newsics.com
ವಯನಾಡು(ಕೇರಳ): ಮುಂಡಕ್ಕೈ ಮತ್ತು ಚೂರಲ್ಮಲಾದಲ್ಲಿ ಸಂಭವಿಸಿದ ಭಾರೀ ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಇತ್ತೀಚಿನ ವರದಿಗಳ ಪ್ರಕಾರ 230ಕ್ಕೆ ಏರಿಕೆಯಾಗಿದೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಯನಾಡಿನ ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದ್ದು, 79 ಪುರುಷರು ಮತ್ತು 64 ಮಹಿಳೆಯರು ಸೇರಿದಂತೆ 144 ಮೃತದೇಹಗಳು ಪತ್ತೆಯಾಗಿವೆ. 191 ಜನರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಅವಶೇಷಗಳ ಅಡಿಯಲ್ಲಿ ಸಿಲುಕಿರುವ ವ್ಯಕ್ತಿಗಳು ಬದುಕಿರುವ ಬಗ್ಗೆಯೇ ಅನುಮಾನ ವ್ಯಕ್ತವಾಗಿದೆ.
ಕಳೆದ ಎರಡು ದಿನಗಳಲ್ಲಿ 1592 ಜನರನ್ನು ರಕ್ಷಿಸಲಾಗಿದೆ, 201 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, 91 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 8017 ಜನರನ್ನು 82 ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.
ವಯನಾಡ್ ಜಿಲ್ಲೆಯಾದ್ಯಂತ ಒಟ್ಟು 8017 ಜನರನ್ನು ಪ್ರಸ್ತುತ 82 ಪರಿಹಾರ ಶಿಬಿರಗಳಲ್ಲಿ ಇರಿಸಲಾಗಿದೆ. ಇದರಲ್ಲಿ 19 ಗರ್ಭಿಣಿಯರು ಸೇರಿದ್ದಾರೆ. ಮೆಪ್ಪಾಡಿಯಲ್ಲಿ 8 ಶಿಬಿರಗಳಲ್ಲಿ 421 ಕುಟುಂಬಗಳ 1486 ಮಂದಿ ಇದ್ದಾರೆ.
ನದಿಯಲ್ಲಿ ತೇಲುತ್ತಿರುವ ಶವಗಳನ್ನು ಹೊರತೆಗೆಯಲು ಮತ್ತು ಮಲಪ್ಪುರಂ ಜಿಲ್ಲೆಗೆ ತಲುಪಲು ಸಿದ್ಧತೆಗಳು ನಡೆಯುತ್ತಿವೆ.
ರಕ್ಷಣಾ ಕಾರ್ಯಾಚರಣೆಗಾಗಿ 1167 ಸಿಬ್ಬಂದಿಯ ತಂಡವನ್ನು ನಿಯೋಜಿಸಲಾಗಿದೆ. ಇವುಗಳಲ್ಲಿ 10 ಠಾಣಾಧಿಕಾರಿಗಳ ನೇತೃತ್ವದಲ್ಲಿ ಸಮೀಪದ ಜಿಲ್ಲೆಗಳಿಂದ 645 ಅಗ್ನಿಶಾಮಕ ದಳದ ಸಿಬ್ಬಂದಿ, 94 NDRF ಸಿಬ್ಬಂದಿ,167 ಡಿಎಸ್ಸಿ ಸಿಬ್ಬಂದಿ, ಸೇನೆಯ MEG ಯಿಂದ 153 ಸಿಬ್ಬಂದಿ, ಮಂಗಳವಾರ ರಕ್ಷಣಾ ಕಾರ್ಯಕ್ಕ ಆಗಮಿಸಿದ ಕೋಸ್ಟ್ ಗಾರ್ಡ್ ಸಿಬ್ಬಂದಿ ಈ ತಂಡದಲ್ಲಿದ್ದಾರೆ.