ ಡೇಟೇಡ್ ಆಗುವ ಭಯದಿಂದ ಜಾಣಮೌನ ಧರಿಸಿರುವ ನನ್ನಂತಹವರು ಸಾಕಷ್ಟು ಮಂದಿ ಇದ್ದಾರೆಯೇ?
* ಅವರೆಲ್ಲರ ಸ್ವರಗಳು ಒಟ್ಟುಗೂಡಿದರೆ ಡೋಂಗಿ ಯೋಜನೆಗಳಿಗೆ ಶ್ರೀಕಾರ ಹಾಕುವುದು ಇನ್ನಾದರೂ ನಿಲ್ಲಬಹುದೇ?
* ಸಮ್ಮೇಳನದ ಅಧ್ಯಕ್ಷರು ಈ ಇಷ್ಟೂ ಸಂಗತಿಗಳನ್ನು ವ್ಯವಸ್ಥೆಗೆ ತಲುಪಿಸುವ ಕಾರ್ಯ ಮಾಡಬಲ್ಲರೇ? ಪರಿಸರಕ್ಕೆ ಹಾನಿಯಾಗುವ ಯಾವುದೇ ಹೊಣೆಗೇಡಿ ಯೋಜನೆಗಳು ಕಂಡಾಗ ಎಚ್ಚರದ ಸ್ಥಿತಿಯಲ್ಲಿ ಈ ಬುದ್ಧಿಜೀವಿ ವರ್ಗ ಸದಾ ಇರಬಲ್ಲರೇ?
* ಪರಿಸರದ ಸಂಗತಿಗಳಿಗೆ ‘ನಾನು’ ವೈಯಕ್ತಿಕವಾಗಿ ಎಷ್ಟು ಎಚ್ಚರದಿಂದ ಇರಬಲ್ಲೆ?
ಒಂದು ಸಮ್ಮೇಳನ ಸಂಘಟಿಸುವ ಮುನ್ನ ಪ್ರತ್ಯಕ್ಷ ಪರೋಕ್ಷ ಪಾತ್ರಧಾರಿಗಳು ಈ ಇಷ್ಟೂ ಪ್ರಶ್ನೆಗಳನ್ನು ನಿರಂತರವಾಗಿ ಕೇಳಿಕೊಳ್ಳುತ್ತಲೇ ಹೋದಾಗ ಒಂದು ಹಂತದ ಬದಲಾವಣೆ ನಿರೀಕ್ಷಿಸಬಹುದೇನೊ.
***
ಸದ್ಯ ಮಂಡ್ಯದಲ್ಲಿ ನಡೆಯುತ್ತಿರುವ ಈ ಸಮ್ಮೇಳನ ಪರಿಸರಕ್ಕೆ ಪೂರಕವಾಗಿ ನಡೆಯಬೇಕೆಂದರೆ ಕಸಾಪ ಒಂದಷ್ಟು ಗಟ್ಟಿ ಬದಲಾವಣೆಗಳನ್ನು ಖಂಡಿತವಾಗಿ ಮಾಡಲೇಬೇಕಾಗುತ್ತದೆ.
#GoPaperless ಅಭಿಯಾನಕ್ಕೆ ಎಂಬತ್ತೇಳನೆ ಸಮ್ಮೇಳನ ಚಾಲನೆ ನೀಡಬೇಕೆಂದು ಒಕ್ಕೊರಲಿನಿಂದ ಆಗ್ರಹಿಸುವ ಅಗತ್ಯವಿದೆ. ಡಿಜಿಟಲ್ ಜಗತ್ತಿನಲ್ಲಿ ಇದು ಅತ್ಯಂತ ಸಲೀಸು ಸಂಗತಿ.
ಇ ಮಾಧ್ಯಮದ ಮೂಲಕವೇ ಕರೆಯೋಲೆ, ಆಹ್ವಾನ ಪತ್ರಿಕೆ, ಕಲಾವಿದರಿಗೆ ಹೋಗಬೇಕಾದ ಆಹ್ವಾನ, ಮಾಹಿತಿ ನೋಟಿಸು ಸಂದೇಶಗಳೆಲ್ಲವನ್ನೂ ತಲುಪಿಸುವ ಕುರಿತು ಕಸಾಪ ಮೊದಲಿಗೆ ರೂಪುರೇಷೆ ಸಿದ್ಧ ಮಾಡಿಕೊಂಡು ಪತ್ರಿಕಾ ಹೇಳಿಕೆ ನೀಡಿದರೆ ಅತ್ಯಂತ ಸೂಕ್ತ.
#ಕಟೌಟ್ ಮತ್ತು ಬ್ಯಾನರ್‌ಗಳನ್ನು ಸಂಪೂರ್ಣ ನಿಷೇಧಿಸಿದರೆ ಒಳಿತು.
#ಮಾಹಿತಿಯುಕ್ತ ಸಣ್ಣ ಸಣ್ಣ ಫಲಕಗಳು ಸಮ್ಮೇಳನಕ್ಕೆ ಬಂದವರಿಗೆ ಮಾರ್ಗದರ್ಶಿಯಾಗಬಲ್ಲವು.
#ಸಮ್ಮೇಳನ ಅಧ್ಯಕ್ಷರ ಮೆರವಣಿಗೆಯಲ್ಲಿ ಹೆಣ್ಮಕ್ಳಿಂದ ಪೂರ್ಣಕುಂಭ ಸ್ವಾಗತದ ಬದಲು ಮಂಡ್ಯ ಜಿಲ್ಲೆಯ ಸಂಸ್ಕೃತಿ ಪ್ರಾದೇಶಿಕತೆ ಬಿಂಬಿಸುವ ಉಡುಗೆಗಳನ್ನು ತೊಟ್ಟ ಗಂಡಸರು ಭಾಗವಹಿಸಿದರೆ ಹೆಚ್ಚು ಅರ್ಥಪೂರ್ಣ.
#ಕಸಾಪ ಊಟ ಕುಡಿಯುವ ನೀರು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಾಗ ಕಾಲಕಾಲಕ್ಕೆ ಅಪ್ಡೇಟ್ ಆಗುವ ಅಗತ್ಯವಿದೆ.
#ಪಟಾಕಿ ಸಿಡಿಸುವುದನ್ನು ಸಂಪೂರ್ಣ ನಿಷೇಧಿಸುವುದು ಅನಿವಾರ್ಯ.
#ಹಾವೇರಿಯಂತೆ ಮಂಡ್ಯದಲ್ಲಿ ಕೂಡ ನಗರದ ಹೊರವಲಯದಲ್ಲಿ ಸಮ್ಮೇಳನ ಜರುಗುತ್ತಿರುವುದರಿಂದ ಬಂದ ಅತಿಥಿಗಳಿಗೆ ಸುಗಮ ಸಂಚಾರ ವ್ಯವಸ್ಥೆ ಅವಶ್ಯ.
***
* ಎಲ್ಲಿಂದಲೋ ಆಮದಾಗುವ ಹಾರ ಪೇಟ ತುರಾಯಿಗಳ ಬದಲಿಗೆ ಆಯಾ ಜಿಲ್ಲೆಯ ಉತ್ಪನ್ನಗಳನ್ನು ಉಡುಗೊರೆಯಾಗಿ ನೀಡುವುದು ತೂಕದ ನಡೆ.
ಉದಾಹರಣೆಗೆ ಸಕಲೇಶಪುರದಲ್ಲಿ ನಡೆದರೆ ಕಾಫಿಪುಡಿ ಕಾಳುಮೆಣಸು ಏಲಕ್ಕಿಗಳನ್ನೊಳಗೊಂಡ ಉಡುಗೊರೆ, ಮಂಡ್ಯದಲ್ಲಿ ಬೆಲ್ಲದ ಮೌಲ್ಯವರ್ಧಿತ ಉತ್ಪನ್ನಗಳ ಉಡುಗೊರೆ, ಮೈಸೂರಿನಲ್ಲಾದರೆ ಮೈಸೂರು ಸ್ಯಾಂಡಲ್ ಕಂಪನಿಯ ಉತ್ಪನ್ನಗಳ ಉಡುಗೊರೆಗಳನ್ನು ನೀಡಿದರೆ ಆಯಾ ಜಿಲ್ಲೆಯನ್ನೂ, ಆಯಾ ಭಾಗದ ರೈತರನ್ನು, ಪ್ರಾದೇಶಿಕತೆಯನ್ನೂ ಗೌರವಿಸಿದಂತೆ ಆಗುತ್ತದೆ.
* ಹೆಚ್ಚಿಗೇನೂ ಉಪಯೋಗಕ್ಕೆ ಬಾರದ ಶಾಲುಗಳ ಬದಲಿಗೆ ದಿನ ಬಳಕೆಗೆ ಬರುವ ಹತ್ತಿಯ/ಖಾದಿಯ ಬಿಳಿಯ ಟವೆಲ್‌ಗಳ ಮೂಲಕ ಸನ್ಮಾನಿಸುವುದು ಅರ್ಥಪೂರ್ಣ. (ಅನೇಕಲ್ ಸುಗಮ ಸಾಹಿತ್ಯ ಸಮ್ಮೇಳನದ ಮಾದರಿ ಗಮನಿಸಬಹುದು)
* ಮರದ ಹಲಗೆಯಂತಹ ದೊಡ್ಡ ಗಾತ್ರದ ಮೊಮೆಂಟೊಗಳ ಬದಲಿಗೆ ಸಣ್ಣದಾದ ಕಂಚಿನ ಅಥವಾ ವೈಟ್ ಮೆಟಲಿನ ಪ್ರತಿಮೆಗಳು ಸೂಕ್ತ. ಮರದ್ದೇ ಆದರೂ ಸಣ್ಣದಾಗಿಯೂ ಸೂಕ್ಷ್ಮವಂತಿಕೆಯೂ ಇದ್ದರೆ ಒಳಿತು.
ಆ ಪ್ರತಿಮೆಗಳಲ್ಲಿ ಸಮ್ಮೇಳನ ನಡೆಯುತ್ತಿರುವ ಪ್ರದೇಶದ ಅಸ್ಮಿತೆ ಸಾಂಕೇತಿಕವಾಗಿ ಬಳಕೆಯಾಗಿದ್ದರೆ ಹೆಚ್ಚು ಪ್ರಾತಿನಿಧಿಕ.
ಉದಾಹರಣೆಗೆ ಕೊಡಗಿನಲ್ಲಾದರೆ ಕಿತ್ತಳೆ ಮರ, ಮಂಗಳೂರಿನಲ್ಲಾದರೆ ಸಹ್ಯಾದ್ರಿ ಶ್ರೇಣಿಗಳು, ಮಂಡ್ಯದಲ್ಲಿ ನಡೆಯುತ್ತಿರುವ ಈ ಸಮ್ಮೇಳನದಲ್ಲಿ ಕಬ್ಬಿನ ರಾಶಿ ಅಥವಾ ಕಬ್ಬು ತುಂಬಿರುವ ವಾಹನ ಅಥವಾ ಭತ್ತದ ಗದ್ದೆಗಳ ಮಾದರಿಯಂತಹ ರಚನೆಗಳು, ಶ್ರವಣಬೆಳಗೊಳದಲ್ಲಿ ನಡೆದರೆ ಗೊಮ್ಮಟ ಮೂರ್ತಿ, ಉತ್ತರ ಕನ್ನಡದಲ್ಲಿ ನಡೆದರೆ ಕಾಳುಮೆಣಸಿನ ಬಳ್ಳಿ ಅಥವಾ ಅಡಿಕೆ ಮರಗಳಿರುವ ಮೊಮೆಂಟೊ ಇದ್ದರೆ ಸೊಗಸು, ಅರ್ಥಪೂರ್ಣ ಮತ್ತು ಅವಶ್ಯ.
***
ಪರಿಸರಕ್ಕೆ ಪೂರಕವಾಗಿ ಒಂದು ಸಮ್ಮೇಳನ ಜರುಗಬೇಕೆಂದರೆ ಮೇಲೆ ಹೇಳಿರುವ ಸಂಗತಿಗಳ ನಂತರವೂ ಸಾಕಷ್ಟು ವಿಚಾರಗಳು ಬಿಟ್ಟು ಹೋಗಿರುತ್ತವೆ. ಅಂತಹ ಸಂಗತಿಗಳನ್ನು ಆಸಕ್ತರು ಪ್ರಸ್ತಾಪಿಸುವ ಮೂಲಕ ಒಟ್ಟಾಗಿ ಸಮ್ಮೇಳನಕ್ಕೆ ಪರಿಸರ ಪ್ರಿಯ ಸಮ್ಮೇಳನದ ನಿರ್ದಿಷ್ಟ ರೂಪ ಕೊಡಬಹುದು. ಇಂತಹ ಸಂಗತಿಗಳು ಅನವಶ್ಯಕ ಖರ್ಚಿಗೆ ಕಡಿವಾಣ ಹಾಕುತ್ತವೆ. ಕಾಗದ ರಹಿತ, ಕಟೌಟ್ ಬ್ಯಾನರ್‌ರಹಿತ ಸಮ್ಮೇಳನವು ಅಗಾಧ ಪ್ರಮಾಣದಲ್ಲಿ ಮರಗಳನ್ನು ಉಳಿಸಲು ನೆರವಾಗುತ್ತದೆ.
ಮುಖ್ಯವಾಗಿ ಕ ಸಾ ಪ ಅಧ್ಯಕ್ಷರಿಗೆ ಪರಿಸರ ಪ್ರಿಯ ಸಮ್ಮೇಳನದ ಕುರಿತು ಆಸಕ್ತಿ ಅಭಿರುಚಿಯಿದ್ದರೆ ಇಡೀ ಸಮ್ಮೇಳನ ಹಲವು ಪ್ರಥಮಗಳಿಗೆ ಸಾಕ್ಷಿಯಾಗುವ ಸಕಲ ಸಾಧ್ಯತೆಗಳೂ ಇವೆ. ಮನಸ್ಸು ಮಾಡಬೇಕು ಮತ್ತು ಮನವೊಲಿಸುವ ಕಾರ್ಯವೂ ಆಗಬೇಕು.
—–
#ನಂದಿನಿಹೆದ್ದುರ್ಗ
#ಕಸಾಪ
#ಮಹೇಶಜೋಷಿ
#ಮಂಡ್ಯ
#ಮಂಡ್ಯಸಾಹಿತ್ಯಸಮ್ಮೇಳನ
#ಗೊರುಚ
#ಎಂಬತ್ತೇಳನೆಅಖಿಲಭಾರತಕನ್ನಡಸಾಹಿತ್ಯಸಮ್ಮೇಳನ