newsics.com | ನ್ಯೂಸಿಕ್ಸ್
ನವದೆಹಲಿ: ಗೃಹ ಬಳಕೆ ವಸ್ತುಗಳನ್ನು ಸ್ವಚ್ಛಗೊಳಿಸುವಾಗ ಹಳೆಯ ಕಾಲದ ಕಾಗದ-ಪತ್ರಗಳು ಸಿಗುವುದು ಹೊಸದೇನಲ್ಲ. ಆದರೆ, ಇಲ್ಲೊಬ್ಬ ವ್ಯಕ್ತಿಗೆ ಮನೆ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ದೊರೆತ ಎರಡು ದಶಕಗಳಿಗೂ ಹಳೆಯದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಪಾಸ್ಬುಕ್ ಇಡೀ ಕುಟುಂಬವೇ ಅಚ್ಚರಿಗೊಳ್ಳುವಂತೆ ಮಾಡಿದೆ. ಮರಣ ಹೊಂದಿರುವ ತಾತನ ಹೆಸರಿನಲ್ಲಿದ್ದ ಈ ಖಾತೆಯಲ್ಲಿ ಭಾರಿ ಮೊತ್ತದ ಹಣ ಪತ್ತೆಯಾಗಿದ್ದು, ಇದನ್ನು ವಾಪಸ್ ಪಡೆಯುವುದು ಹೇಗೆ ಎಂಬ ಕುರಿತು ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆ ಮುಂಚೂಣಿಗೆ ಬಂದಿದೆ.
ಎಕ್ಸ್ ತಾಣದಲ್ಲಿ ನೆರವಿಗಾಗಿ ಮನವಿ
ಪೂಜಾ ಹೆಸರಿನ ಯೂಸರ್ ಒಬ್ಬರು ಮಣ್ಣು ಹಿಡಿದಿದ್ದ ಹಳೆಯ ಬ್ಯಾಂಕ್ ಪಾಸ್ಬುಕ್ನ ಫೋಟೋವನ್ನು ಸಾಮಾಜಿಕ ಮಾಧ್ಯಮ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
“ವರ್ಷಗಳ ಹಿಂದೆ ನಿಷ್ಕ್ರಿಯಗೊಂಡಿರುವ ಈ ಖಾತೆಯಲ್ಲಿರುವ ಹಣವನ್ನು ಈಗಿನ ನಿಯಮಗಳ ಪ್ರಕಾರ ಹಿಂಪಡೆಯಲು ಸಾಧ್ಯವೇ ಅಥವಾ ಈ ಉಳಿತಾಯ ನಮ್ಮ ಕೈ ತಪ್ಪಿದಂತೆಯೇ?” ಎಂದು ಅವರು ನೆಟ್ಟಿಗರ ಮುಂದೆ ಪ್ರಶ್ನೆ ಇಟ್ಟಿದ್ದಾರೆ.
ಮನೆಯ ಮೂಲೆಯೊಂದರಲ್ಲಿ ಸಿಕ್ಕ ಸುಮಾರು 20 ರಿಂದ 24 ವರ್ಷಗಳಷ್ಟು ಹಳೆಯದಾದ ಈ ಪಾಸ್ಬುಕ್ ಅನ್ನು ಮನೆಯವರು ಮೊದಲು ಕಸ ಎಂದು ಭಾವಿಸಿದ್ದರು. ಆದರೆ, ಕುತೂಹಲಕ್ಕೆ ಅದರ ಒಳಗಿನ ಪುಟಗಳನ್ನು ತಿರುವಿ ನೋಡಿದಾಗ ತಂದೆಗೆ ಅದು ತನ್ನ ತಂದೆಯ (ತಾತನ) ಖಾತೆ ಎಂಬುದು ನೆನಪಾಗಿದೆ. ಅದಕ್ಕಿಂತಲೂ ಮಿಗಿಲಾಗಿ, ಆ ಖಾತೆಯಲ್ಲಿ 1 ಲಕ್ಷ ರೂಪಾಯಿಗಿಂತಲೂ ಅಧಿಕ ಬ್ಯಾಲೆನ್ಸ್ ಇರುವುದು ದಾಖಲಾಗಿತ್ತು. ಇದನ್ನು ಕಂಡು ಇಡೀ ಕುಟುಂಬಕ್ಕೆ ಒಂದು ಕ್ಷಣ ಏನು ಮಾಡಬೇಕೆಂದೇ ತೋಚಲಿಲ್ಲ.
ಈ ಪೋಸ್ಟ್ ಇಂಟರ್ನೆಟ್ನಲ್ಲಿ ಸಖತ್ ವೈರಲ್ ಆಗಿದ್ದು, ಈಗಾಗಲೇ 1 ಲಕ್ಷಕ್ಕೂ ಅಧಿಕ ಮಂದಿ ಇದನ್ನು ವೀಕ್ಷಿಸಿದ್ದಾರೆ. ಹಲವು ಬ್ಯಾಂಕಿಂಗ್ ನುರಿತರು ಈ ನಿಷ್ಕ್ರಿಯ ಹಣವನ್ನು ಮರಳಿ ಪಡೆಯಲು ಇರುವ ಕಾನೂನಾತ್ಮಕ ದಾರಿಗಳನ್ನು ಹಂಚಿಕೊಂಡಿದ್ದಾರೆ. ಖಾತೆಯಲ್ಲಿ ಹಣ ಹಾಗೇ ಇರುವುದರಿಂದ ಮೊದಲು ಆಯಾ ಎಸ್ಬಿಐ ಹೋಮ್ ಬ್ರಾಂಚ್ಗೆ ಅಗತ್ಯ ದಾಖಲೆಗಳೊಂದಿಗೆ ತೆರಳಬೇಕು. ಖಾತೆದಾರರು ಮೃತಪಟ್ಟಿರುವುದರಿಂದ ಅವರ ಡೆತ್ ಸರ್ಟಿಫಿಕೇಟ್, ಒರಿಜಿನಲ್ ಐಡಿ ಪ್ರೂಫ್ ಹಾಗೂ ವಾರಸುದಾರರ ಪತ್ರವನ್ನು ಒದಗಿಸಬೇಕಾಗುತ್ತದೆ. ಖಾತೆಗೆ ನಾಮಿನಿ ಹೆಸರನ್ನು ನಮೂದಿಸದೇ ಇದ್ದಲ್ಲಿ, ಕಾನೂನುಬದ್ಧವಾಗಿ ಹಣ ಬಿಡುಗಡೆ ಮಾಡಲು ಬ್ಯಾಂಕ್ ಅಧಿಕಾರಿಗಳು ಉತ್ತರಾಧಿಕಾರ ಪ್ರಮಾಣಪತ್ರವನ್ನು (Succession Certificate) ಕೇಳುವ ಸಾಧ್ಯತೆ ಇರುತ್ತದೆ.
ಇಷ್ಟು ದೀರ್ಘಾವಧಿಯವರೆಗೆ ಯಾವುದೇ ವಹಿವಾಟು ನಡೆಸದಿದ್ದರೂ ಸಹ ಗ್ರಾಹಕರ ಹಣ ಸುರಕ್ಷಿತವಾಗಿರುತ್ತದೆ. ಹೀಗಾಗಿ ಆತಂಕಪಡದೇ ಸೂಕ್ತ ದಾಖಲಾತಿಗಳೊಂದಿಗೆ ಬ್ಯಾಂಕ್ ಸಂಪರ್ಕಿಸಿದರೆ ತಾತನ ದುಡಿಮೆಯ ಹಣ ಖಂಡಿತ ಕೈಸೇರಲಿದೆ ಎಂದು ನೆಟ್ಟಿಗರು ತಿಳಿಸಿದ್ದಾರೆ.
HD Devegowda Wife ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಆಸ್ಪತ್ರೆಗೆ ದಾಖಲು