newsics.com | ನ್ಯೂಸಿಕ್ಸ್
ತುಮಕೂರು: ಜಿಲ್ಲೆಯ ತಿಪಟೂರು ನಗರದ ಐಬಿ ಸರ್ಕಲ್‌ನಲ್ಲಿ ಮೈ ಝುಮ್ಮೆನ್ನಿಸುವ ಅಪಘಾತವೊಂದು ನಡೆದಿದೆ. ನಿಯಂತ್ರಣ ತಪ್ಪಿದ ಭಾರಿ ಲಾರಿಯೊಂದು ವಿದ್ಯುತ್ ಕಂಬಕ್ಕೆ ಗುದ್ದಿ, ಬಳಿಕ ನಡೆದುಕೊಂಡು ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿನಿಯ ಮೇಲೆ ಹರಿದಿದೆ. ಆದರೂ ವಿದ್ಯಾರ್ಥಿನಿ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ವೇಗವಾಗಿ ಬಂದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮೊದಲು ರಸ್ತೆ ಬದಿಯ ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ನಂತರ ಅಲ್ಲಿಯೇ ಹೋಗುತ್ತಿದ್ದ ವಿದ್ಯಾರ್ಥಿನಿಗೆ ಗುದ್ದಿದೆ. ಆದರೆ, ಲಾರಿಯ ದೈತ್ಯ ಚಕ್ರಗಳು ಯುವತಿಯ ಮೈಮೇಲೆ ಹರಿಯದೆ, ವಾಹನದ ಮಧ್ಯಭಾಗದ ಖಾಲಿ ಜಾಗದಲ್ಲಿ ಆಕೆ ಸಿಲುಕಿಕೊಂಡಿದ್ದಾಳೆ. ಇದನ್ನು ನೋಡಿದ ತಕ್ಷಣ ಸ್ಥಳೀಯರು ಓಡಿ ಬಂದು ಲಾರಿ ನಿಲ್ಲಿಸಿ, ವಿದ್ಯಾರ್ಥಿನಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಗಾಯಗೊಂಡ ವಿದ್ಯಾರ್ಥಿನಿಯನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಗಿದ್ದು, ಸದ್ಯ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಇತ್ತ ಮಾಹಿತಿ ತಿಳಿಯುತ್ತಿದ್ದಂತೆ ತಿಪಟೂರು ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ಕಾರಣವಾದ ಲಾರಿಯನ್ನು ಜಪ್ತಿ ಮಾಡಲಾಗಿದ್ದು, ಚಾಲಕನ ವಿರುದ್ಧ ಕೇಸ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.