newsics.com
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕಣದಲ್ಲಿ ನಟ ದರ್ಶನ್ ಮತ್ತು ಇತರೆ 16 ಆರೋಪಿಗಳು ಮತ್ತಷ್ಟು ಬಲವಾದ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ದರ್ಶನ್ ಬಿಡುಗಡೆಗೆ ಪ್ರಾರ್ಥೀಸಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿವಿಧ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ವಕೀಲರ ಸಲಹೆ ಪಡೆಯುತ್ತಿದ್ದಾರೆ.
ಆದರೆ, ಸಾಕ್ಷ್ಯಗಳು ದರ್ಶನ್ ಮತ್ತಿತರ ಆರೋಪಿಗಳನ್ನು ಸಂಕಷ್ಟಕ್ಕೆ ಸಿಲುಕಿಸುತ್ತಲೇ ಇವೆ. ಇದೀಗ ಪೊಲೀಸರ ಕೈಗೆ ಸಿಕ್ಕಿರುವ ಎಫ್ಎಸ್ಎಲ್ ವರದಿ ಕೂಡ ದರ್ಶನ್ ಕೃತ್ಯವನ್ನು ಸಾಬೀತುಮಾಡಿದೆ.
ರೇಣುಕಾಸ್ವಾಮಿ ಹತ್ಯೆ ನಡೆದ ದಿನ ನಟ ದರ್ಶನ್ ಧರಿಸಿದ್ದ ಬಟ್ಟೆಯಲ್ಲಿ ರಕ್ತದ ಕಲೆಗಳು ಇರುವುದು ಪತ್ತೆಯಾಗಿದೆ. ಈ ರಕ್ತದ ಕಲೆಗಳು ಮೃತಪಟ್ಟ ರೇಣುಕಾಸ್ವಾಮಿಯದ್ದು ಎಂದು ದೃಢಪಟ್ಟಿದೆ ಎಂದು ವರದಿಗಳು ತಿಳಿಸಿವೆ. ಇದರಿಂದ ದರ್ಶನ್‌ಗೆ ಕಾನೂನಿನ ಸಂಕೋಲೆ ಇನ್ನಷ್ಟು ಬಿಗಿಯಾಗುವ ಸಾಧ್ಯತೆಯಿದೆ.
ದರ್ಶನ್ ಮನೆಯಿಂದ ವಶಪಡಿಸಿಕೊಂಡಿರುವ ದರ್ಶನ್ ಪ್ಯಾಂಟ್ ಮತ್ತು ಟೀಶರ್ಟ್ ಅನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು. ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಮತ್ತು ಕಪ್ಪು ಬಣ್ಣದ ರೌಂಡ್ ನೆಕ್ ಶರ್ಟ್ ಅನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು.
ಇದೀಗ ಎಫ್‌ಎಸ್‌ಎಲ್ ವರದಿ ಬಂದಿದ್ದು, ದರ್ಶನ್ ಉಡುಗೆಯಲ್ಲಿದ್ದ ರಕ್ತದ ಕಲೆಗಳು ರೇಣುಕಾಸ್ವಾಮಿಯದ್ದು ಎಂದು ದೃಢಪಟ್ಟಿದೆ.
ನಟ ದರ್ಶನ್ ಮಾತ್ರವಲ್ಲದೆ ಪವಿತ್ರಾ ಗೌಡ ಕೂಡ ಜೈಲಿನಲ್ಲಿದ್ದಾರೆ. ಒಟ್ಟು 17 ಜನರು ನ್ಯಾಯಾಂಗ ಬಂಧನಲ್ಲಿದ್ದಾರೆ. ಪೊಲೀಸರು ಇನ್ನೂ ಚಾರ್ಜ್ ಶೀಟ್ ಸಲ್ಲಿಸದೆ ಇರುವುದರಿಂದ ಆರೋಪಿಗಳ ವಿಚಾರಣೆ ತಡವಾಗುತ್ತಿದೆ. ಎಫ್‌ಎಸ್‌ಎಲ್ ವರದಿಗಳು ಸೇರಿದಂತೆ ಪ್ರಬಲ ಸಾಕ್ಷ್ಯಗಳಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಇದೇ ಸಮಯದಲ್ಲಿ ಚಾರ್ಜ್ ಶೀಟ್ ವರದಿಯನ್ನೂ ಸಿದ್ಧಪಡಿಸುತ್ತಿದ್ದಾರೆ.