newsics.com| ನ್ಯೂಸಿಕ್ಸ್
ಏ ಮಾಯ ಚೇಸಾವೆ’ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಯವಾದ ಸಮಂತಾ ರುತ್ ಪ್ರಭು ಅವರು ಕಳೆದ ಒಂದೂವರೆ ದಶಕದಿಂದ ಟಾಪ್ ನಟಿಯಾಗಿ ಹವಾ ಮಾಡುತ್ತಿದ್ದಾರೆ. ಇವರಿಗೆ ಚಿತ್ರರಂಗದಲ್ಲಿ ಯಶಸ್ಸು ಸಿಕ್ಕರೂ, ವೈಯಕ್ತಿಕ ಬದುಕಿನಲ್ಲಿ ಕಷ್ಟದ ದಿನಗಳನ್ನು ಎದುರಿಸಿದ್ದಾರೆ.
ಅದರಲ್ಲಿ ಆರೋಗ್ಯ ಸಮಸ್ಯೆಯೂ ಒಂದು.
ಹೌದು, ನಟಿ ಸಮಂತಾ ಅವರು ‘ಮಯೋಸೈಟಿಸ್’ ಎಂಬ ಆಟೋ ಇಮ್ಯೂನ್ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದಾರೆ. ಇದರಿಂದ ಅವರು ಚೇತರಿಸಿಕೊಂಡಿದ್ದರೂ, ಜೀವನಪರ್ಯಂತ ಕೆಲವೊಂದು ನಿಯಮಗಳನ್ನು ಅವರು ಫಾಲೋ ಮಾಡಲೇಬೇಕಿದೆ.
ರುಚಿಯಿಲ್ಲದ ಆಹಾರ ಸೇವನೆ:
ಇತ್ತೀಚೆಗೆ ಸಮಂತಾ ಅವರ ವೈಯಕ್ತಿಕ ಜೀವನ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ವಿಷಯಗಳ ಬಗ್ಗೆ ʻಮಾ ಇಂಟಿ ಬಂಗಾರಂʼ ನಿರ್ದೇಶಕಿ ನಂದಿನಿ ರೆಡ್ಡಿ ಅವರು ಮಾತನಾಡಿದ್ದಾರೆ.
“ಮಯೋಸೈಟಿಸ್ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳಲು ಸಮಂತಾ ಕಳೆದ ಎರಡು ವರ್ಷಗಳಿಂದ ಅತ್ಯಂತ ಕಠಿಣವಾದ ಆಹಾರ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಅವರು ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಲಿದ್ದು, ಅದಕ್ಕಾಗಿ ಉಪ್ಪು ಹಾಗೂ ಯಾವುದೇ ವಿಶೇಷ ರುಚಿಯಿಲ್ಲದ ಆಹಾರವನ್ನು ಸೇವಿಸುತ್ತಾರೆ. ಇಂತಹ ಕಠಿಣ ನಿರ್ಬಂಧಗಳನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡು ಶಿಸ್ತು ಕಾಯ್ದುಕೊಳ್ಳುವುದು ಅಷ್ಟು ಸುಲಭವಲ್ಲ” ಎಂದು ನಂದಿನಿ ರೆಡ್ಡಿ ಹೇಳಿದ್ದಾರೆ.
ಸಮಂತಾ ನಿಜಕ್ಕೂ ವಿಶಿಷ್ಟ ವ್ಯಕ್ತಿತ್ವದವರು:
“ಈ ರೀತಿಯ ಆಟೋ ಇಮ್ಯೂನ್ ಸಮಸ್ಯೆಗಳಿಗೆ ಶಾಶ್ವತ ನಿವಾರಣೆ ಇರುವುದಿಲ್ಲ. ಕಾಯಿಲೆ ಹತೋಟಿಯಲ್ಲಿ ಇರಬೇಕಾದರೆ ಜೀವನಪೂರ್ತಿ ಇಂತಹ ನಿಯಮಗಳನ್ನು ಪಾಲಿಸುವುದು ಅನಿವಾರ್ಯ. ಒಳ್ಳೆಯ ಮತ್ತು ಕಷ್ಟದ ದಿನಗಳು ಎದುರಾದರೂ ಪ್ರತಿಯೊಂದು ಪರಿಸ್ಥಿತಿಯನ್ನು ಸಮಂತಾ ಎದುರಿಸಿದ ರೀತಿ ನಿಜಕ್ಕೂ ಶ್ಲಾಘನೀಯ. ಪ್ರಸ್ತುತ ಅವರು ವೈಯಕ್ತಿಕವಾಗಿ ಅತ್ಯಂತ ಶಾಂತ ಮತ್ತು ಸಂತೋಷದಿಂದ ಇದ್ದಾರೆ. ಕಾಯಿಲೆಯನ್ನು ಧೈರ್ಯದಿಂದ ಮೆಟ್ಟಿ ನಿಂತು, ಅದೇ ಉತ್ಸಾಹದಲ್ಲಿ ವೃತ್ತಿಜೀವನದ ಕಡೆಗೆ ಗಮನ ಹರಿಸುತ್ತಿರುವ ಸಮಂತಾ ನಿಜಕ್ಕೂ ವಿಶಿಷ್ಟ ವ್ಯಕ್ತಿತ್ವದವರು” ಎಂದು ನಂದಿನಿ ರೆಡ್ಡಿ ಬಣ್ಣಿಸಿದ್ದಾರೆ.
ಸಾಹಸ ದೃಶ್ಯಗಳಿಗೆ ಡ್ಯೂಪ್ ಬೇಡ ಎಂದಿದ್ದ ಸಮಂತಾ:
ಇತ್ತೀಚೆಗೆ ತೆರೆಕಂಡ ‘ಮಾ ಇಂಟಿ ಬಂಗಾರಂ’ ಚಿತ್ರದ ಚಿತ್ರೀಕರಣದ ಸಂದರ್ಭವನ್ನು ನೆನಪಿಸಿಕೊಂಡ ನಂದಿನಿ ರೆಡ್ಡಿ, ಸಮಂತಾ ಅವರ ಕೆಲಸದ ಬಗೆಗಿನ ಬದ್ಧತೆಯನ್ನು ಹೊಗಳಿದ್ದಾರೆ. “ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಆಕ್ಷನ್ ದೃಶ್ಯಗಳ ಚಿತ್ರೀಕರಣದ ವೇಳೆ ಸಮಂತಾ ಎಲ್ಲರನ್ನೂ ಅಚ್ಚರಿಗೊಳಪಡಿಸಿದರು. ಸಾಮಾನ್ಯವಾಗಿ ಇಂತಹ ಕಠಿಣ ಸಾಹಸಗಳಿಗೆ ಡ್ಯೂಪ್‌ಗಳನ್ನು ಬಳಸಲಾಗುತ್ತದೆ. ಆದರೆ, ಸಮಂತಾ ಅವರು ಡ್ಯೂಪ್‌ಗಳ ಸಹಾಯವನ್ನು ನಿರಾಕರಿಸಿ, ತಾವೇ ಸ್ವತಃ ಆಕ್ಷನ್ ಸನ್ನಿವೇಶಗಳಲ್ಲಿ ಭಾಗವಹಿಸಿದರು. ಅವರ ಈ ಧೈರ್ಯ ಮತ್ತು ಬದ್ಧತೆಯನ್ನು ನೋಡಿ ಇಡೀ ತಂಡವೇ ಆಶ್ಚರ್ಯಚಕಿತರಾಗಿ ಮೆಚ್ಚುಗೆ ವ್ಯಕ್ತಪಡಿಸಿತ್ತು” ಎಂದು ನಂದಿನಿ ರೆಡ್ಡಿ ಹೇಳಿದ್ದಾರೆ.
‘ಮಾ ಇಂಟಿ ಬಂಗಾರಂ’ ಹೊಸ ದಾಖಲೆಗಳ ಬೇಟೆ:
ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ವಿಶ್ವಾದಾದ್ಯಂತ ಸುಮಾರು 75 ಕೋಟಿ ರೂ.ಗಳನ್ನು ಬಾಚಿಕೊಂಡು, ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಆಗಿ ಹೊರಹೊಮ್ಮಿದೆ. ಪ್ರಸ್ತುತ ಗರ್ಭಿಣಿಯಾಗಿರುವ ಸಮಂತಾ, ಈಗ ಜೀವನದ ಅತ್ಯಂತ ಸಂತೋಷದಾಯಕ ಕ್ಷಣಗಳನ್ನು ಆನಂದಿಸುತ್ತಿದ್ದಾರೆ.