newsics.com
ಚೀನಾ: ಕಳೆದ ಕೆಲ ವರ್ಷಗಳಿಂದ ಚೀನಾ ದೇಶ ತುಸು ಆರ್ಥಿಕ ಹಿನ್ನಡೆಯನ್ನು ಅನುಭವಿಸುತ್ತಿದೆ. ಇದರ ಪರಿಣಾಮವಾಗಿ ಅಲ್ಲಿ ನಿರುದ್ಯೋಗ ಪ್ರಮಾಣ ಶೇ.16ಕ್ಕೆ ಏರಿದೆ.
ಊಟಕ್ಕೆ ಪರದಾಡುತ್ತಿರುವವರ ಸಂಖ್ಯೆಯೂ ಏರುತ್ತಿದೆ. ಹೀಗಾಗಿ ಊಟದ ಅವಶ್ಯಕತೆ ಇದ್ದವರ ಸಹಾಯಕ್ಕೆ ಅಲ್ಲಿನ ಸಮಾಜ ನಿಂತಿದೆ. ಅದರಲ್ಲೂ ಪ್ರಮುಖವಾಗಿ ಚೀನಾದ ಹಲವು ರೆಸ್ಟೋರೆಂಟ್‌ಗಳು ಇಂಥವರಿಗೆ ಉಚಿತ ಅಥವಾ ರಿಯಾಯಿತಿ ದರದಲ್ಲಿ ಊಟ ಕೊಡುತ್ತಿವೆ.
ಚೆಂಗ್ಡು ಪ್ರಾಂತ್ಯದಲ್ಲಿ ಹುವಾಂಗ್ ಮಿಂಗ್ ಅವರು ರೆಸ್ಟೋರೆಂಟ್ ಆರಂಭಿಸಿದಾಗ ಉಚಿತ ಊಟದ ಒಂದು ಆಯ್ಕೆಯನ್ನೂ ನೀಡಿದ್ದರು. ಎಂಟು ವರ್ಷಗಳ ಹಿಂದೆ ತಿಂಗಳಿಗೆ ಕೆಲವೇ ಕೆಲ ಉಚಿತ ಊಟಕ್ಕೆ ಆರ್ಡರ್ ಬರುತ್ತಿದ್ದವು. ಆದರೆ, ಕಳೆದ ಎಂಟು ವರ್ಷದಲ್ಲಿ ಉಚಿತ ಊಟಕ್ಕೆ ಬೇಡಿಕೆ ಗಣನೀಯವಾಗಿ ಏರಿದೆ.
ರೆಸ್ಟೋರೆಂಟ್‌ಗಳಿಗೆ ಹೋಗಿ ಉಚಿತ ಊಟ ಕೊಡಿ ಎಂದು ಕೇಳುವುದು ಮುಜುಗರವಾಗಬಹುದು. ಆದರೆ, ಈ ಮುಜುಗರ ತಪ್ಪಿಸಲು ರೆಸ್ಟೋರೆಂಟ್ ಗಳು ಹೊಸ ಉಪಾಯ ಮಾಡಿವೆ. ಪಾನ್ ಕೇಕ್, ಪೆಪ್ಪರ್ ಬೀಫ್ ಸ್ಟಿರ್ ಫ್ರೈ, ಮಸ್ಟರ್ ಗ್ರೀನ್ ಮಿಶ್ರಿತ ಮೀನು ಇತ್ಯಾದಿ ಕೆಲ ಚೀನೀ ತಿನಿಸುಗಳ ಹೆಸರನ್ನು ಕೋಡ್ ವರ್ಡ್ಗಳಾಗಿ ಉಪಯೋಗಿಸಲಾಗುತ್ತಿದೆ.
ರೆಸ್ಟೋರೆಂಟ್ಗಳಲ್ಲಿ ಗ್ರಾಹಕರು ಈ ತಿನಿಸುಗಳ ಹೆಸರು ಹೇಳಿದರೆ, ಅದು ಉಚಿತ ಊಟದ ಅವಶ್ಯಕತೆ ಇದೆ ಎಂಬುದು ಅಲ್ಲಿನ ಸಿಬ್ಬಂದಿಗೆ ಅರಿವಾಗುತ್ತದೆ. ಊಟವನ್ನು ಉಚಿತವಾಗಿ ನೀಡಲಾಗುತ್ತದೆ. ಈ ಸಂಪ್ರದಾಯ ಬಹಳ ದಿನಗಳಿಂದಲೂ ಇದೆ. ಆದರೆ, ಕೋಡ್ ವರ್ಡ್‌ಗಳನ್ನು ಬಳಸುವ ಗ್ರಾಹಕರ ಸಂಖ್ಯೆ ಇತ್ತೀಚೆಗೆ ಏರಿಕೆ ಆಗುತ್ತಿದೆ.
ಅಲ್ಲದೆ, ಹಿರಿಯ ನಾಗರಿಕರ ಕ್ಯಾಂಟೀನ್ಗಳಲ್ಲೂ ಯುವಜನರು ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಹಿರಿಯ ನಾಗರಿಕರಿಗೆಂದು ರೂಪಿಸಲಾಗಿರುವ ಕ್ಯಾಂಟೀನ್ಗಳಲ್ಲಿ ರಿಯಾಯಿತಿ ದರದಲ್ಲಿ ಪೌಷ್ಟಿಕಾಂಶಯುತ ಊಟ ಲಭ್ಯ ಇರುತ್ತದೆ. ಇಲ್ಲಿ ಚಿಕ್ಕ ವಯಸ್ಸಿನವರೂ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ.
ಹಾಗೆಯೇ, ಮಾಲ್‌ಗಳಲ್ಲಿ ಅಗ್ಗದ ದರದಲ್ಲಿ ಊಟ ಸಿಗುವ ಫೂಡ್ ಕೋರ್ಟ್, ಆಫೀಸ್ ಬಿಲ್ಡಿಂಗ್‌ಗಳ ಅಗ್ಗದ ಕ್ಯಾಂಟೀನ್ಗಳಿರುತ್ತವೆ. ಇಂಥ ಸ್ಥಳಗಳಲ್ಲಿ ಊಟಕ್ಕೆ ಹೋಗುವವರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಿದೆ ಎಂದು ಎಕನಾಮಿಸ್ಟ್ ಪತ್ರಿಕೆಯ ವರದಿ ವಿವರಿಸಿದೆ.
ಊಟದ ನೆರವು ರೆಸ್ಟೋರೆಂಟ್ಗಳಿಗೆ ಮಾತ್ರ ಸೀಮಿತವಾಗಿಲ್ಲ. ಶಾಂಘೈ, ಶೆಂಜೆನ್ ಮೊದಲಾದ ನಗರಗಳಲ್ಲಿ ಶಾಪಿಂಗ್ ಮಾಲ್‌ಗಳು ಹೊರಗೆ ಲಾಕ್ ಮಾಡದ ಫ್ರೀಜರ್‌ಗಳನ್ನು ಇಟ್ಟಿವೆ. ದಾನಿಗಳು ನೀಡಿದ ಆಹಾರವನ್ನು ಇಲ್ಲಿ ಇಟ್ಟಿರಲಾಗುತ್ತದೆ. ಕೊರಿಯರ್ ಬಾಯ್ಗಳು, ಸ್ವಚ್ಛತಾ ಕರ್ಮಿಗಳು ಮೊದಲಾದವರಿಗೆಂದು ಈ ವ್ಯವಸ್ಥೆ ಮಾಡಲಾಗಿದೆ.
ಸಾಕಷ್ಟು ಖಾಸಗಿ ಸಂಸ್ಥೆಗಳು, ಸಂಘಟನೆಗಳು, ವ್ಯಕ್ತಿಗಳು ತಮ್ಮ ಶಕ್ತ್ಯಾನುಸಾರವಾಗಿ ಆಹಾರವಸ್ತುಗಳನ್ನು ಮನೆ ಬಾಗಿಲುಗಳಿಗೆ ತಲುಪಿಸುವ ಕೆಲಸ ಮಾಡುತ್ತಿವೆ.
Karnataka ರಾಜ್ಯದಲ್ಲಿ ಮುಂದಿನ 5 ದಿನ ತಾಪಮಾನ ಹೆಚ್ಚಳ ನಡುವೆ ಮಳೆ ಮುನ್ಸೂಚನೆ
Expensive grape ಈ ದ್ರಾಕ್ಷಿ ಬಲು ದುಬಾರಿ, ಕೆ.ಜಿ.ಗೆ ಎಂಟು ಲಕ್ಷ ರೂಪಾಯಿ!