newsics.com | ನ್ಯೂಸಿಕ್ಸ್
ಇಸ್ಲಾಮಾಬಾದ್: ಮಂಗಳವಾರ (ಜುಲೈ 7) ತಡರಾತ್ರಿ ಪಾಕಿಸ್ತಾನದ (Pakistan) ಕರಾಚಿ ಬಂದರಿನ ಬಳಿ ಐವರು ಸಿಬ್ಬಂದಿ ಇದ್ದ ಸರಕು ವಿಮಾನವೊಂದು ನಾಪತ್ತೆಯಾಗಿದೆ..
ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ ಬಂದ ವಿಮಾನ ವೇಗವಾಗಿ ಕೆಳಗಿಳಿದು ವಾಯು ಸಂಚಾರ ನಿಯಂತ್ರಕರೊಂದಿಗೆ ಸಂಪರ್ಕ ಕಳೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅರೇಬಿಯನ್ ಸಮುದ್ರದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿವೆ ಎಂದು ಎಕ್ಸ್‌ನಲ್ಲಿ ಪಾಕಿಸ್ತಾನದ ವಿಮಾನ ನಿಲ್ದಾಣ ಪ್ರಾಧಿಕಾರವು ಪೋಸ್ಟ್ ಮಾಡಿದೆ.
ವಿಮಾನ ಕಣ್ಮರೆಗೆ ಕಾರಣ ಏನು ಎಂಬುದು ತಕ್ಷಣವೇ ತಿಳಿದುಬಂದಿಲ್ಲ. ಯುಎಇಯ ಶಾರ್ಜಾದಿಂದ ಕರಾಚಿಗೆ ಆಗಮಿಸಿದ ಬೋಯಿಂಗ್ 737 ವಿಮಾನ ಜುಲೈ 7ರ ರಾತ್ರಿ 9.18ಕ್ಕೆ ಸಂಚಾರ ವ್ಯವಸ್ಥೆಯ ಸಮಸ್ಯೆಯಿಂದ ನಾಪತ್ತೆಯಾಗಿದೆ.
ವಿಮಾನವು ರಾತ್ರಿ ಸುಮಾರು 9.21ರ ಸುಮಾರಿಗೆ ತನ್ನ ಹಾರಾಟದ ದಿಕ್ಕಿನಲ್ಲಿ ಹಠಾತ್ ಬದಲಾವಣೆ ಮಾಡಿರುವುದು ರಾಡಾರ್ ಮಾಹಿತಿಯಿಂದ ತಿಳಿದುಬಂದಿದೆ. ಬಳಿಕ ಕರಾಚಿಯಿಂದ ಪಶ್ಚಿಮಕ್ಕೆ ಸುಮಾರು 155 ನಾಟಿಕಲ್ ಮೈಲುಗಳು (287 ಕಿ.ಮೀ./178 ಮೈಲುಗಳು) ದೂರದಲ್ಲಿದ್ದಾಗ ವಿಮಾನದೊಂದಿಗೆ ರಾಡಾರ್ ಹಾಗೂ ರೇಡಿಯೋ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿತು ಎಂದು ಮೂಲಗಳು ತಿಳಿಸಿವೆ.
10 ಜನರಿದ್ದ ಇಂಡೋನೇಷ್ಯಾ ವಿಮಾನ ನಾಪತ್ತೆ
ವಿಮಾನ ನಿಲ್ದಾಣ ಪ್ರಾಧಿಕಾರದ ಪ್ರಕಾರ, ಅಧಿಕಾರಿಗಳು ರಕ್ಷಣಾ ಸಮನ್ವಯ ಕೇಂದ್ರವನ್ನು ಸಕ್ರಿಯಗೊಳಿಸಿದ್ದಾರೆ. ನಾಪತ್ತೆಯಾದ ವಿಮಾನವನ್ನು ಪತ್ತೆಹಚ್ಚಲು ಸಮುದ್ರದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಪ್ರಾರಂಭಿಸಲಾಗಿದೆ.
ವಿಮಾನವು ರಾಡಾರ್‌ನಿಂದ ಕಣ್ಮರೆಯಾಗಲು ಕಾರಣವೇನೆಂದು ಇನ್ನೂ ಸ್ಪಷ್ಟವಾಗಿಲ್ಲ ಎಂದು ವಾಯುಯಾನ ತಜ್ಞ ಇಮ್ರಾನ್ ಅಸ್ಲಾಂ ತಿಳಿಸಿದ್ದಾರೆ.
ವಿಮಾನವೊಂದರ ಎಂಜಿನ್ ವೈಫಲ್ಯವಾದರೆ ಅದು ಸಾಮಾನ್ಯವಾಗಿ ಹಠಾತ್ತನೆ ಬೀಳುವ ಬದಲು ಗ್ಲೈಡ್ ಆಗುತ್ತಾ ಸಾಗುತ್ತದೆ. ಹಠಾತ್ ಹೇಗೆ ಕೆಳಕ್ಕೆ ಇಳಿಯಿತು ಎಂದು ತನಗೆ ಇನ್ನೂ ಅರ್ಥವಾಗುತ್ತಿಲ್ಲ ಎಂದು ಅವರು ಹೇಳಿದರು.
ಪಾಕಿಸ್ತಾನದ ಮಿಲಿಟರಿ ಮತ್ತು ನಾಗರಿಕ ಅಧಿಕಾರಿಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಹಲವು ವಾಯು ಮತ್ತು ಸಮುದ್ರ ಘಟಕಗಳನ್ನು ನಿಯೋಜಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಪಾಕಿಸ್ತಾನ ನೌಕಾಪಡೆಯ ಯುದ್ಧನೌಕೆ ಪಿಎನ್‌ಎಸ್ ಜುಲ್ಫಿಕರ್ ಅನ್ನು ವಿಮಾನದ ಸಂಪರ್ಕ ಕಡಿತಗೊಂಡ ಪ್ರದೇಶಕ್ಕೆ ತ್ವರಿತವಾಗಿ ಕರೆದೊಯ್ಯಲಾಯಿತು. ಪಾಕಿಸ್ತಾನ ವಾಯುಪಡೆಯು ವಿಮಾನಗಳನ್ನು ಸಹ ನಿಯೋಜಿಸಿದೆ ಎಂದು ಅವರು ಹೇಳಿದರು. ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ಪಾಕಿಸ್ತಾನ ನೌಕಾಪಡೆಯ ಎಟಿಆರ್ ವಿಮಾನವು ಟರ್ಬಟ್‌ನಿಂದ ಹೊರಟಿದೆ.
ಪಾಕಿಸ್ತಾನ ರಾಷ್ಟ್ರೀಯ ಶಿಪ್ಪಿಂಗ್ ಕಾರ್ಪೊರೇಷನ್‌ನ ವ್ಯಾಪಾರಿ ಹಡಗನ್ನು ಸಹ ಕಳುಹಿಸಲಾಗಿದ್ದು, ಅದು ಕೂಡ ಶೋಧ ಕಾರ್ಯಾಚರಣೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ