newsics.com/ನ್ಯೂಸಿಕ್ಸ್
ಜಲಸಂಪನ್ಮೂಲ ಖಾತೆ ಹಂಚಿಕೆಯಿಂದ ಅಸಮಾಧಾನಗೊಂಡ ಸಚಿವ ರಾಮಲಿಂಗಾ ರೆಡ್ಡಿ ರಾಜೀನಾಮೆ ನೀಡಿದ್ದರು. ಆದರೆ, ಅವರ ನಾಲ್ಕು ಸಾಲಿನ ರಾಜೀನಾಮೆ ಪತ್ರದಲ್ಲಿದ್ದ ಮೂರು ಕಾಗುಣಿತ ದೋಷಗಳನ್ನು ನೆಟ್ಟಿಗರು ಪತ್ತೆ ಹಚ್ಚಿದ್ದು, ಇದು ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಹೌದು, ಇಂದು, ರಾಮಲಿಂಗಾ ರೆಡ್ಡಿ ಅವರ ಮನವೊಲಿಸಲು ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ನಡೆಸಿದ ಯತ್ನ ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ. ಈ ಬೆಳವಣಿಗೆಯ ನಡುವೆ ರಾಮಲಿಂಗಾ ರೆಡ್ಡಿಯವರು ತಮ್ಮ ರಾಜೀನಾಮೆಯನ್ನು ಹಿಂಪಡೆಯುವ ಸಾಧ್ಯತೆಗಳಿವೆ ಎಂದು ಸದ್ಯ ಬಂದಿರುವ ವರದಿಗಳು ಹೇಳುತ್ತಿವೆ.
ಆದರೆ, ಅವರ ರಾಜೀನಾಮೆ ಪತ್ರ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ಗೆ ಒಳಗಾಗಿದೆ. ನಾಲ್ಕು ಸಾಲುಗಳ ರಾಜೀನಾಮೆ ಪತ್ರದಲ್ಲಿ ಮೂರು ಕಾಗುಣಿತ ದೋಷಗಳನ್ನು ನೆಟ್ಟಿಗರು ಕಂಡು ಹಿಡಿದಿದ್ದಾರೆ. ಒಂದು ರಾಜೀನಾಮೆ ಪತ್ರವನ್ನು ಕೊಡುವಾಗ ಅದನ್ನು ಹಲವಾರು ಅಧಿಕಾರಿಗಳು, ನೌಕರರು ನೋಡಿರುತ್ತಾರೆ. ದೋಷಗಳನ್ನು ಸರಿಪಡಿಸಿರುತ್ತಾರೆ. ಇದರ ಹೊರತಾಗಿಯೂ ಇಷ್ಟು ದೋಷಗಳು ಇವೆ ಎನ್ನುವುದರ ಬಗ್ಗೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ಸತೀಶ್ ನಾಯ್ಕ ಭದ್ರಾವತಿ ಎನ್ನುವವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ರಾಜೀನಾಮೆ ಪತ್ರವನ್ನು ಶೇರ್ ಮಾಡಿದ್ದು, ಅದರಲ್ಲಿನ ಕಾಗುಣಿತ ದೋಷವನ್ನು ಎತ್ತಿ ತೋರಿಸಿದ್ದಾರೆ. ಹೇರಿಕೆ ಎಂದು ಅನ್ಯ ಭಾಷೆಗಳ ವಿರುದ್ಧ ಹೋರಾಡುವ ನಮ್ಮ ಕನ್ನಡಪರ ಹೋರಾಟಗಾರರಿಗೆ, ಆಡಳಿತ ಸರ್ಕಾರದವರ ಈ ತಪ್ಪುಗಳು ಏಕೆ ಕಾಣಿಸುವುದಿಲ್ಲ, ಕಂಡರೂ ತೆಪ್ಪಗಿರುವರಾ, ಅಥವ ಅವರ ಕನ್ನಡ ಭಾಷೆಯ ಕುರಿತಾಗಿನ ಅಸಡ್ಡೆಗೆ ಉದಾಸೀನತೆಯೇ ಅವರ ಕ್ರಮವಾ? ಇದರ ವಿರುದ್ಧವಾಗಿ ಕನ್ನಡಪರ ನಿರ್ದೇಶಕರು ಮತ್ತು ಕರವೇ ಹೋರಾಟಗಾರರು ಏಕೆ ಕ್ರಮವನ್ನು ಕೈಗೊಳ್ಳುವುದಿಲ್ಲ ಎಂದು ಪ್ರಶ್ನಿಸುತ್ತಲೇ ಈ ಪೋಸ್ಟ್ ಅನ್ನು ಅವರು ಶೇರ್ ಮಾಡಿಕೊಂಡಿದ್ದಾರೆ.
ರಾಜೀನಾಮೆ ಪತ್ರದಲ್ಲಿ ಎಷ್ಟೊಂದು ದೋಷಗಳಿವೆಯಪ್ಪಾ! ಎಂದು ಶೀರ್ಷಿಕೆ ಕೊಟ್ಟಿರುವ ಅವರು, ದೇವರೇ, ಕರ್ನಾಟಕ ರಾಜ್ಯದಲ್ಲಿ, ಆಡಳಿತವನ್ನು ನಡೆಸುತ್ತಿರುವ ಧುರೀಣ ಸಚಿವರಿಂದ, ರಾಜ್ಯದ ಆಡಳಿತ ಭಾಷೆಯಾಗಿರುವ ಕನ್ನಡ ಭಾಷೆಯನ್ನು ಪರಿಪೂರ್ಣ ರೂಪದಲ್ಲಿಯೇ ಉಳಿಸಿಕೊಡಪ್ಪಾ ಎನ್ನುತ್ತಾ ಪತ್ರದಲ್ಲಿ ಅಚ್ಚಾಗಿರುವ ಕೆಲವು ಪದಗಳನ್ನು ನೋಡಿ ಎಂದು ತಪ್ಪುಗಳ ಬಗ್ಗೆ ಬರೆದಿದ್ದಾರೆ.
ವಿರುದ್ದವಾಗಿ – ಸರಿಯಾಗಿ ಬರೆಯಬೇಕಾಗಿರುವ ಕ್ರಮ ವಿರುದ್ಧವಾಗಿ
ಸಾದ್ಯವಾಗದ – ಸರಿಯಾಗಿ ಬರೆಯಬೇಕಾಗಿರುವ ಕ್ರಮ ಸಾಧ್ಯವಾಗದ
ಮುಂದುವರಿಯುತ್ತೇನೆ – ಸರಿಯಾಗಿ ಬರೆಯಬೇಕಾಗಿರುವ ಕ್ರಮ ಮುಂದುವರೆಯುತ್ತೇನೆ… ಹೀಗೆ ಮೂರು ತಪ್ಪುಗಳನ್ನು ನಾಲ್ಕು ಸಾಲುಗಳ ಕನ್ನಡದ ರಾಜೀನಾಮೆ ಪತ್ರದಲ್ಲಿ ಎತ್ತಿ ತೋರಿಸಿದ್ದಾರೆ.
ಇದರ ಜೊತೆ ಜೊತೆಗೆನೇ ರಾಜೀನಾಮೆ ಪತ್ರವನ್ನು ಹೇಗೆ ಬರೆಯಬೇಕು, ಎಲ್ಲಿ ಯಾವ ಪದ ಸೇರಿಸಬೇಕು, ಕಾಮಾ ಎಲ್ಲಿ ಹೇಗೆ ಬಳಸಬೇಕು ಎನ್ನುವುದನ್ನು ಈ ಪೋಸ್ಟ್ನೊಂದಿಗೆ ಫೇಸ್ಬುಕ್ ಬಳಕೆದಾರರು ಸ್ಪಷ್ಟವಾಗಿ ನಮೂದಿಸಿದ್ದು, ಅದರ ಲಿಂಕ್ ಇಲ್ಲಿದೆ.
ಲೈಂಗಿಕ ಸಮಸ್ಯೆಯಿಂದ ಆಗುತ್ತಾ ಹಾರ್ಟ್ ಅಟ್ಯಾಕ್? ತಜ್ಞರು ಹೇಳಿದ್ದೇನು?