newsics.com| ನ್ಯೂಸಿಕ್ಸ್
ಪೊಲೀಸರ ತನಿಖೆಯ ಪ್ರಕಾರ, ಕೇತನ್ ತನ್ನ ತಂದೆ ವಿಶಾಲ್ ಅಗರ್‌ವಾಲ್ ಅವರ ಬಳಿ ಸಿಯಾಳ ನಡವಳಿಕೆ, ಆಕೆಯ ಫೋನ್ ಯಾವಾಗಲೂ ಬ್ಯುಸಿ ಇರುತ್ತಿದ್ದ ವಿಚಾರ ಹಾಗೂ ಮಾತುಕತೆಯ ವೇಳೆ ಆಕೆ ಚೇತನ್ ಚೌಧರಿ ಎಂಬ ಯುವಕನ ಹೆಸರನ್ನು ಆಗಾಗ ಉಲ್ಲೇಖಿಸುತ್ತಿದ್ದ ಬಗ್ಗೆ ಹಲವು ಬಾರಿ ಹೇಳಿಕೊಂಡು ಆತಂಕ ವ್ಯಕ್ತಪಡಿಸಿದ್ದನು.
'ಪ್ರೀ-ವೆಡ್ಡಿಂಗ್ ಟೂರ್' ಕ್ಯಾನ್ಸಲ್ ಆದಾಗಲೇ ಶುರುವಾಗಿತ್ತು ಅಸಲಿ ಜಗಳ!
ಜೂನ್ 6 ರಂದು ಇಂಡೋನೇಷ್ಯಾದ ಬಾಲಿಗೆ ಹೋಗಬೇಕಿದ್ದ ಪ್ರವಾಸ ಕಾರಣಾಂತರಗಳಿಂದ ರದ್ದಾಗಿತ್ತು. ಇದಾದ ನಂತರ ಸಿಯಾ ಸಣ್ಣ-ಪುಟ್ಟ ವಿಚಾರಕ್ಕೂ ಕೇತನ್ ಜೊತೆ ಜಗಳ ಮಾಡತೊಡಗಿದ್ದಾಳೆ ಎಂದು ಕೇತನ್ ತನ್ನ ತಂದೆಗೆ ತಿಳಿಸಿದ್ದನು. ಆದರೆ ಇದಕ್ಕೆ ಪ್ರತಿಕ್ರಿಯಿಸಿದ್ದ ತಂದೆ ವಿಶಾಲ್, “ಅವಳು ಇನ್ನೂ ಚಿಕ್ಕವಳು. ಮದುವೆ ಹತ್ತಿರ ಬರುತ್ತಿರುವ ಕಾರಣ ಮಾನಸಿಕ ಒತ್ತಡದಿಂದ ಹೀಗೆ ವರ್ತಿಸುತ್ತಿರಬಹುದು. ನಾವು ಅವರ ಪೋಷಕರ ಜೊತೆ ಮಾತನಾಡಿ ತಿಳಿ ಹೇಳುತ್ತೇವೆ” ಎಂದು ಮಗನನ್ನು ಸಮಾಧಾನಪಡಿಸಿದ್ದರು.
ಕೇತನ್‌ನ ಅನುಮಾನಗಳ ನಡುವೆಯೂ, ಸಿಯಾ ಕುಟುಂಬವು ತಮಗೆ ಆಪ್ತ ಸಂಬಂಧಿಕರ ಮೂಲಕವೇ ಪರಿಚಯವಿದ್ದ ಕಾರಣ ಆತಂಕಪಡುವ ಅಗತ್ಯವಿಲ್ಲ ಎಂದು ಕುಟುಂಬ ಸದಸ್ಯರು ಕೇತನ್‌ಗೆ ಧೈರ್ಯ ತುಂಬಿದ್ದರು. ಆದರೆ, ಕುಟುಂಬಸ್ಥರ ಮಾತು ಕೇಳಿ ಸುಮ್ಮನಾದ ಕೇತನ್‌ಗೆ ಮುಂದಿನ ದಿನಗಳಲ್ಲಿ ಕಂಟಕ ಕಾದಿದೆ ಎಂಬ ಸಣ್ಣ ಸುಳಿವು ಸಹ ಸಿಕ್ಕಿರಲಿಲ್ಲ.
ಪ್ರೇಮಪಾಶಕ್ಕೆ ಬಲಿಯಾದ ಉದ್ಯಮಿ; ತನಿಖೆ ವೇಳೆ ಮುಖವಾಡ ಕಳಚಿದ ಪ್ರೇಮಿಗಳು!
ಪೊಲೀಸರ ಪ್ರಕಾರ, ಜೂನ್ 18 ರಂದು ಪುಣೆ ಸಮೀಪದ ಲೋಹಗಢ ಕೋಟೆಗೆ ಪ್ರವಾಸಕ್ಕೆ ತೆರಳಿದ್ದ ವೇಳೆ ಕೇತನ್ ಅಗರ್‌ವಾಲ್ ಅವರನ್ನು 20 ವರ್ಷದ ನಿಶ್ಚಿತಾರ್ಥದ ಯುವತಿ ಸಿಯಾ ಗೋಯಲ್ ಹಾಗೂ ಆಕೆಯ ಪ್ರಿಯಕರನೆಂದು ಆರೋಪಿಸಲಾಗಿರುವ 22 ವರ್ಷದ ಚೇತನ್ ಚೌಧರಿ ಸೇರಿ ಕಣಿವೆಗೆ ತಳ್ಳಿ ಕೊಲೆ ಮಾಡಿದ್ದಾರೆ.
ಮದುವೆಯಾಗಬೇಕಿದ್ದ ಯುವಕನನ್ನೇ ಪ್ರಿಯಕರನೊಂದಿಗೆ ಸೇರಿ ಯುವತಿ ಕೊಲೆ ಮಾಡಿರುವ ಈ ಘಟನೆ ಪುಣೆಯಲ್ಲಿ ತೀವ್ರ ಸಂಚಲನ ಮೂಡಿಸಿದೆ. ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಯಾ ಮತ್ತು ಚೇತನ್ ಇಬ್ಬರನ್ನೂ ಪೊಲೀಸರು ಬಂಧಿಸಿದ್ದು, ನ್ಯಾಯಾಲಯವು ಜುಲೈ 3 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಪ್ರಕರಣದ ಮುಂದಿನ ತನಿಖೆ ಚುರುಕಿನಿಂದ ಸಾಗಿದೆ.