newsics.com | ನ್ಯೂಸಿಕ್ಸ್
ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಕಾಯಿಲೆಯ ಪ್ರಕರಣಗಳು ಹೆಚ್ಚಾಗುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಇದರ ಬೆನ್ನಲ್ಲೇ, ಗ್ಯಾಸ್ ಸ್ಟವ್ನ ಮೇಲೆ ನೇರವಾಗಿ ಚಪಾತಿ ಸುಡುವುದರಿಂದ ಮತ್ತು ಬ್ರೆಡ್ ತಿನ್ನುವುದರಿಂದ ಕ್ಯಾನ್ಸರ್ ಬರುತ್ತದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ, ಈ ಭಯದ ಹಿಂದಿರುವ ಅಸಲಿ ಸತ್ಯವೇನು ಎಂಬುದನ್ನು ಖ್ಯಾತ ಕ್ಯಾನ್ಸರ್ ತಜ್ಞರಾದ ಡಾ. ಜಯೇಶ್ ಶರ್ಮಾ ಅವರು ವೈಜ್ಞಾನಿಕವಾಗಿ ವಿವರಿಸಿದ್ದಾರೆ.
ಗ್ಯಾಸ್ ಉರಿಯ ಮೇಲೆ ನೇರವಾಗಿ ಚಪಾತಿ ಬೇಯಿಸುವುದರಿಂದ ಅನಿಲದಲ್ಲಿರುವ ಅಪಾಯಕಾರಿ ರಾಸಾಯನಿಕಗಳು ಚಪಾತಿಯೊಳಗೆ ಸೇರಿಕೊಳ್ಳುತ್ತವೆ ಎಂಬುದು ಜನರ ಸಾಮಾನ್ಯ ನಂಬಿಕೆ. ಆದರೆ ವೈದ್ಯರ ಪ್ರಕಾರ ಇದು ಕೇವಲ ಭ್ರಮೆ. ಗ್ಯಾಸ್ ಉರಿಯುವಾಗ ಅದರ ಪ್ರಕ್ರಿಯೆಯಲ್ಲಿ ರಾಸಾಯನಿಕಗಳು ಸಂಪೂರ್ಣವಾಗಿ ಸುಟ್ಟು ಹೋಗುತ್ತವೆ. ಒಂದು ವೇಳೆ ಗ್ಯಾಸ್ ಚಪಾತಿಯೊಳಗೆ ಸೇರುತ್ತಿದ್ದರೆ ನಮಗೆ ಗ್ಯಾಸ್ ವಾಸನೆ ಬರಬೇಕಿತ್ತು. ಆದರೆ ಅಂತಹ ಯಾವುದೇ ವಾಸನೆ ಬರುವುದಿಲ್ಲ. ಚಪಾತಿಯನ್ನು ಅತಿಯಾಗಿ ಸುಟ್ಟು ಕಪ್ಪು ಕಲೆಗಳು (Charred spots) ಬೀಳುವಂತೆ ಮಾಡಬಾರದು. ಹೀಗೆ ಮಾಡುವುದರಿಂದ ಅದರಲ್ಲಿ ‘ಅಕ್ರಿಲಮೈಡ್’ ಎಂಬ ರಾಸಾಯನಿಕ ಉತ್ಪತ್ತಿಯಾಗುತ್ತದೆ. ಇದು ದೀರ್ಘಾವಧಿಯಲ್ಲಿ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದ್ದರಿಂದ ಮಂದ ಉರಿಯಲ್ಲಿ ಹಗುರವಾಗಿ ಬೇಯಿಸುವುದು ಸೂಕ್ತ.
ಬ್ರೆಡ್ ತಿಂದರೆ ಕ್ಯಾನ್ಸರ್ ಬರುತ್ತದೆಯೇ?
ಬ್ರೆಡ್ ತಯಾರಿಸುವಾಗ ಉಂಟಾಗುವ ಬಿಸಿಯಿಂದಾಗಿ ಅದರಲ್ಲಿ ‘ಅಕ್ರಿಲಮೈಡ್’ (Acrylamide) ಎಂಬ ಅಂಶ ಸೃಷ್ಟಿಯಾಗುತ್ತದೆ. ಇದು ಕ್ಯಾನ್ಸರ್ಗೆ ಕಾರಣವಾಗುತ್ತದೆ ಎಂದು ಕೆಲವರು ವಾದಿಸುತ್ತಾರೆ.
ಪ್ರಾಣಿಗಳ ಮೇಲೆ ನಡೆಸಿದ ಸಂಶೋಧನೆಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಅಕ್ರಿಲಮೈಡ್ ನೀಡಿದಾಗ ಕ್ಯಾನ್ಸರ್ ದೃಢಪಟ್ಟಿತ್ತು. ಆದರೆ, ಮನುಷ್ಯರು ಬ್ರೆಡ್ ತಿನ್ನುವುದರಿಂದ ಕ್ಯಾನ್ಸರ್ ಬರುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ವಾಸ್ತವವಾಗಿ, ಬ್ರೆಡ್ಗಿಂತ ನಾವು ದಿನನಿತ್ಯ ತಿನ್ನುವ ಸಮೋಸಾ, ಕಚೋರಿ ಹಾಗೂ ಫ್ರೆಂಚ್ ಫ್ರೈಸ್ಗಳಂತಹ ಕರಿದ ತಿಂಡಿಗಳಲ್ಲಿ ಅಕ್ರಿಲಮೈಡ್ ಪ್ರಮಾಣ ಹೆಚ್ಚಿರುತ್ತದೆ. ಆದರೆ ಬ್ರೆಡ್ನಲ್ಲಿ ಮೈದಾ ಇರುವುದರಿಂದ ಸಕ್ಕರೆ ಮಟ್ಟ ಹೆಚ್ಚಾಗಬಹುದು ಹಾಗೂ ಬೊಜ್ಜು ಬರಬಹುದು. ಆದ್ದರಿಂದ ಮಿತವಾಗಿ ಬಳಸುವುದು ಒಳ್ಳೆಯದು.
ಅಲ್ಲದೆ, ಮಾರುಕಟ್ಟೆಯಲ್ಲಿ ಸಿಗುವ ಬಹುತೇಕ ಬ್ರೌನ್ ಬ್ರೆಡ್ಗಳು ನಿಜವಾದ ಗೋಧಿ ಬ್ರೆಡ್ಗಳಲ್ಲ. ಸಾಮಾನ್ಯ ವೈಟ್ ಬ್ರೆಡ್ಗೆ ಕೃತಕ ಬಣ್ಣ ಸೇರಿಸಿ ಬ್ರೌನ್ ಬ್ರೆಡ್ ಎಂದು ಮಾರಾಟ ಮಾಡಲಾಗುತ್ತದೆ. ಹೀಗಾಗಿ, ಕೇವಲ ಬಣ್ಣ ನೋಡಿ ಖರೀದಿಸುವ ಬದಲು ಪ್ಯಾಕೆಟ್ ಮೇಲಿರುವ ಘಟಕಾಂಶಗಳನ್ನು ಗಮನಿಸಿ, ‘ಹೋಲ್ ವೀಟ್’ (Whole Wheat) ಅಥವಾ ‘ಮಲ್ಟಿಗ್ರೇನ್’ ಬ್ರೆಡ್ಗಳನ್ನು ಆಯ್ದುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.