newsics.com
ಬೆಂಗಳೂರು: ಬಂಗಾಳಕೊಲ್ಲಿಯ ಟರ್ಫ್ ಪರಿಣಾಮ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕಳೆದ ಎರಡ್ಮೂರು ದಿನದಿಂದ ಮಳೆಯಾಗುತ್ತಿದೆ.
ಶನಿವಾರ ಸುರಿದ ಭಾರೀ ಮಳೆಯಿಂದ ಬೆಂಗಳೂರು ತತ್ತರಿಸಿದ್ದು, ಭಾನುವಾರವೂ (ಅ.6) ಮಳೆ ಅಬ್ಬರಿಸುವ ಸಾಧ್ಯತೆಯಿದೆ.
ಶನಿವಾರ ರಾತ್ರಿ ಸುರಿದ ಮಳೆಯಿಂದ ನಗರದಲ್ಲಿ ರಸ್ತೆಗಳು ಹೊಳೆಯಂತಾಗಿವೆ. ತಡೆಗೋಡೆ ಕುಸಿದು ಅಪಾರ್ಟ್ಮೆಂಟ್ ಒಳಗೆ ನೀರು ನುಗ್ಗಿದೆ. ನಗರದಲ್ಲಿ ಸರಾಸರಿ 36 ಮಿ.ಮೀ. ಮಳೆ ದಾಖಲಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಮಳೆಗೆ ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ ಜಲಾವೃತವಾಗಿದ್ದು, ಇಲ್ಲಿನ 603 ಫ್ಲಾಟ್‌ಗಳ 2 ಸಾವಿರ ನಿವಾಸಿಗಳು ಜಲದಿಗ್ಬಂಧನಕ್ಕೆ ಸಿಲುಕಿದ್ದರು. ಟ್ರ್ಯಾಕ್ಟರ್ ಮೂಲಕ ನಿವಾಸಿಗಳನ್ನು ಶಿಫ್ಟ್ ಮಾಡಲಾಗಿದೆ. ಈ ಅಪಾರ್ಟ್ಮೆಂಟ್ನಲ್ಲಿ 80ಕ್ಕೂ ಹೆಚ್ಚು ಕಾರು, ನೂರಕ್ಕೂ ಹೆಚ್ಚು ಬೈಕ್ಗಳು ನೀರಿನಲ್ಲಿ ಮುಳುಗಿವೆ. ಟ್ರ್ಯಾಕ್ಟರ್, ಬೋಟ್ ಮೂಲಕ ಆಹಾರ, ನೀರನ್ನು ಪೂರೈಸಲಾಗಿದೆ.
ಬಸವೇಶ್ವರನಗರದಲ್ಲಿರುವ ವೃದ್ಧಾಶ್ರಮಕ್ಕೆ ನೀರು ನುಗ್ಗಿತ್ತು. ಇದರಿಂದ 15ಕ್ಕೂ ಅಧಿಕ ವೃದ್ಧರು ಪರದಾಡಿದ್ದಾರೆ. ಬಸವೇಶ್ವರ ನಗರದ 8ಬಿ ಮುಖ್ಯರಸ್ತೆ ಹೊಳೆಯಂತಾಗಿತ್ತು. ಫ್ಲೈವುಡ್ ಹಾಗೂ ಗ್ಲಾಸ್ ಅಂಗಡಿ ಸಂಪೂರ್ಣ ಜಲಾವೃತವಾಗಿತ್ತು.
ಬಿನ್ನಿಪೇಟೆಯಲ್ಲೂ ಮಳೆ ಅವಾಂತರವನ್ನೇ ಸೃಷ್ಟಿಸಿದೆ. ಬಿನ್ನಿ ಇಟಾ ಮಾಲ್ ಹಿಂಭಾಗದ ಕಾಂಪೌಂಡ್ ಗೋಡೆ ಕುಸಿದಿದೆ. ಇದರಿಂದ ವಿದ್ಯುತ್ ಕಂಬ ವಾಲಿದ್ದು, 15 ಮನೆ ನಿವಾಸಿಗಳು ಹೊರಗೆ ಬಾರದ ಸ್ಥಿತಿಯಲ್ಲಿ ಸಿಲುಕಿದ್ದರು. ಹತ್ತುಕ್ಕೂ ಹೆಚ್ಚು ಬೈಕ್ಗಳು ಜಖಂ ಆಗಿವೆ.
ಯಲಹಂಕದ ಅಟ್ಟೂರಿನಲ್ಲೂ ಮಳೆ ಅಬ್ಬರಿಸಿದೆ. ಮನೆಗಳಲ್ಲಿನ ಗೃಹೋಪಯೋಗಿ ವಸ್ತುಗಳು ನೀರುಪಾಲಾಗಿವೆ. ನೀರನ್ನು ಹೊರಹಾಕಲು ಕುಟುಂಬದವರು ರಾತ್ರಿಯಿಡೀ ಪರದಾಡಿದರು.
ಟಿ.ದಾಸರಹಳ್ಳಿಯ ಮಹೇಶ್ವರಿನಗರದಲ್ಲಿ ಮಳೆ ಅನಾಹುತ ಸೃಷ್ಟಿಸಿದೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ದಿನಸಿ, ಬಟ್ಟೆ ನೀರುಪಾಲಾಗಿವೆ. ವರುಣಾರ್ಭಟಕ್ಕೆ ಬೆಂಗಳೂರು-ಹೊಸೂರು ಹೆದ್ದಾರಿ ಕೆರೆಯಂತಾಗಿದೆ. ನೀರಲ್ಲಿ ಸಿಲುಕಿ ಕಾರು ಚಾಲಕ ಪರದಾಡಿದ್ದಾರೆ.
ಮಳೆಗೆ ಸರ್ಜಾಪುರ ಮುಖ್ಯರಸ್ತೆ ಕೆರೆಯಂತಾಗಿತ್ತು. ರಾಜಾಜಿನಗರದಲ್ಲೂ ಮಳೆ ಧಾರಾಕಾರವಾಗಿ ಸುರಿದಿದ್ದು, ಮಂಜುನಾಥನಗರದಲ್ಲಿ ಹತ್ತಾರು ಬೈಕ್ಗಳು ಮುಳುಗಡೆಯಾಗಿದ್ದವು. ರಸ್ತೆ ಬದಿ ಅಂಗಡಿಗಳಿಗೂ ಮಳೆ ನೀರು ನುಗ್ಗಿ ನಿವಾಸಿಗಳು ಪರದಾಡಿದ್ದಾರೆ.
ಯಾವ್ಯಾವ ಭಾಗದಲ್ಲಿ ಎಷ್ಟು ಮಳೆ
ಕೊಟ್ಟೆಗೆಪಾಳ್ಯ ; 113 ಮಿ.ಮೀ, ಹಂಪಿನಗರ : 108 ಮಿ.ಮೀ, ನಾಗಪುರ : 107.5 ಮಿ.ಮೀ., ಚೌಡೇಶ್ವರಿ : 79.5 ಮಿ.ಮೀ., ಮಾರುತಿಮಂದಿರ : 75.5 ಮಿ.ಮೀ., ನಂದಿನಿ ಲೇಔಟ್ : 71.5 ಮಿ.ಮೀ, ರಾಜಾಜಿನಗರ : 59 ಮಿ.ಮೀ, ನಾಯಂಡಹಳ್ಳಿ : 46 ಮಿ.ಮೀ, HAL ಏರ್ಪೋರ್ಟ್ : 45 ಮಿ.ಮೀ, ವಿದ್ಯಾರಣ್ಯಪುರ : 45 ಮಿ.ಮೀ, ಪುಟ್ಟೇನಹಳ್ಳಿ : 42.5 ಮಿ.ಮೀ, RR ನಗರ : 42.5 ಮಿ.ಮೀ, ರಾಜಮಹಲ್ ಗುಟ್ಟಹಳ್ಳಿ : 42.5 ಮಿ.ಮೀ ಸೇರಿದಂತೆ ಸರಾಸರಿ 36 ಮಿ.ಮೀ. ಮಳೆ ದಾಖಲಾಗಿದೆ.