newsics.com
ಒಲಿಂಪಿಕ್ಸ್ ಸ್ಪರ್ಧೆಗೆ ಆಯ್ಕೆಯಾಗಬೇಕೆಂಬುದು ಎಲ್ಲ ಕ್ರೀಡಾಪಟುಗಳ ಕನಸು. ಆ ಒಂದು ಅವಕಾಶಕ್ಕಾಗಿ ತಪಸ್ಸಿನಂತೆ ಅಭ್ಯಾಸ ಮಾಡುವವರಿದ್ದಾರೆ. ಆದರೆ, ಈಜಿಪ್ಟ್ನ ಫೆನ್ಸರ್ ನಾಡಾ ಹಫೀಜ್ ಗರ್ಭಿಣಿಯಾಗಿದ್ದರಿಂದ ಈ ಬಾರಿಯ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕರೂ ತನ್ನಿಂದ ಅದು ಸಾಧ್ಯವೇ? ಎಂಬ ಗೊಂದಲದಲ್ಲಿದ್ದರು. ಆದರೆ, ಒಲಿಂಪಿಕ್ಸ್ ವೇದಿಕೆಯಲ್ಲೇ ತಾಯ್ತನವನ್ನು ಸಂಭ್ರಮಿಸಬೇಕು, ಈ ಮೂಲಕ ಎಲ್ಲ ಮಹಿಳೆಯರಿಗೆ ಒಂದು ಸಂದೇಶ ನೀಡಬೇಕೆಂದು ಅವರು 7 ತಿಂಗಳ ಗರ್ಭಿಣಿಯಾಗಿದ್ದರೂ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿ, 16ನೇ ಸುತ್ತಿನಲ್ಲಿ ಸೋಲನ್ನು ಕಂಡಿದ್ದಾರೆ. ಈ ಮೂಲಕ ಪ್ರೆಗ್ನೆನ್ಸಿ ಅಥವಾ ಬಾಣಂತನವೆಂಬುದು ಹೆಣ್ಣಿನ ಸಾಧನೆಗೆ ಯಾವ ಅಡ್ಡಿಯನ್ನೂ ಉಂಟುಮಾಡದು ಎಂಬುದನ್ನು ಅವರು ಸಾಧಿಸಿ ತೋರಿಸಿದ್ದಾರೆ.
ವಿಶೇಷವೆಂದರೆ, ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ನಾಡಾ ಹಫೀಜ್ ತಾನು 7 ತಿಂಗಳ ಗರ್ಭಿಣಿಯಾಗಿದ್ದುಕೊಂಡೇ ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ್ದೇನೆ ಎಂದು ಹೇಳಿಕೊಳ್ಳುವವರೆಗೂ ಬಹಳಷ್ಟು ಜನರಿಗೆ ಈ ವಿಷಯವೇ ಗೊತ್ತಿರಲಿಲ್ಲ. ಆಕೆಯ ಧೈರ್ಯಕ್ಕೆ ಹಾಗೂ ಬದ್ಧತೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಈಜಿಪ್ಟಿನ ಫೆನ್ಸರ್ ನಡಾ ಹಫೀಜ್ ಅವರು 7 ತಿಂಗಳ ಗರ್ಭಿಣಿಯಾಗಿದ್ದಾಗ ಸ್ಪರ್ಧಿಸುವ ಮೂಲಕ ಪ್ಯಾರಿಸ್ 2024 ಒಲಿಂಪಿಕ್ಸ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. 26ನೇ ವಯಸ್ಸಿನ ನಾಡಾ ಹಫೀಜ್ ತನ್ನ ಮೂರನೇ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ವೈಯಕ್ತಿಕ ಸೇಬರ್ ಸ್ಪರ್ಧೆಯಲ್ಲಿ ತನ್ನ ಮೊದಲ ಪಂದ್ಯವನ್ನು ಗೆದ್ದಿದ್ದರು.