newsics.com
ಬೆಂಗಳೂರು: ಭಾರತ ಕ್ರಿಕೆಟ್ ತಂಡ ಐಸಿಸಿ ಟಿ20 ವಿಶ್ವಕಪ್ ಗೆದ್ದಿದೆ. ದೇಶದೆಲ್ಲೆಡೆ ಸಂಭ್ರಮ ಮೇರೆ ಮೀರಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಬಾರ್ಬಡೋಸ್ನಲ್ಲಿ ನಡೆದ ವಿಶ್ವಕಪ್ ಫೈನಲ್ನಲ್ಲಿ ಸಂಘಟಿತ ಹೋರಾಟ ಮಾಡಿದ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದಿದ್ದು, ಇದು ಭಾರತಕ್ಕೆ ಎರಡನೇ ಟಿ20 ವಿಶ್ವಕಪ್ ಫೈನಲ್ ಗೆಲುವು. ಒಟ್ಟಾರೆಯಾಗಿ ನಾಲ್ಕನೇ ವಿಶ್ವಕಪ್.
ಆದರೆ ಭಾರತ ತಂಡ ವಿಶ್ವಕಪ್ ಗೆದ್ದಿದ್ದಕ್ಕೆ ನೆಟ್ಟಿಗರು ಜೈಲಲ್ಲಿರುವ ನಟ ದರ್ಶನ್ ತೂಗುದೀಪ್‌ಗೆ ಧನ್ಯವಾದ ಹೇಳುತ್ತಿದ್ದಾರೆ. ಅದ್ಯಾಕೆ ಅಂತಿದೀರಾ?
ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಚಿತ್ರಗಳನ್ನು ಹಂಚಿಕೊಂಡು, ಭಾರತ ವಿಶ್ವಕಪ್ ಗೆಲ್ಲಲು ಕಾರಣವಾಗಿದ್ದಕ್ಕೆ ಧನ್ಯವಾದ ಎಂದು ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಏಕೆಂದರೆ ಭಾರತ ಕಳೆದ ಬಾರಿ ವಿಶ್ವಕಪ್ ಗೆದ್ದಿದ್ದು 2011 ರಲ್ಲಿ. ಆ ವರ್ಷವೂ ಸಹ ದರ್ಶನ್ ಜೈಲಲ್ಲಿದ್ದರು. ಅದಾದ 13 ವರ್ಷಗಳ ಬಳಿಕ 2024ರಲ್ಲಿ ದರ್ಶನ್ ಮತ್ತೆ ಜೈಲಿಗೆ ಹೋಗಿದ್ದಾರೆ. ಈ ಬಾರಿ ಭಾರತ ಮತ್ತೆ ವಿಶ್ವಕಪ್ ಗೆದ್ದಿದೆ. ಹಾಗಾಗಿ ದರ್ಶನ್ ಜೈಲು ಸೇರಿದ್ದಕ್ಕೆ ಭಾರತ ವಿಶ್ವಕಪ್ ಗೆದ್ದಿದ್ದು ಎಂಬುದು ಕೆಲವರ ನಂಬಿಕೆ.
2011ರಲ್ಲಿ ಭಾರತ ತಂಡ ಎಂಎಸ್ ಧೋನಿ ನಾಯಕತ್ವದಲ್ಲಿ ಏಕದಿನ ಪಂದ್ಯ ವಿಶ್ವಕಪ್ ಗೆದ್ದು ಇತಿಹಾಸ ಬರೆದಿತ್ತು. ಫೈನಲ್ ಪಂದ್ಯದಲ್ಲಿ ಧೋನಿಯ ಆಟವನ್ನು ಯಾರೂ ಮರೆಯುವಂತಿಲ್ಲ. ಆದರೆ ಅದಕ್ಕೂ ದರ್ಶನ್ಗೂ ಲಿಂಕ್ ಮಾಡಲಾಗುತ್ತಿದೆ. ಅಸಲಿಗೆ ಭಾರತ ವಿಶ್ವಕಪ್ ಗೆದ್ದ ಕೆಲವು ತಿಂಗಳು ಬಳಿಕ ದರ್ಶನ್ ಜೈಲಿಗೆ ಹೋಗಿದ್ದರೇ ಹೊರತು ವಿಶ್ವಕಪ್ ಗೆಲ್ಲುವ ಮೊದಲಲ್ಲ. 2011ರ ಏಪ್ರಿಲ್ 2 ರಂದು ಭಾರತ ವಿಶ್ವಕಪ್ ಗೆದ್ದಿತ್ತು. ಅದಾದ ಕೆಲವು ತಿಂಗಳ ಬಳಿಕ ಅಂದರೆ ಸೆಪ್ಟೆಂಬರ್ 9ರಂದು ನಟ ದರ್ಶನ್ ಜೈಲು ಸೇರಿದ್ದರು.
ಸೆಪ್ಟೆಂಬರ್ ತಿಂಗಳಲ್ಲಿ ಪತ್ನಿ ವಿಜಯಲಕ್ಷ್ಮಿ ಮೇಲೆ ಭೀಕರ ಹಲ್ಲೆ ಮಾಡಿದ್ದರು ವಿಜಯಲಕ್ಷ್ಮಿ ಅವರ ಎರಡೂ ಕೈಗಳ ಮೂಳೆ ಮುರಿದಿತ್ತು. ಕತ್ತು, ತಲೆಯ ಭಾಗಕ್ಕೆ ಗಂಭೀರವಾಗಿ ಗಾಯವಾಗಿತ್ತು. ಆ ಪ್ರಕರಣದಲ್ಲಿ ದರ್ಶನ್ ಅವರನ್ನು ಬಂಧಿಸಿ ಇದೇ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿತ್ತು. ಆದರೆ ಬಳಿಕ ಪತ್ನಿ ವಿಜಯಲಕ್ಷ್ಮಿ ಅವರೇ ದರ್ಶನ್ ವಿರುದ್ಧ ನೀಡಿದ್ದ ದೂರು ವಾಪಸ್ ಪಡೆದರು. ಆ ಸಮಯದಲ್ಲಿ 28 ದಿನ ದರ್ಶನ್ ಜೈಲಿನಲ್ಲಿದ್ದರು.
ದರ್ಶನ್ ಜೈಲಿಗೆ ಹೋಗಿದ್ದರಿಂದಲೇ ವಿಶ್ವಕಪ್ ಗೆದ್ದಿತು ಎನ್ನುವಂತಿಲ್ಲ. ಏಕೆಂದರೆ 2011 ರಲ್ಲಿ ಭಾರತ ವಿಶ್ವಕಪ್ ಗೆದ್ದ ಬಳಿಕ ದರ್ಶನ್ ಜೈಲಿಗೆ ಹೋಗಿದ್ದರು. ಈ ಬಾರಿ ವಿಶ್ವಕಪ್ ಶುರುವಾದ ಬಳಿಕ ದರ್ಶನ್ ಜೈಲು ಸೇರಿದ್ದರು. ಏನೇ ಆಗಲಿ ಭಾರತ ವಿಶ್ವಕಪ್ ಗೆದ್ದಿದೆ. ಟೂರ್ನಿಯುದ್ದಕ್ಕೂ ಅದ್ಭುತವಾಗಿ ಆಡುತ್ತಾ ಬಂದ ಭಾರತ ತಂಡಕ್ಕೆ ಅರ್ಹ ಗೆಲುವು ದೊರೆತಿದೆ.
ದೇಶದೆಲ್ಲೆಡೆ ವಿಶ್ವಕಪ್ ಗೆದ್ದ ಸಂಭ್ರಮ, ಪ್ರಧಾನಿ ಅಭಿನಂದನೆ, T20 ಕ್ರಿಕೆಟ್‌ಗೆ ಕೊಹ್ಲಿ ನಿವೃತ್ತಿ ಘೋಷಣೆ