newsics.com
ನವದೆಹಲಿ: ಸದ್ಯದಲ್ಲೇ ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಮಹಾರಾಷ್ಟ್ರದ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಆಯ್ಕೆಯಾಗಿದ್ದಾರೆ.
ಭಾನುವಾರ ಸಂಜೆ ದೆಹಲಿಯಲ್ಲಿ ನಡೆದ ಬಿಜೆಪಿ ಸಂಸದೀಯ ಸಮಿತಿ ಸಭೆಯಲ್ಲಿ ರಾಧಾಕೃಷ್ಣನ್ ಅವರನ್ನು ಅಭ್ಯರ್ಥಿಯಾಗಿಸಲು ತೀರ್ಮಾನ ಕೈಗೊಳ್ಳಲಾಯಿತು.
ಸೆ.9ರಂದು ಉಪ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಕೇಂದ್ರ ಚುನಾವಣಾ ಆಯೋಗವು ಈಗಾಗಲೇ ಚುನಾವಣಾ ದಿನಾಂಕಗಳನ್ನು ಪ್ರಕಟಿಸಿದ್ದು, ಚುನಾವಣಾ ಪ್ರಕ್ರಿಯೆಯನ್ನೂ ಆರಂಭಿಸಿದೆ.
ಉಪರಾಷ್ಟ್ರಪತಿಯಾಗಿದ್ದ ಜಗದೀಪ್ ಧನ್ಕರ್ ಅವರು ಕಳೆದ ಜು. 21ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಈವರೆಗೆ ಉಪರಾಷ್ಟ್ರಪತಿಯಾಗಿದ್ದ ಜಗದೀಪ್ ಧನ್ಖರ್ ರಾಜೀನಾಮೆ ಹಿನ್ನೆಲೆಯಲ್ಲಿ ದೇಶದ 2ನೇ ಅತಿ ದೊಡ್ಡ ಸಾಂವಿಧಾನಿಕ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಜಗದೀಪ್ ಧನ್ಕರ್ ಅವರು 2022ರ ಆ. 11ರಂದು ಭಾರತದ ಉಪ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಅವರ ಅಧಿಕಾರಾವಧಿ 2027ರ ಆ.10ರವರೆಗೆ ಇತ್ತು. ಆದರೆ, ಅವರು ಅನಾರೋಗ್ಯದ ಕಾರಣ ನೀಡಿ ಇದೇ ಜುಲೈ 21ರಂದು ಪದತ್ಯಾಗ ಮಾಡಿದ್ದಾರೆ.
ರಾಧಾಕೃಷ್ಣನ್ ಯಾರು?
ಮೂಲತಃ ತಮಿಳುನಾಡಿನವರಾದ ರಾಧಾಕೃಷ್ಣನ್ ಅವರು, 1957ರ ಅ. 20ರಂದು, ಆಗಿನ ಮದ್ರಾಸ್ ಪ್ರಾಂತ್ಯದಲ್ಲಿದ್ದ ತಿರುಪ್ಪೂರ್ ನಲ್ಲಿ ಜನಿಸಿದರು. ಅವರ ಪೂರ್ಣ ಹೆಸರು ಚಂದ್ರಾಪುರಂ ಪೊನ್ನುಸ್ವಾಮಿ ರಾಧಾಕೃಷ್ಣನ್. ತಮ್ಮ ವಿದ್ಯಾರ್ಥಿ ದೆಸೆಯಿಂದಲೇ ಆರೆಸ್ಸೆಸ್ ಜತೆ ನಂಟು ಬೆಳೆಸಿಕೊಂಡಿದ್ದ ಅವರು ಬಳಿಕ ಬಿಜೆಪಿಯ ಹಿಂದಿನ ಪಕ್ಷವಾಗಿದ್ದ ಜನಸಂಘಕ್ಕೆ ಕಾಲಿಟ್ಟಿದ್ದರು. ತಮಿಳುನಾಡಿನಲ್ಲಿ ಬಿಜೆಪಿಯನ್ನು ತಕ್ಕಮಟ್ಟಿಗೆ ಪ್ರಸಿದ್ಧಿಗೆ ತಂದ ಹಿರಿಮೆ ಇವರಿಗಿದೆ. 2003ರಿಂದ 2006ರವರೆಗೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು. 1998 ಹಾಗೂ 1999ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಕೊಯಮತ್ತೂರಿನ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯ ಗಳಿಸಿದ್ದರು.
ಮತಗಳವು ಆರೋಪ ಸಾಬೀತಿಗೆ ರಾಹುಲ್‌ಗೆ 7 ದಿನದ ಗಡುವು ನೀಡಿದ ಚುನಾವಣಾ ಆಯೋಗ