newsics.com
08.10.2024
ಚಂದ್ರಹಾಸೋಜ್ಜ್ವಲಕರಾ ಶಾರ್ದೂಲವರವಾಹನಾ|
ಕಾತ್ಯಾಯನೀ ಶುಭಂ ದದ್ಯಾತ್
ದೇವೀ ದಾನವಘಾತಿನೀ||
ಜಗಜ್ಜನನಿಗೆ ಕಾತ್ಯಾಯಿನಿ ಎಂಬ ಹೆಸರು ಹೇಗೆ ಬಂತು ಎಂಬುದಕ್ಕೆ ಹಿನ್ನೆಲೆ ಇದೆ. ಕತ ಎಂಬ ಋಷಿ ಇದ್ದರು. ಅವರ ಮಗನ ಹೆಸರು ಕಾತ್ಯ. ಇದೇ ಕಾತ್ಯ ಋಷಿಯ ಗೋತ್ರದಲ್ಲಿ ಜನಿಸಿದವರು ಕಾತ್ಯಾಯನ. ಆ ಭಗವತಿಯು ತಮ್ಮ ಮನೆಯಲ್ಲಿ ಮಗಳಾಗಿ ಹುಟ್ಟಬೇಕು ಎಂಬ ಅಭೀಷ್ಟದಿಂದ ಅವರು ಕಠಿಣವಾದ ತಪಸ್ಸು ಮಾಡಿದರು. ಅವರ ಪ್ರಾರ್ಥನೆಯನ್ನು ಆ ದೇವಿ ನಡೆಸಿಕೊಟ್ಟಳು. ಕೆಲ ಸಮಯದ ನಂತರ ರಾಕ್ಷಸನಾದ ಮಹಿಷಾಸುರನ ಉಪಟಳವು ಈ ಭೂಮಿ ಮೇಲೆ ಹೆಚ್ಚಾಯಿತು. ಆಗ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರು ಹಾಗೂ ಎಲ್ಲ ದೇವತೆಗಳು ಸೇರಿ, ತಂತಮ್ಮ ತೇಜಶ್ಶಕ್ತಿಯ ಅಂಶವನ್ನು ನೀಡಿ, ಒಬ್ಬ ದೇವಿಯನ್ನು ಸೃಷ್ಟಿ ಮಾಡಿದರು. ಆಕೆಯು ಮಹಿಷಾಸುರನ ಸಂಹಾರಕ್ಕಾಗಿಯೇ ಸೃಷ್ಟಿಯಾದವಳು. ಋಷಿಗಳಾದ ಕಾತ್ಯಾಯನರು ಈ ದೇವಿಯ ಪೂಜೆಯನ್ನು ಮೊದಲಿಗೆ ಮಾಡಿದರು. ಆ ಕಾರಣದಿಂದ ಆಕೆಗೆ ಕಾತ್ಯಾಯಿನಿ ಎಂಬ ಹೆಸರು ಬಂತು.
ಜತೆಗೆ ಕಾತ್ಯಾಯನರಿಗೆ ಈಕೆ ಮಗಳಾಗಿ ಹುಟ್ಟಿದಳು ಎಂಬ ಉಲ್ಲೇಖ ಸಹ ಇದೆ. ಆ ದೇವಿಯ ಅವತಾರ ಆಗಿದ್ದು ಭಾದ್ರಪದ ಮಾಸದ ಕೃಷ್ಣ ಪಕ್ಷದ ಚತುರ್ದಶಿ ದಿನದಂದು. ಆ ನಂತರ ಆಶ್ವಯುಜ ಮಾಸದ ಶುಕ್ಲ ಪಕ್ಷದ ಸಪ್ತಮಿ, ಅಷ್ಟಮಿ, ನವಮಿಯ ತನಕ ಮೂರು ದಿನ ಕಾತ್ಯಾಯನ ಋಷಿಗಳಿಂದ ಪೂಜೆಯನ್ನು ಸ್ವೀಕರಿಸಿದ ನಂತರದಲ್ಲಿ ದಶಮಿಯಂದು ದೇವಿಯು ಮಹಿಷಾಸುರನ ಸಂಹಾರ ಮಾಡಿದಳು.
ಅಂದ ಹಾಗೆ ಕೃಷ್ಣನನ್ನು ಪತಿಯಾಗಿ ಪಡೆಯುವ ಬಯಕೆಯಿಂದ ಗೋಪಿಕೆಯರು ಕಾಳಿಂದಿ- ಯಮುನಾ ನದಿಯ ದಡದಲ್ಲಿ ಕಾತ್ಯಾಯನಿಯ ಪೂಜೆ ಮಾಡಿದ್ದರಂತೆ. ಆ ಮಹಾಮಾತೆಯ ವಿವರಣೆ ಹೇಗಿದೆ ಅಂದರೆ, ಆಕೆ ಬಣ್ಣ ಬಂಗಾರದಂತೆ ಹೊಳೆಯುತ್ತದೆ. ನಾಲ್ಕು ಭುಜಗಳಿವೆ. ಬಲಗಡೆಯ ಮೇಲಿನ ಕೈ ಅಭಯ ಮುದ್ರೆಯನ್ನು ತೋರುತ್ತಿದೆ. ಕೆಳಗಿನ ಕೈ ವರ ಮುದ್ರೆಯನ್ನು ತೋರುತ್ತಿದೆ. ಎಡಗಡೆಯ ಮೇಲಿನ ಕೈಯಲ್ಲಿ ಖಡ್ಗವಿದ್ದು, ಕೆಳಗಿನ ಕೈಯಲ್ಲಿ ಕಮಲದ ಹೂವಿದೆ. ಇನ್ನು ಈ ತಾಯಿಯ ವಾಹನವು ಸಿಂಹವಾಗಿದೆ.
ಯಾರು ಕಾತ್ಯಾಯಿನಿ ದೇವಿಯನ್ನು ಶ್ರದ್ಧಾ- ಭಕ್ತಿಪೂರ್ವಕವಾಗಿ ಆರಾಧನೆ ಮಾಡುತ್ತಾರೋ ಅಂಥವರಿಗೆ ಧರ್ಮ-ಅರ್ಥ-ಕಾಮ್ಯ-ಮೋಕ್ಷ ಹೀಗೆ ಚತುರ್ವಿಧ ಫಲ ಪುರುಷಾರ್ಥಗಳು ಸಹ ದೊರೆಯುತ್ತವೆ. ರೋಗ, ಶೋಕ, ದುಃಖ, ದಾರಿದ್ರ್ಯಗಳು ದೂರವಾಗುತ್ತವೆ. ಅಷ್ಟೇ ಅಲ್ಲ, ಜನ್ಮಜನ್ಮಾಂತರದ ಪಾಪಗಳು ನಾಶವಾಗುತ್ತವೆ. ಇಹ ಲೋಕದಲ್ಲಿ ದೇವಿಯ ಆರಾಧಕರು ಅಲೌಕಿಕವಾದ ತೇಜಸ್ಸು, ಕಾಂತಿ, ಸಮಾಧಾನ-ಸಂತೃಪ್ತಿಯನ್ನು ಕಾಣುತ್ತಾರೆ.
ಕಾತ್ಯಾಯಿನಿ ದೇವಿಯನ್ನು
ಏತತ್ತೇ ವದನಂ ಸೌಮ್ಯಂ ಲೋಚನತ್ರಯಭೂಷಿತಮ್|
ಪಾತು ನಃ ಸರ್ವಭೂತೇಭ್ಯಃ ಕಾತ್ಯಾಯನಿ ನಮೋಸ್ತುತೇ||
ಹೀಗೆ ಸಹ ಆರಾಧಿಸಲಾಗುತ್ತದೆ. ಈ ದೇವಿಯ ಆರಾಧನೆಯಿಂದಾಗಿ ಭಯವು ದೂರವಾಗಿ ಧೈರ್ಯ ಸಂಚಯನ ಆಗುತ್ತದೆ, ಏನನ್ನಾದರೂ ಸಾಧಿಸುವ ಅಚಲ ವಿಶ್ವಾಸ ಸಹ ಮೂಡುತ್ತದೆ. ಆದ್ದರಿಂದ ದೇವಿಯನ್ನು ಕಾತ್ಯಾಯಿನಿ ರೂಪದಲ್ಲಿ ಆರಾಧನೆ ಮಾಡುವ ಮೂಲಕ ಸಕಲ ಸೌಭಾಗ್ಯವನ್ನೂ ಪಡೆಯಿರಿ.
Dasara Special | ಯಶಸ್ಸು ಕರುಣಿಸುವ ಕೂಷ್ಮಾಂಡಾ: ನವರಾತ್ರಿ ನಾಲ್ಕನೇ ದಿನ