newsics.com | ನ್ಯೂಸಿಕ್ಸ್
ನವದೆಹಲಿ: ಭಾರತದಲ್ಲಿ ಮೊದಲ ಬಾರಿಗೆ ಹೈಡ್ರೋಜನ್ ರೈಲು ಸೇವೆಗೆ ಕ್ಷಣಗಣನೆ ಆರಂಭವಾಗಿದೆ. ಹರಿಯಾಣದ ಜಿಂದ್ ಮತ್ತು ಸೋನಿಪತ್ ನಡುವೆ ಸಂಚರಿಸಲಿರುವ ಭಾರತದ ಪ್ರಥಮ ಹೈಡ್ರೋಜನ್ ಚಾಲಿತ ರೈಲಿಗೆ ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ಬಾವುಟ ತೋರುವ ಮೂಲಕ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಈ ಐತಿಹಾಸಿಕ ಹೆಜ್ಜೆಯೊಂದಿಗೆ ಅತ್ಯಾಧುನಿಕ ಹೈಡ್ರೋಜನ್ ತಂತ್ರಜ್ಞಾನ ಬಳಸುವ ವಿಶ್ವದ ಆಯ್ದ ದೇಶಗಳ ಸಾಲಿಗೆ ಭಾರತ ಸೇರ್ಪಡೆಗೊಳ್ಳಲಿದೆ.
ಏನಿದರ ತಾಂತ್ರಿಕ ವಿಶೇಷತೆ?
ಸಾಮಾನ್ಯ ವಿದ್ಯುತ್ ರೈಲುಗಳಿಗಾಗಿ ಅಳವಡಿಸಲಾದ ಓವರ್ಹೆಡ್ ವಿದ್ಯುತ್ ತಂತಿಗಳಾಗಲಿ ಅಥವಾ ಡೀಸೆಲ್ ಇಂಜಿನ್ಗಳ ಅಗತ್ಯ ಈ ರೈಲಿಗೆ ಇರುವುದಿಲ್ಲ.
ಈ ರೈಲು ತನ್ನಲ್ಲೇ ಇರುವ ‘ಹೈಡ್ರೋಜನ್ ಇಂಧನ ಕೋಶ’ಗಳ ಮೂಲಕ ಸ್ವತಂತ್ರವಾಗಿ ವಿದ್ಯುತ್ ಉತ್ಪಾದಿಸಿಕೊಳ್ಳುತ್ತದೆ. ಪ್ರೊಟಾನ್ ಎಕ್ಸ್ಚೇಂಜ್ ಮೆಂಬ್ರೇನ್ (PEM) ಕೋಶದಲ್ಲಿ ಹೈಡ್ರೋಜನ್ ಮತ್ತು ಆಮ್ಲಜನಕದ ರಾಸಾಯನಿಕ ಕ್ರಿಯೆಯಿಂದ ವಿದ್ಯುತ್ ಉತ್ಪತ್ತಿಯಾಗುತ್ತದೆ. ಇಲ್ಲಿ ಯಾವುದೇ ದಹನ ಪ್ರಕ್ರಿಯೆ ಇಲ್ಲದ ಕಾರಣ, ಕೇವಲ ನೀರಿನ ಹಬೆ ಮತ್ತು ಶಾಖ ಮಾತ್ರ ಹೊರಬರುತ್ತದೆ. ಇದು ಶೂನ್ಯ ಇಂಗಾಲ ಹೊರಸೂಸುವಿಕೆಯನ್ನು ಖಚಿತಪಡಿಸುತ್ತದೆ.
ಜಿಂದ್ ಜಂಕ್ಷನ್ನಿಂದ ಸೋನಿಪತ್ವರೆಗೆ 89 ಕಿಲೋಮೀಟರ್ ದೂರದಲ್ಲಿ ಈ ರೈಲು ಸಂಚರಿಸಲಿದೆ.10 ಬೋಗಿಗಳನ್ನು ಹೊಂದಿರುವ ಈ ರೈಲಿನಲ್ಲಿ ಒಮ್ಮೆಲೇ 2,600 ಪ್ರಯಾಣಿಕರು ಆರಾಮದಾಯಕವಾಗಿ ಪ್ರಯಾಣಿಸಬಹುದು. ಸದ್ಯ ಸುರಕ್ಷತೆಯ ದೃಷ್ಟಿಯಿಂದ ಗಂಟೆಗೆ 75 ಕಿ.ಮೀ ವೇಗದಲ್ಲಿ ಸಂಚರಿಸಲಿದ್ದು, ಭವಿಷ್ಯದಲ್ಲಿ ಗರಿಷ್ಠ 110 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಈ ಯೋಜನೆಗಾಗಿ ಜಿಂದ್ನಲ್ಲಿ ದೇಶದ ಅತಿ ದೊಡ್ಡ ರೈಲ್ವೆ ಹೈಡ್ರೋಜನ್ ಇಂಧನ ಉತ್ಪಾದನಾ ಮತ್ತು ಮರುಪೂರಣ ಘಟಕವನ್ನು ಸ್ಥಾಪಿಸಲಾಗಿದೆ.
Good News ಗೃಹಲಕ್ಷ್ಮಿ ಯೋಜನೆಯ 31ನೇ ಕಂತಿನ ಹಣ ಬಿಡುಗಡೆ: ಮನೆ ಯಜಮಾನಿಯರ ಖಾತೆಗೆ ₹2,000 ಜಮೆ