newsics.com
ಮಂಗಳೂರು : ಕಡಲನಗರಿ ಮಂಗಳೂರಿನಲ್ಲಿ ಮನೆಯಲ್ಲಿ ನಿಗೂಢ ದುಷ್ಟ ಶಕ್ತಿಯೊಂದು ತಾಂಡವವಾಡ್ತಿದೆ ಎನ್ನಲಾಗಿದ್ದು, ಮನೆ ಮಂದಿಯ ಜೀವನ ಅಕ್ಷರಶಃ ನರಕವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮ ವಿಲಕ್ಷಣ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಕಳೆದ 18 ವರ್ಷಗಳಿಂದ ಉಮೇಶ್ ಶೆಟ್ಟಿ ಎಂಬವರು ತಮ್ಮ ಕುಟುಂಬದ ಜೊತೆ ನೆಲೆಸಿದ್ದಾರೆ. ಆದರೆ ಇವರು ಕಳೆದ ಮೂರು ತಿಂಗಳಿನಿಂದ ಪ್ರೇತ ಬಾಧೆಯಿಂದ ಸಂಪೂರ್ಣವಾಗಿ ಕಂಗಲಾಗಿ ಹೋಗಿದ್ದಾರೆ. ರಾತ್ರಿಯಾಗುತ್ತಿದ್ದಂತೆ ಈ ಕುಟುಂಬ ಭಯದಿಂದಲೇ ಕಾಲ ಕಳೆಯುವಂತಾಗಿದೆ.
ಮನೆಯೊಳಗೆ ಮಲಗಿದಾಗ ಯಾರೋ ಕುತ್ತಿಗೆ ಹಿಸುಕಿದಂತ ಅನುಭವ ಆಗುತ್ತಂತೆ. ಏಕಾಏಕಿ ಮನೆಯೊಳಗೆ ಇರುವ ಸ್ಟೀಲ್ ಲೋಟ, ಪಾತ್ರೆ ಪಗಡೆಗಳು ಚೆಲ್ಲಾಪಿಲ್ಲಿಯಾಗುತ್ತಂತೆ. ಮನೆ ಹೊರಗಿದ್ದ ಬಟ್ಟೆ ಒಳಗೆ ಬಂದು ಆ ಬಟ್ಟೆಗೆ ಬೆಂಕಿ ಹತ್ತಿಕೊಳ್ಳುತಂತೆ.
ಉಮೇಶ್ ಶೆಟ್ಟಿ ಪುತ್ರಿ ಕಗ್ಗತ್ತಲ ರಾತ್ರಿಯಲ್ಲಿ ತಮ್ಮ ಮೊಬೈಲ್‌ನಲ್ಲಿ ತೆಗೆದಿರುವ ಫೋಟೋದಲ್ಲಿ ಪ್ರೇತಾತ್ಮದ ಭಾವಚಿತ್ರ ಸೆರೆಯಾಗಿದೆ. ಈ ಫೋಟೋದಲ್ಲಿ ಬಿಳಿಯ ಮುಖ ಹೊಂದಿರುವ ವ್ಯಕ್ತಿ ನಿಂತಂತೆ ಭಾಸವಾಗುತಿದ್ದು, ಈ ಎಲ್ಲಾ ಬೆಳವಣಿಗೆಗಳು ಉಮೇಶ್ ಶೆಟ್ಟಿ ಕುಟುಂಬವನ್ನು ಆತಂಕಕ್ಕೆ ದೂಡಿದೆ. ಈ ಭಾಗದಲ್ಲಿ ಇಪ್ಪತೈದ್ದಕ್ಕೂ ಹೆಚ್ಚು ಮನೆಗಳಿದ್ದರು ಸಹ ಉಮೇಶ್ ಶೆಟ್ಟಿ ಕುಟುಂಬವನ್ನು ಮಾತ್ರ ಈ ಪ್ರೇತಾತ್ಮ ಕಾಡುತ್ತಿದೆಯಂತೆ. ಈ ಪ್ರೇತಾತ್ಮದ ಬಾಧೆಯ ಬಗ್ಗೆ ಸ್ಥಳೀಯ ನಿವಾಸಿಗಳಿಗೂ ಅನುಭವಕ್ಕೆ ಬಂದಿದ್ದು, ರಾತ್ರಿ ವೇಳೆ ಪಾತ್ರೆ, ಪಗಡೆ ಬೀಳುವ ಸದ್ದು ಕೇಳಿಸುತ್ತದೆಯಂತೆ ನೆರೆಮನೆ ನಿವಾಸಿ ದೇವಕಿ ಎನ್ನುವವರು ಹೇಳಿದ್ದಾರೆ.
ಉಮೇಶ್ ಶೆಟ್ಟಿ ಮಕ್ಕಳಿಗೆ ಮನೆಯೊಳಗೆ ಯಾರೋ ಓಡಾಡಿದ ಅನುಭವ ಆಗಿದೆಯಂತೆ. ಹೀಗಾಗಿ ರಾತ್ರಿಯಾಗುತ್ತಿದಂತೆ ಕುಟುಂಬ ಸದಸ್ಯರು ಹೊರಗಡೆಯೇ ಕಾಲ ಕಳೆಯುವಂತಾಗಿದೆ. ಈ ವಿಚಾರವನ್ನು ಉಮೇಶ್ ಶೆಟ್ಟಿ ಕುಟುಂಬವೇ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿರುವುದರಿಂದ ಸಂಜೆಯಾಗುತ್ತಿದ್ದಂತೆ ಈ ಮನೆ ಸಮೀಪ ಕುತೂಹಲದಿಂದ ಸಾಕಷ್ಟು ಜನ ಒಟ್ಟು ಸೇರುತ್ತಿದ್ದಾರೆ.