newsics.com | ನ್ಯೂಸಿಕ್ಸ್
ಕೇವಲ ಲೈಕ್ಸ್ ಮತ್ತು ವೀವ್ಸ್‌ಗಾಗಿ ರೀಲ್ಸ್ ಮಾಡುವ ಇಂದಿನ ಯುವಜನತೆ ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ. ಪ್ರಕೃತಿ ಸೌಂದರ್ಯದ ನಾಡು ಕೊಡಗು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಮಲ್ಲಳ್ಳಿ ಜಲಪಾತದಲ್ಲಿ ಭೇಟಿ ನೀಡಿದ್ದ ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳ ಗುಂಪೊಂದು, ಅಲ್ಲಿನ ಅಪಾಯದ ಮುನ್ನೆಚ್ಚರಿಕೆಗಳನ್ನು ಗಾಳಿಗೆ ತೂರಿ ‘ರೀಲ್ಸ್’ ವಿಡಿಯೋ ಮಾಡುವ ಹುಚ್ಚಾಟಕ್ಕೆ ಇಳಿದಿದ್ದಾರೆ.
ನಿಷೇಧಿತ ವಲಯದ ಜಾರುಬಂಡೆಗಳ ಮೇಲೆ ನಿಂತು ಪೋಸ್ ನೀಡುತ್ತಿದ್ದಾಗ ದಿಢೀರನೆ ನೀರಿನ ಮಟ್ಟ ಹೆಚ್ಚಾಗಿದ್ದು, ಇಬ್ಬರು ವಿದ್ಯಾರ್ಥಿಗಳು ಜಲಪಾತದ ಭೋರ್ಗರೆಯುವ ನೀರಿನ ಮಧ್ಯೆ ಸಿಲುಕಿ ಪ್ರಾಣಭಯ ಅನುಭವಿಸಿದ ಘಟನೆ ಇಡೀ ರಾಜ್ಯ ಬೆಚ್ಚಿಬೀಳುವಂತೆ ಮಾಡಿದೆ.
ಎಚ್ಚರಿಕೆ ಫಲಕ, ಬ್ಯಾರಿಕೇಡ್ ದಾಟಿ ಪುಂಡಾಟ
ಮೂಲಗಳ ಪ್ರಕಾರ, ಬೆಂಗಳೂರಿನ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಗುಂಪೊಂದು ಕೊಡಗು ಪ್ರವಾಸಕ್ಕೆ ಬಂದಿತ್ತು. ಮಲ್ಲಳ್ಳಿ ಜಲಪಾತದ ಬಳಿ ತೆರಳಿದ್ದ ಈ ವಿದ್ಯಾರ್ಥಿಗಳು, ಅಲ್ಲಿ ಅಳವಡಿಸಲಾಗಿದ್ದ ಅಪಾಯದ ಮುನ್ನೆಚ್ಚರಿಕೆ ಫಲಕಗಳನ್ನು ಹಾಗೂ ಸುರಕ್ಷತಾ ಬ್ಯಾರಿಕೇಡ್‌ಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ನಿಷೇಧಿತ ವಲಯಕ್ಕೆ ಇಳಿದಿದ್ದಾರೆ. ಜಲಪಾತದ ಭೋರ್ಗರೆಯುವ ನೀರಿನ ಪಕ್ಕದಲ್ಲಿರುವ ಜಾರು ಬಂಡೆಗಳ ಮೇಲೆ ನಿಂತು ಸೋಶಿಯಲ್ ಮೀಡಿಯಾ ರೀಲ್ಸ್‌ಗಾಗಿ ಪೋಸ್ ಕೊಡಲು ಆರಂಭಿಸಿದ್ದಾರೆ.
ಕ್ಷಣಾರ್ಧದಲ್ಲಿ ಹೆಚ್ಚಿದ ನೀರಿನ ಮಟ್ಟ
ವಿದ್ಯಾರ್ಥಿಗಳು ವಿಡಿಯೋ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲೇ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹಾಗೂ ಮೇಲ್ಭಾಗದ ಚೆಕ್ ಡ್ಯಾಂನಿಂದ ಕುಮಾರಧಾರ ನದಿಗೆ ದಿಢೀರನೆ ನೀರು ಬಿಟ್ಟಿದ್ದರಿಂದ ಜಲಪಾತದಲ್ಲಿ ನೀರಿನ ಹರಿವು ಕ್ಷಣಾರ್ಧದಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಈ ವೇಳೆ ಮೂಲತಃ ಆಂಧ್ರಪ್ರದೇಶದವರಾಗಿದ್ದು, ಬೆಂಗಳೂರಿನಲ್ಲಿ ಓದುತ್ತಿದ್ದ ಸಂತೋಷ್ ಮತ್ತು ಗಣೇಶ್ ಎಂಬ ಇಬ್ಬರು ವಿದ್ಯಾರ್ಥಿಗಳು ನೀರಿನ ರಭಸಕ್ಕೆ ಸಿಲುಕಿ, ನದಿಯ ಮಧ್ಯಭಾಗದ ಬಂಡೆಯೊಂದರ ಮೇಲೆ ಆಸರೆ ಪಡೆದು ಪ್ರಾಣಭಯದಿಂದ ಕೂಗಾಡುತ್ತಿದ್ದರು. ಇದನ್ನು ಕಂಡು ದಡದಲ್ಲಿದ್ದ ಅವರ ಸ್ನೇಹಿತರು ಅಸಹಾಯಕರಾಗಿ ಕಿರುಚಾಡಲಾರಂಭಿಸಿದ್ದಾರೆ.
ದಡದಲ್ಲಿದ್ದ ಸಹಪಾಠಿಗಳು ಕೂಡಲೇ ಸ್ಥಳೀಯ ಗ್ರಾಮಸ್ಥರಿಗೆ ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸೋಮವಾರಪೇಟೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಹಾಗೂ ಸ್ಥಳೀಯ ಯುವಕರು ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಭೋರ್ಗರೆಯುವ ನೀರಿನ ಮಧ್ಯೆಯೂ ಹರಸಾಹಸ ಪಟ್ಟು ಕೊನೆಗೂ ಇಬ್ಬರು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ದಡಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಇಬ್ಬರಿಗೂ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.
Photo op turns risky! Two engineering students from #AndhraPradesh were rescued after getting stranded on a rock at Mallalli Falls in #Kodagu while taking selfies. Rising water levels caught them off guard. Fire & Emergency Services carried out the rescue. #Karnataka pic.twitter.com/nf5kBvRgW2
— Imran Khan (@KeypadGuerilla) July 7, 2026
https://www.newsics.com/2026/07/07/i-will-never-forget-those-two-incidents-in-my-life-actress-radha-bhagavathi-opens-up-about-bitter-experiences/