newsics.com
ಬೆಂಗಳೂರು: ಕಲರ್ಸ್ ಕನ್ನಡದಲ್ಲಿ ಬ್ಯಾಕ್ ಟು ಬ್ಯಾಕ್ ಹೊಸ ಸೀರಿಯಲ್‌ಗಳು ಆಗಮಿಸುತ್ತಿವೆ. ಡಿಸೆಂಬರ್‌ನಲ್ಲಿ ನೂರು ಜನ್ಮಕೂ ಸೀರಿಯಲ್ ಶುರುವಾಗಿತ್ತು. ಜನವರಿಯಲ್ಲಿ ವಧು ಮತ್ತು ಯಜಮಾನ ಸೀರಿಯಲ್ ಶುರುವಾದರೆ, ಇನ್ನೇನು ಮಾರ್ಚ್‌ನಲ್ಲಿ ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿ ಪ್ರಸಾರ ಆರಂಭಿಸಲಿದೆ. ಹೀಗಿರುವಾಗಲೇ ಇದೀಗ ಇನ್ನೊಂದು ಸೀರಿಯಲ್‌ನ ಪ್ರೋಮೋ ಬಿಡುಗಡೆ ಆಗಿದೆ. ಮುದ್ದುಸೊಸೆ ಸೀರಿಯಲ್ ಮೂಲಕ ಹಳ್ಳಿಗಾಡಿನ ಬಾಲ್ಯವಿವಾಹ ಮತ್ತು ಅದರ ಸುತ್ತಲಿನ ಕಥೆ ವೀಕ್ಷಕರಿಗೆ ನೋಡಲು ಸಿಗಲಿದೆ.
ಬಿಗ್ ಬಾಸ್ ಕನ್ನಡ 11ರ ಮೂಲಕ ಕನ್ನಡಿಗರ ಮನೆ ಮನಗಳನ್ನು ತಲುಪಿದ್ದಾರೆ ತ್ರಿವಿಕ್ರಮ್. ಬಿಗ್ ಬಾಸ್‌ನಲ್ಲಿ ಕಪ್ ಗೆಲ್ಲುವ ಫೇವರಿಟ್ ಸ್ಪರ್ಧಿಯೂ ಎನಿಸಿಕೊಂಡಿದ್ದರು. ಆದರೆ, ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟರು. ಇದೀಗ ಇದೇ ತ್ರಿವಿಕ್ರಮ್ ಬಿಗ್ ಬಾಸ್ ಬಳಿಕ ಏನ್‌ಮಾಡ್ತಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಇತ್ತು.
ಅದಕ್ಕೀಗ ಉತ್ತರ ಸಿಕ್ಕಿದೆ. ಮುದ್ದುಸೊಸೆ ಸೀರಿಯಲ್‌ನಲ್ಲಿ ಅಪ್ರಾಪ್ತ ಬಾಲಕಿಯನ್ನು ಮದುವೆ ಆಗೋ ಗಂಡಾಗಿ ತ್ರಿವಿಕ್ರಮ್ ಕಂಡಿದ್ದಾರೆ
ಪ್ರೋಮೋದಲ್ಲಿ ಏನಿದೆ?
ಶಾಲೆಯಲ್ಲಿ ಎಲ್ಲದರಲ್ಲಿಯೂ ನಂಬರ್ 1 ಆಗಿರುವ ವಿದ್ಯಾ, ಓದಿನಲ್ಲೂ ಮುಂದು, ಆಟ, ತುಂಟಾಟಕ್ಕೂ ಸೈ. ಆಕೆಗೆ ಡಾಕ್ಟರ್ ಆಗಬೇಕೆಂಬ ಆಸೆ. ಹೀಗಿರುವಾಗಲೇ ನಿಮ್ಮಜ್ಜಿಗೆ ಹುಷಾರಿಲ್ಲ ಎಂದು ಹೇಳಿ ವಿದ್ಯಾಳನ್ನು ಮನೆಗೆ ಕರೆತರುತ್ತಾನೆ ಆಕೆಯ ಅಪ್ಪ. ಮನೆಗೆ ಬರ್ತಿದ್ದಂತೆ, ಗಂಡಿನ ಕಡೆಯವರು ಬರ್ತಾರೆ. ಆದಷ್ಟು ಬೇಗ ರೆಡಿಯಾಗಿ ಬಾ ಎನ್ನುತ್ತಾನೆ. ಈ ಮದುವೆ ಬೇಡ ಎಂದು ಹೇಳಿದರೂ, ಮನೆಯವರ ಒತ್ತಾಯಕ್ಕೆ ಮಣಿದು ಭಾವಿ ಪತಿಯ ಮುಂದೆ ಬಂದು ನಿಲ್ಲುತ್ತಾಳೆ ವಿದ್ಯಾ.
ನಮಗೆ ಹುಡುಗಿ ಒಪ್ಪಿಗೆಯಾಗಿದ್ದಾಳೆ. ಆದರೆ, ನಾಳೆಯಿಂದ ಆಕೆ ಶಾಲೆಗೆ ಹೋಗುವುದು ಬೇಡ ಎಂಬ ಮಾತು ಗಂಡಿನ ಕಡೆಯವರಿಂದ ಕೇಳಿಬರುತ್ತದೆ. ಮುದ್ದುಸೊಸೆ ಸೀರಿಯಲ್ ಪ್ರೋಮೋ ಸಾಮಾಜಿಕ ಪಿಡುಗುಗಳಲ್ಲಿ ಒಂದಾಗಿರುವ ಬಾಲ್ಯವಿವಾಹದ ಸುತ್ತ ಗಿರಕಿ ಹೊಡೆಯಲಿದೆ. ಏನೂ ಅರಿಯದ ಹುಡುಗಿಯನ್ನು ವರಿಸುವ ಯುವಕನಾಗಿ ತ್ರಿವಿಕ್ರಮ್ ಕಾಣಿಸಿಕೊಂಡಿದ್ದಾರೆ. ಅವರಿಗೆ ಯುವ ನಟಿ ಪ್ರತಿಮಾ ಜೋಡಿಯಾಗಲಿದ್ದಾರೆ. ಸದ್ಯ ಮೊದಲ ಪ್ರೋಮೋ ಮೂಲಕ ಗಮನ ಸೆಳೆದ ಈ ಸೀರಿಯಲ್ ಯಾವಾಗಿನಿಂದ ಶುರು ಎಂಬ ಮಾಹಿತಿ ಇನ್ನೂ ಹೊರಬಿದ್ದಿಲ್ಲ.