newsics.com | ನ್ಯೂಸಿಕ್ಸ್
ಬೆಂಗಳೂರು: ದೇಶದ ಮಹತ್ವದ ಬಾಹ್ಯಾಕಾಶ ಯೋಜನೆಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಕೇಂದ್ರ ಬಾಹ್ಯಾಕಾಶ ಇಲಾಖೆಯು (DoS) ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಇಸ್ರೋ (ISRO) ವಿಜ್ಞಾನಿಗಳು ಮತ್ತು ತಾಂತ್ರಿಕ ಸಿಬ್ಬಂದಿಯ ರಾಜೀನಾಮೆ ಹಾಗೂ ಸ್ವಯಂ ನಿವೃತ್ತಿ (VRS) ಪ್ರಕ್ರಿಯೆಗೆ ಹೊಸ ನಿಯಮಗಳನ್ನು ತರಲಾಗಿದ್ದು,
ವಿಶೇಷವಾಗಿ ಭಾರತದ ಹೆಮ್ಮೆಯ ‘ಗಗನಯಾನ’ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಗ್ರೂಪ್ ‘A’ ಶ್ರೇಣಿಯ ವಿಜ್ಞಾನಿಗಳು ತಕ್ಷಣವೇ ಸಂಸ್ಥೆ ಬಿಟ್ಟು ಹೋಗುವುದಕ್ಕೆ ಬ್ರೇಕ್ ಹಾಕಲಾಗಿದೆ.
ಹೊಸ ನಿಯಮದಲ್ಲಿ ಏನಿದೆ?
- ಈ ಹಿಂದೆ ಇಸ್ರೋದ ಆಯಾ ಕೇಂದ್ರಗಳ ನಿರ್ದೇಶಕರಿಗೇ ರಾಜೀನಾಮೆ ಅಂಗೀಕರಿಸುವ ಅಧಿಕಾರವಿತ್ತು. ಆದರೆ ಇನ್ನು ಮುಂದೆ ಪ್ರಾಜೆಕ್ಟ್ಗಳು ಮುಗಿಯುವವರೆಗೆ ವಿಜ್ಞಾನಿಗಳನ್ನು ಬಿಡುಗಡೆ ಮಾಡುವಂತಿಲ್ಲ. ಯಾವುದೇ ರಾಜೀನಾಮೆ ಅಥವಾ ಸ್ವಯಂ ನಿವೃತ್ತಿಯ ಅರ್ಜಿಗಳನ್ನು ಅಂತಿಮ ಒಪ್ಪಿಗೆಗಾಗಿ ನವದೆಹಲಿಯಲ್ಲಿರುವ ಬಾಹ್ಯಾಕಾಶ ಇಲಾಖೆಯ ಪ್ರಧಾನ ಕಚೇರಿಗೆ ಕಳುಹಿಸುವುದು ಈಗ ಕಡ್ಡಾಯವಾಗಿದೆ.
ಕಠಿಣ ಕ್ರಮಕ್ಕೆ ಕಾರಣವೇನು?
ಇತ್ತೀಚಿನ ದಿನಗಳಲ್ಲಿ ಇಸ್ರೋದ ಸುಮಾರು 120 ಕ್ಕೂ ಹೆಚ್ಚು ಅನುಭವಿ ವಿಜ್ಞಾನಿಗಳು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿ ಹೊರನಡೆದಿದ್ದಾರೆ. ಬೆಂಗಳೂರಿನ ಯು. ಆರ್. ರಾವ್ ಉಪಗ್ರಹ ಕೇಂದ್ರವೊಂದರಿಂದಲೇ ಸುಮಾರು 80 ವಿಜ್ಞಾನಿಗಳು ಹೊರಹೋಗಿದ್ದಾರೆ.
ಖಾಸಗಿ ಬಾಹ್ಯಾಕಾಶ ವಲಯದಲ್ಲಿ ದೊಡ್ಡ ಸಂಬಳ ಹಾಗೂ ಉತ್ತಮ ಅವಕಾಶಗಳು ಸಿಗುತ್ತಿರುವುದರಿಂದ ಹಿರಿಯ ವಿಜ್ಞಾನಿಗಳು ಇಸ್ರೋ ತೊರೆಯುತ್ತಿದ್ದಾರೆ. ಇದರಿಂದ ಬಾಹ್ಯಾಕಾಶ ಯೋಜನೆಗಳಿಗೆ ಧಕ್ಕೆಯಾಗಬಾರದು ಎಂಬ ಕಾರಣಕ್ಕೆ ಸರ್ಕಾರ ಈ ಕಠಿಣ ಕ್ರಮ ಕೈಗೊಂಡಿದೆ.