newsics.com| ನ್ಯೂಸಿಕ್ಸ್
ಬೆಂಗಳೂರು ನಗರದ ಐಟಿ ಕಂಪನಿಯೊಂದರ ಆವರಣದಲ್ಲಿರುವ ಡೇ-ಕೇರ್ ಕೇಂದ್ರದಲ್ಲಿ (Baby care center) ಎರಡು ವರ್ಷದ ಪುಟ್ಟ ಮಕ್ಕಳಿಗೆ ದೈಹಿಕ ಹಿಂಸೆ, ಕಿರುಕುಳ ನೀಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಮಕ್ಕಳಿಗೆ ದೈಹಿಕ ಹಿಂಸೆ ನೀಡುವ ವಿಡಿಯೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಆ ಬೆನ್ನಲ್ಲೇ ಮಕ್ಕಳ ಸಹಾಯವಾಣಿಗೆ ಈ ಬಗ್ಗೆ ದೂರು ಬಂದಿದೆ. ಸದ್ಯ ಡೇ-ಕೇರ್ ಕೇಂದ್ರದ ಐವರು ಆಯಾಗಳ ವಿರುದ್ಧ ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಆಯಾಗಳಿಂದ ಮಕ್ಕಳಿಗೆ ದೈಹಿಕ ಹಿಂಸೆ:
ಹೆಚ್‌ಎಎಲ್ ಕ್ಯಾಂಪಸ್‌ನಲ್ಲಿರುವ ಪ್ರಮುಖ ಐಟಿ ಸಂಸ್ಥೆ ಕ್ಯಾಪ್‌ಜೆಮಿನಿ ಆವರಣದಲ್ಲಿರುವ ಬ್ರೂಕ್ಫೀಲ್ಡ್ನಲ್ಲಿರೋ ಸೊಸೈಟಿ ಜನರಲ್ ಬೇಬಿ ಕೇರ್ ಸೆಂಟರ್ನಲ್ಲಿ ಈ ಅಮಾನವೀಯ ಕೃತ್ಯ ನಡೆದಿದೆ. ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ತಮ್ಮ ಪುಟ್ಟ ಮಕ್ಕಳನ್ನು ನೋಡಿಕೊಳ್ಳಲು ಈ ಸೆಂಟರ್ನಲ್ಲಿ ಬಿಟ್ಟು ಹೋಗುತ್ತಾರೆ. ಆದರೆ, ಅಲ್ಲಿನ ಆಯಾಗಳು ಮಾತ್ರ ಮಕ್ಕಳ ಮೇಲೆ ಕ್ರೂರ ವರ್ತನೆ ತೋರಿದ್ದಾರೆ. ಮಕ್ಕಳು ಅಳುವಾಗ ಅಥವಾ ಗಲಾಟೆ ಮಾಡಿದಾಗ ಹಿಂಸೆ ನೀಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮಕ್ಕಳನ್ನು ವಾಷಿಂಗ್ ಮಷಿನ್ ಒಳಗಡೆ ಹಾಕುವ ಸಿಬ್ಬಂದಿ:
ಇನ್ನು ವೈರಲ್ ಆಗಿರುವ ವಿಡಿಯೋ ಮತ್ತಷ್ಟು ಭಯಾನಕವಾಗಿವೆ. ಮಕ್ಕಳನ್ನು ವಾಷಿಂಗ್ ಮಷಿನ್ ಒಳಗಡೆ ಹಾಕಿರುವುದು, ಬಲವಂತವಾಗಿ ಟಾಯ್ಲೆಟ್ ಜೆಟ್ ಸ್ಪ್ರೇ ಪೈಪ್ ಮೂಲಕ ನೇರವಾಗಿ ಮಕ್ಕಳ ಬಾಯಿಗೆ ತುರುಕಿ ನೀರು ಬಿಡುವ ಮೂಲಕ ಅತ್ಯಂತ ಅಮಾನುಷವಾಗಿ ನಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಶೌಚಾಲಯದೊಳಗೆ ಕೂಡಿ ಹಾಕುವುದಲ್ಲದೆ ಕಿರುಚಾಡದಂತೆ ಹೆದರಿಸಿದ್ದಾರೆ. ಆಯಾಗಳ ಈ ಕ್ರೂರ ಕೃತ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ. ಮಕ್ಕಳು ಭಯದಿಂದ ಅಳುತ್ತಿರುವ ವಿಡಿಯೋಗಳು ವೈರಲ್ ಆಗಿವೆ.
ವಿಡಿಯೋಗಳು ವೈರಲ್ ಬೆನ್ನಲ್ಲೇ ಮಕ್ಕಳ ಸಹಾಯವಾಣಿಗೆ ದೂರು ಬಂದಿದೆ. ಚೈಲ್ಡ್ ಹೆಲ್ಪ್‌ಲೈನ್ ನೀಡಿದ ದೂರಿನ ಮೇರೆಗೆ ಕಾರ್ಯಪ್ರವೃತ್ತರಾದ ಪೊಲೀಸರು, ಐವರು ಆಯಾಗಳ ವಿರುದ್ಧ ಬಿಎನ್ಎಸ್ ಮತ್ತು ಬಾಲಾಪರಾಧಿ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸದ್ಯ ಹೆಚ್‌ಎಎಲ್ ಪೊಲೀಸರು ವಿಡಿಯೋ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.