newsics.com | ನ್ಯೂಸಿಕ್ಸ್
ಬೆಂಗಳೂರು: ಕನ್ನಡ ಚಿತ್ರರಂಗದ ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ಕುಮಾರ್ ಅವರು ತಮ್ಮ 64ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಜುಲೈ 12ರಂದು ಆಚರಿಸಿಕೊಳ್ಳಲಿರುವ ಈ ವಿಶೇಷ ದಿನಕ್ಕಾಗಿ ಅಭಿಮಾನಿಗಳಿಗೆ ವಿಡಿಯೋ ಸಂದೇಶವೊಂದರ ಮೂಲಕ ಶಿವಣ್ಣ ಪ್ರೀತಿಯ ಮನವಿ ಹಾಗೂ ಆಹ್ವಾನವನ್ನು ನೀಡಿದ್ದಾರೆ.
“ನನ್ನ ಜನ್ಮದಿನದಂದು ನೀವೆಲ್ಲರೂ ಬನ್ನಿ, ಒಟ್ಟಿಗೆ ಸಿಗೋಣ, ಮಜಾ ಮಾಡೋಣ. ಆದರೆ ನನ್ನದೊಂದು ಸಣ್ಣ ವಿನಂತಿ ಇದೆ. ಯಾರೂ ಕೂಡ ನನಗಾಗಿ ಕೇಕ್ ಆಗಲಿ ಅಥವಾ ಯಾವುದೇ ಉಡುಗೊರೆಗಳನ್ನಾಗಲಿ (Gifts) ತರಬೇಡಿ. ನಿಮ್ಮೆಲ್ಲರ ಪರವಾಗಿ ಆ ದಿನ ನಾನೇ ಒಂದು ಕೇಕ್ ಕಟ್ ಮಾಡುತ್ತೇನೆ” ಎಂದು ಶಿವಣ್ಣ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.
ಕಳೆದ ವರ್ಷ ಶಿವಣ್ಣ ಅವರು ಅನಾರೋಗ್ಯದ ಕಾರಣದಿಂದಾಗಿ ಅಮೆರಿಕಾದಲ್ಲಿ ಕ್ಯಾನ್ಸರ್ ಮಹಾಮಾರಿಗೆ ಚಿಕಿತ್ಸೆ ಪಡೆದು ವಾಪಸ್ ಬಂದಿದ್ದರು. ಆ ಸಮಯದಲ್ಲಿ ಅವರು ಸಂಪೂರ್ಣ ವಿಶ್ರಾಂತಿಯಲ್ಲಿದ್ದ ಕಾರಣ ಹುಟ್ಟುಹಬ್ಬದ ಆಚರಣೆಯಿಂದ ದೂರ ಉಳಿದಿದ್ದರು. ಆದರೆ ಈ ಬಾರಿ ಸಂಪೂರ್ಣ ಗುಣಮುಖರಾಗಿರುವ ಹ್ಯಾಟ್ರಿಕ್ ಹೀರೋ, ತಮ್ಮ ನೆಚ್ಚಿನ ಅಭಿಮಾನಿಗಳನ್ನು ಖುದ್ದಾಗಿ ಭೇಟಿಯಾಗಲು ಉತ್ಸುಕರಾಗಿದ್ದಾರೆ. ಹೀಗಾಗಿ ಅಭಿಮಾನಿ ವಲಯದಲ್ಲಿ ಸಡಗರ ಮನೆಮಾಡಿದೆ.
ಶಿವಣ್ಣನ ಜನ್ಮದಿನದ ಅಂಗವಾಗಿ ಗಾಂಧಿನಗರದಲ್ಲಿ ಹೊಸ ಚಿತ್ರಗಳ ಹಬ್ಬವೇ ಶುರುವಾಗಲಿದೆ. ‘ಘೋಸ್ಟ್’ ಸಿನಿಮಾ ಖ್ಯಾತಿಯ ನಿರ್ದೇಶಕ ಶ್ರೀನಿ, ಶಿವಣ್ಣನ ಬರ್ತ್ಡೇಗೆ ಭರ್ಜರಿ ಗಿಫ್ಟ್ ನೀಡಲು ಸಜ್ಜಾಗಿದ್ದಾರೆ. ಇವರಿಬ್ಬರ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ‘ಎ ಫಾರ್ ಆನಂದ್’ ಚಿತ್ರದ ವಿಶೇಷ ಪ್ರೋಮೋ ಜುಲೈ 12 ರಂದು ಬಿಡುಗಡೆಯಾಗಲಿದೆ ಎಂದು ಶ್ರೀನಿ ತಿಳಿಸಿದ್ದಾರೆ. ಈ ಚಿತ್ರವನ್ನು ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಗೀತಾ ಶಿವರಾಜ್ಕುಮಾರ್ ಅವರೇ ನಿರ್ಮಿಸುತ್ತಿರುವುದು ವಿಶೇಷ.
ಹುಟ್ಟುಹಬ್ಬದ ದಿನದಂದು ಇನ್ನೂ ಹಲವು ಹೊಸ ಸಿನಿಮಾಗಳ ಘೋಷಣೆಯಾಗುವ ಸಾಧ್ಯತೆಯಿದ್ದು, ಕರುನಾಡಿನಾದ್ಯಂತ ಶಿವಣ್ಣನ ಬರ್ತ್ಡೇ ವೆಲ್ಕಮ್ ಮಾಡಲು ಅಭಿಮಾನಿ ಬಳಗ ಸಜ್ಜಾಗಿದೆ.
Automobile ಹೀರೋ, ಹೋಂಡಾ ಕಂಪನಿಗಳನ್ನು ಹಿಂದಿಕ್ಕಿ ಜಾಗತಿಕ ರೇಸ್ನಲ್ಲಿ ನಂ.1 ಪಟ್ಟಕ್ಕೇರಿದ ‘ಟಿವಿಎಸ್ ಮೋಟಾರ್ಸ್’