Subscribe NewsicsKannada/YouTube
newsics.com
ಕನ್ನಡದ ಹೆಮ್ಮೆಯ ಕಾದಂಬರಿಕಾರರಾದ ಎಸ್. ಎಲ್. ಭೈರಪ್ಪ ಅವರು ಕನ್ನಡ ಸಾಹಿತಿಗಳಲ್ಲೆಲ್ಲ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದರು ಎಂಬುದು ಹಲವರಿಗೆ ಅಚ್ಚರಿಯೆನಿಸಬಹುದು.
ಪ್ರಾಧ್ಯಾಪಕ ವೃತ್ತಿಯಿಂದ ಬಹಳ ಹಿಂದೆಯೇ ಅವರು ನಿವೃತ್ತರಾಗಿದ್ದರೂ, ಯಾವುದೇ ವೃತ್ತಿಪರ ಬರಹಗಾರ, ಕತೆಗಾರ, ಕಾದಂಬರಿಕಾರರಿಗಿಂತ ಹೆಚ್ಚಿನ ಗೌರವಧನ ಲಕ್ಷಗಳ ಲೆಕ್ಕದಲ್ಲಿ ಅವರಿಗೆ ಪ್ರತಿ ತಿಂಗಳು ಸಂದಾಯವಾಗುತ್ತಿತ್ತು.
ಕನ್ನಡದ ಇತರ ಕಾದಂಬರಿಕಾರರು ಊಹಿಸಲೂ ಸಾಧ್ಯವಾಗದ್ದನ್ನು ಭೈರಪ್ಪ ಸಾಧಿಸಿದ್ದರು. ಬರೆದು ಬದುಕುವುದು ಕಷ್ಟ ಎನ್ನುವವರಿಗೆ ಸವಾಲಾಗಿದ್ದರು. ಅವರ ಗೌರವಧನದ ಹಿಂದೆ ಅಂತಾರಾಷ್ಟ್ರೀಯ ಜನಪ್ರಿಯತೆ- ಅನುವಾದ ಎಲ್ಲವೂ ಇದ್ದವು.
ಭೈರಪ್ಪನವರು 24 ಕಾದಂಬರಿಗಳನ್ನು ಬರೆದಿದ್ದರು. ಆರಂಭದ ಗತಜನ್ಮ, ಭೀಮಕಾಯ ಕೃತಿಗಳು ಅಷ್ಟೇನೂ ಗಳಿಕೆ ತಂದುಕೊಡಲಿಲ್ಲ. ನಂತರದ ಕೃತಿ ಧರ್ಮಶ್ರೀ ಜನಪ್ರಿಯತೆ ಗಳಿಸಿತು. ಬಳಿಕ ದೂರ ಸರಿದರು, ಮತದಾನ, ವಂಶವೃಕ್ಷ ಮೊದಲಾದ ಕೃತಿಗಳೆಲ್ಲವೂ ಒಂದೊಂದಾಗಿ ಬಂದವು. ಅವರ ಜನಪ್ರಿಯತೆ ಹೆಚ್ಚಿತು. ಅವೆಲ್ಲವೂ ಹತ್ತಕ್ಕಿಂತಲೂ ಹೆಚ್ಚು ಮರುಮುದ್ರಣಗಳನ್ನು ಕಂಡವು.
ಒಂದೊಂದು ಪ್ರಿಂಟ್‌ನಲ್ಲೂ ಹತ್ತಾರು ಸಾವಿರ ಕಾಪಿ ಅಚ್ಚು ಹಾಕಿಸಲಾಗುತ್ತಿತ್ತು. ಹೀಗಾಗಿ ಸಾಕಷ್ಟು ಸಂಭಾವನೆ, ಗೌರವಧನ ಅವುಗಳಿಂದ ಬಂತು.
ಅವರ ಪರ್ವ ಕಾದಂಬರಿ 36 ಮರುಮುದ್ರಣ ಕಂಡಿದೆ. ನಿರಾಕರಣ 25 ಸಲ, ಮಂದ್ರ 21 ಬಾರಿ, ಆವರಣ 74 ಬಾರಿ ಮರುಮುದ್ರಣ ಕಂಡಿದೆ. ಈ ಕೃತಿ ಬಿಡುಗಡೆಗೂ ಮುನ್ನವೇ ಸೋಲ್ಡ್ ಔಟ್ ಆಗಿತ್ತು. ಮೊದಲ ಮುದ್ರಣ ಕಂಡ ಐದೇ ತಿಂಗಳಲ್ಲಿ 10 ಮರುಮುದ್ರಣ ಕಂಡಿತ್ತು.
ಭೈರಪ್ಪ ಅವರ ಯಾವುದೇ ಕೃತಿಯೂ ಹತ್ತಕ್ಕಿಂತ ಕಡಿಮೆ ಮುದ್ರಣ ಕಂಡೇ ಇಲ್ಲ. ಎಲ್ಲ ಲೆಕ್ಕ ಹಾಕಿದರೆ ಅವರ ಎಲ್ಲ ಕೃತಿಗಳು 500 ಮರುಮುದ್ರಣ ಕಂಡಿವೆ ಎಂಬ ಅಂದಾಜಿದೆ. ಅಂದರೆ ಅವರಿಗೆ ಇಷ್ಟು ಬಾರಿ ಸಂಭಾವನೆ ಬಂದಿತ್ತು.
ಒಮ್ಮೆ ಬರೆದ ಕಾದಂಬರಿ ಮರುಮುದ್ರಣ ಕಂಡಿತೆಂದರೆ ಲೇಖಕನಿಗೆ ಲಾಟರಿ ಹೊಡೆಯಿತೆಂದೇ ಲೆಕ್ಕ. ಯಾಕೆಂದರೆ ಮೊದಲ ಮುದ್ರಣಕ್ಕೆ ಸಿಕ್ಕ ಸಂಭಾವನೆಯೇ ನಂತರದ ಮುದ್ರಣಗಳಿಗೂ ಸಿಗುತ್ತದೆ.
ಸಾಮಾನ್ಯವಾಗಿ ಕನ್ನಡದಲ್ಲಿ ಹೊಸ ಲೇಖಕರಿಗೆ ಕೃತಿಯ ಮುಖಬೆಲೆಯ 10 ಶೇಕಡ ಹಣ ಸಂಭಾವನೆಯಾಗಿ ದೊರೆಯುತ್ತದೆ. ಆ ಲೆಕ್ಕದ ಪ್ರಕಾರ ಭೈರಪ್ಪನವರು ಪಡೆದ ಹಣ ಕೋಟಿಗಳ ಲೆಕ್ಕದಲ್ಲಿದೆ.
ಭೈರಪ್ಪನವರ ಬಹುತೇಕ ಎಲ್ಲ ಕೃತಿಗಳೂ ಇತರ ಭಾಷೆಗಳಿಗೆ ಅನುವಾದವಾಗಿವೆ. ಕನ್ನಡದಂತೆಯೇ ಮರಾಠಿ ಹಾಗೂ ಹಿಂದಿಯಲ್ಲೂ ಅವರು ಬೆಸ್ಟ್ ಸೆಲ್ಲರ್. ಎಲ್ಲ ಕಾದಂಬರಿಗಳೂ ಭಾರತದ ಹೆಚ್ಚಿನ ಭಾಷೆಗಳಿಗೆ ಹಾಗೂ 6 ಕಾದಂಬರಿಗಳು ಇಂಗ್ಲಿಷ್‌ಗೆ ಅನುವಾದ ಆಗಿವೆ. ಅನುವಾದದ ಹಕ್ಕುಗಳಿಂದ ಅವರಿಗೆ ಹಣ ಬಂದಿತ್ತು.
ಜತೆಗೆ ಅವರಿಗೆ ಪ್ರಶಸ್ತಿ, ಪುರಸ್ಕಾರಗಳಿಂದ ಸಾಕಷ್ಟು ಹಣ ಬಂದಿತ್ತು. ಕೇಂದ್ರ ಸರ್ಕಾರದ ಪದ್ಮಗೌರವಗಳಾದ ಪದ್ಮಶ್ರೀ ಹಾಗೂ ಪದ್ಮಭೂಷಣ ಎರಡೂ ಪ್ರಶಸ್ತಿಗಳನ್ನು ಪಡೆದ ಕನ್ನಡದ ಕೆಲವೇ ಬರಹಗಾರರಲ್ಲಿ ಭೈರಪ್ಪ ಒಬ್ಬರು.
ಬಿರ್ಲಾ ಫೌಂಡೇಶನ್ ನೀಡುವ ಸರಸ್ವತಿ ಸಮ್ಮಾನ್ ಪ್ರಶಸ್ತಿಯನ್ನು ಅವರು ಸ್ವೀಕರಿಸಿದ್ದಾರೆ. ಇದು ಭಾರತದಲ್ಲೇ ಅತಿ ಹೆಚ್ಚಿನ ನಗದು ಮೊತ್ತ ನೀಡುವ (15 ಲಕ್ಷ ರೂ.) ಪ್ರಶಸ್ತಿ.
ಅವರ ಕೃತಿಗಳು ಸಿನಿಮಾ ಹಾಗೂ ಸೀರಿಯಲ್ ಕೂಡ ಆಗಿವೆ. ಅವರ ಕಾದಂಬರಿಗಳಾದ ‘ವಂಶವೃಕ್ಷ’, ‘ತಬ್ಬಲಿಯು ನೀನಾದೆ ಮಗನೆ’, ‘ನಾಯಿನೆರಳು’, ‘ಮತದಾನ’ ಕೃತಿಗಳು ಚಲನಚಿತ್ರಗಳಾಗಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಗಳಿಸಿ ಜನಪ್ರಿಯಗೊಂಡಿವೆ.
‘ಗೃಹಭಂಗ’ ದೂರದರ್ಶನದಲ್ಲಿ ಧಾರಾವಾಹಿಯಾಗಿ ಮೂಡಿಬಂತು. ವಂಶವೃಕ್ಷ ಸಿನಿಮಾ ತೆಲುಗಿನಲ್ಲಿ ಅನಿಲ್ ಕಪೂರ್ ನಟನೆಯಲ್ಲಿ ರಿಮೇಕ್ ಆಗಿದೆ. ‘ದಾಟುʼ ಹಿಂದಿಯಲ್ಲಿ ಟಿವಿ ಧಾರಾವಾಹಿಯಾಗಿದೆ. ಇವೆಲ್ಲವುಗಳಿಂದಲೂ ಅವರಿಗೆ ಲಕ್ಷಾಂತರ ರೂಪಾಯಿ ಸಂಭಾವನೆ ದೊರೆತಿದೆ.
ಹಾಗಾದರೆ ಈ ಹಣವನ್ನೆಲ್ಲ ಅವರು ಏನು ಮಾಡಿದರು? ವೈಯಕ್ತಿಕ ಕಾರಣಗಳಿಗೆ ಅವರು ಇದನ್ನು ಬಳಸಿಕೊಂಡದ್ದು ಅತ್ಯಲ್ಪ. ಅಥವಾ ಇಲ್ಲವೇ ಇಲ್ಲ ಎನ್ನಬಹುದು.
ಕೊನೆಗಾಲದಲ್ಲಿ ಅವರು ಈ ಹಣದ ವಿಲೇವಾರಿಗೆ ಒಂದು ಟ್ರಸ್ಟ್ ರಚಿಸಿದರು. ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹುಡುಕಿ, ಅವರ ಶಿಕ್ಷಣಕ್ಕೆ ನೆರವಾಗುವುದು ಈ ಟ್ರಸ್ಟ್‌ನ ಉದ್ದೇಶ. ತಾವು ಬಾಲ್ಯದಲ್ಲಿ ಕಂಡು ಉಂಡು ನೊಂದ ಬಡತನದ ಅನುಭವ ಇತರ ಪ್ರತಿಭಾವಂತ ಮಕ್ಕಳಿಗೆ ಆಗದಿರಲಿ ಎಂಬ ಆಶಯದಿಂದ ಅವರು ಇದನ್ನು ಮಾಡಿದ್ದರು. ಈ ಟ್ರಸ್ಟ್‌ನಲ್ಲಿ ಒಂದಷ್ಟು ಕೋಟಿ ಹಣವಿದ್ದು, ಅದರಿಂದ ಬಂದ ಬಡ್ಡಿಯಿಂದ ಮಕ್ಕಳಿಗೆ ಸಹಾಯ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಇದಲ್ಲದೆ, ತಮ್ಮ ಹಲವು ಪರಿಚಿತರಿಗೆ ಲಕ್ಷಗಳ ಲೆಕ್ಕದಲ್ಲೇ ದಾನವಾಗಿಯೋ, ಕೊಡುಗೆಯಾಗಿಯೋ ನೀಡಿ ಉದಾರಿಗಳೆನಿಸಿದ್ದಾರೆ. ಅವರ ಉದಾತ್ತ ಧ್ಯೇಯ, ಧೋರಣೆಗಳು ಅವರ ನಿಧನಾನಂತರವೂ ಮುಂದುವರಿದರೆ ಭೈರಪ್ಪ ಅವರ ಆತ್ಮಕ್ಕೆ ಹೆಚ್ಚು ಶಾಂತಿ ಸಿಗಬಹುದು.
Bhyrappa’s life ಭೈರಪ್ಪ ಬದುಕು, ಬಾಲ್ಯದಲ್ಲೂ ಕಷ್ಟ, ಕೊನೆಗಾಲದಲ್ಲೂ ಸಿಗದ ನೆಮ್ಮದಿ
S. L. Bhyrappa : ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪನವರ ಸ್ಮಾರಕ ನಿರ್ಮಿಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್
ಭೈರಪ್ಪರ ಜನಪ್ರಿಯ ಕಾದಂಬರಿಗಳ ಅನಾವರಣ… ಮರುಮುದ್ರಣ, ಕೃತಿಗಳ ಕಥಾಹೂರಣ…