newsics.com | ನ್ಯೂಸಿಕ್ಸ್
ಬೆಂಗಳೂರು: ಜುಲೈ ತಿಂಗಳಲ್ಲಿ ಹಿಂದೆಂದೂ ಕಾಣದ ಶತಮಾನದ ದಾಖಲೆಯ ತಾಪಮಾನಕ್ಕೆ ಸಾಕ್ಷಿಯಾಗಿದ್ದ ರಾಜಧಾನಿ ಜನತೆಗೆ ಕೊನೆಗೂ ವರುಣದೇವ ತಂಪು ನೀಡಿದ್ದಾನೆ. ನಗರದ ಹಲವೆಡೆ ದಿಢೀರ್ ಮಳೆ ಸುರಿದಿದ್ದು, ಬಿಸಿಲಿನ ಬೇಗೆಯಿಂದ ಹೈರಾಣಾಗಿದ್ದ ಸಿಟಿ ಜನ ನಿರಾಳರಾಗಿದ್ದಾರೆ. ಆದರೆ ಏಕಾಏಕಿ ಸುರಿದ ಈ ಮಳೆಯಿಂದಾಗಿ ಸಾರ್ವಜನಿಕ ಸಂಚಾರಕ್ಕೆ ಕೊಂಚ ಅಡಚಣೆಯಾಯಿತು.
https://youtube.com/shorts/l5ola2ZbKBY?si=HLzDOO-WOUEI5JJw
ಮಲ್ಲೇಶ್ವರಂ, ರಾಜಾಜಿನಗರ, ಮೆಜೆಸ್ಟಿಕ್ ಹಾಗೂ ಕುರುಬರಹಳ್ಳಿಯ ಆಸುಪಾಸಿನಲ್ಲಿ ಮಳೆಯ ತೀವ್ರತೆ ಹೆಚ್ಚಾಗಿತ್ತು. ಕಚೇರಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಜನರು ರಸ್ತೆ ಬದಿಯ ಮೇಲ್ಸೇತುವೆಗಳು, ಬಸ್ ನಿಲ್ದಾಣ ಹಾಗೂ ಅಂಡರ್ಪಾಸ್ಗಳಲ್ಲಿ ನಿಂತು ಮಳೆಯಿಂದ ರಕ್ಷಣೆ ಪಡೆದುಕೊಂಡರು.
ಕರಾವಳಿಯಲ್ಲಿ ಗಾಳಿ ಸಹಿತ ಮಳೆ ಭೀತಿ
ರಾಜ್ಯದ ಇತರೆ ಭಾಗಗಳಲ್ಲೂ ಮುಂದಿನ ಕೆಲ ದಿನಗಳ ಹವಾಮಾನ ವರದಿಯನ್ನು ಭಾರತೀಯ ಹವಾಮಾನ ಇಲಾಖೆ (IMD) ಹಂಚಿಕೊಂಡಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಸೇರಿದಂತೆ ಕರಾವಳಿ ಭಾಗದಲ್ಲಿ ಗಂಟೆಗೆ ಸುಮಾರು 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಇದರೊಂದಿಗೆ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.
ಬೆಂಗಳೂರು ಹೊರವಲಯ, ಮೈಸೂರು, ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ರಾಮನಗರ, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಸೇರಿದಂತೆ ದಕ್ಷಿಣ ಒಳನಾಡಿನ ಹಲವೆಡೆ ಮೋಡ ಕವಿದ ವಾತಾವರಣದೊಂದಿಗೆ ಹಗುರ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕದಾದ್ಯಂತ ಈ ವಾರ ನೈಋತ್ಯ ಮುಂಗಾರು ದುರ್ಬಲಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಇದರ ಪರಿಣಾಮವಾಗಿ ದಿನದ ಗರಿಷ್ಠ ತಾಪಮಾನದಲ್ಲಿ ಮತ್ತೆ ಏರಿಕೆಯಾಗಲಿದೆ. ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಗಾಳಿ ಸಹಿತ ಸಾಧಾರಣ ಮಳೆಯಾಗಲಿದ್ದರೆ, ಬಯಲುಸೀಮೆ ಭಾಗದಲ್ಲಿ ಒಣ ಹವೆ ಮತ್ತು ಬಿಸಿಲಿನ ವಾತಾವರಣ ಮುಂದುವರಿಯಲಿದೆ.