Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಮೈಸೂರು: ಈ ಬಾರಿಯ ಐಪಿಎಲ್ ಉದ್ಘಾಟನಾ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ತಿಳಿಸಿದರು.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಮಂಗಳವಾರ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ನಾಡ ಶಕ್ತಿ ದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದರು.
ದರ್ಶನ ಮುಗಿಸಿದ ಬಳಿಕ ವೆಂಕಟೇಶ್ ಪ್ರಸಾದ್‌ರನ್ನು ಕಂಡು ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರಿನಲ್ಲಿ ಉದ್ಘಾಟನೆ ಐಪಿಎಲ್ ಪಂದ್ಯ ನಡೆಸುವಂತೆ ಈಗಾಗಲೇ ಬಿಸಿಸಿಐ ಜತೆ ಮಾತುಕತೆ ನಡೆಸಿದ್ದೇನೆ. ಬಿಸಿಸಿಐ ಸಹ ಬೆಂಗಳೂರಿನಲ್ಲಿ ಈ ಬಾರಿಯ ಉದ್ಘಾಟನೆ ಪಂದ್ಯ ನಡೆಸಲು ಮಾತುಕತೆ ನಡೆಸುತ್ತಿದೆ ಎಂದು ಹೇಳಿದರು.
ಪ್ರತಿ ವರ್ಷ ಐಪಿಎಲ್ ಟ್ರೋಫಿ ಗೆದ್ದ ಹೋಂ ಗ್ರೌಂಡ್‌ನಲ್ಲೇ ಉದ್ಘಾಟನೆ ಪಂದ್ಯ ನಡೆಯುತ್ತಿತ್ತು. ಆರ್‌ಸಿಬಿ ಸಂಭ್ರಮಾಚರಣೆಯ ವೇಳೆ ಉಂಟಾದ ಘಟನೆಯಿಂದ ಸಾಕಷ್ಟು ಗೊಂದಲಗಳಾಗಿತ್ತು. ಹೀಗಾಗಿ ನಮ್ಮ ತಂಡ ಚುನಾವಣೆ ಗೆದ್ದ ಬಳಿಕ ರಾಜ್ಯ ಸರ್ಕಾರದ ಜತೆ ಮಾತುಕತೆ ನಡೆಸಿದ್ದೇವೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಈಗಾಗಲೇ ಪಂದ್ಯಾವಳಿ ನಡೆಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಗೃಹ ಸಚಿವರ ಜತೆ ಫೋನ್ ಮೂಲಕ ಮಾತನಾಡಿದ್ದೇನೆ. ಶೀಘ್ರದಲ್ಲೇ ಈ ಬಾರಿಯ ಐಪಿಎಲ್ ಉದ್ಘಾಟನೆ ಪಂದ್ಯದ ದಿನಾಂಕ ನಿಗದಿಯಾಗಲಿದೆ. ಬೆಂಗಳೂರಿನಲ್ಲಿ ಐಪಿಎಲ್, ಅಂತಾರಾಷ್ಟ್ರೀಯ ಸೇರಿದಂತೆ ಎಲ್ಲಾ ಮಾದರಿಯ ಪಂದ್ಯಗಳು ನಡೆಯುತ್ತವೆ ಎಂದು ಮಾಹಿತಿ ನೀಡಿದರು.
ಪಂದ್ಯಕ್ಕೆ ವಿಜಯ್ ಹಜಾರೆ, ವಿರಾಟ್ ಕೊಹ್ಲಿ ಬೆಂಗಳೂರಿಗೆ ಬರಲಿದ್ದಾರೆ. ಚಿನ್ನಸ್ವಾಮಿ ಸೇರಿದಂತೆ ಮೂರು ಕ್ರೀಡಾಂಗಣ ಬೆಂಗಳೂರಿನಲ್ಲಿದೆ. ಡೆಲ್ಲಿ ತಂಡದಿಂದ ಈ ಬಾರಿ ವಿರಾಟ್ ಕೊಹ್ಲಿ ಆಡಲಿದ್ದಾರೆ. ಪಂದ್ಯ ಎಲ್ಲಿ ನಡೆಯಲಿದೆ ಎಂಬ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ ಎಂದರು.
ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಾಣದ ಬಗ್ಗೆ ಎಲ್ಲಾ ಮಾತುಕತೆಗಳು ನಡೆಯುತ್ತಿದೆ.
ಕಳೆದ ಮೂರು ವರ್ಷಗಳಿಂದ ಕ್ಲಬ್‌ನಲ್ಲಿ ಸಾಕಷ್ಟು ಗೊಂದಗಳಾಗಿತ್ತು. ಎಲ್ಲಾ ಗೊಂದಲಗಳನ್ನು ನಮ್ಮ ತಂಡ ಬಗೆಹರಿಸಿ ಉತ್ತಮ ಕ್ರಿಕೆಟ್‌ಗೆ ಆದ್ಯತೆ ನೀಡಲಿದೆ ಎಂದು ಹೇಳಿದರು.
IPL 2026 ಆರ್‌ಸಿಬಿಗೆ 8 ಆಟಗಾರರ ಸೇರ್ಪಡೆ: ತಂಡ ಈಗ ಇನ್ನಷ್ಟು ಸ್ಟ್ರಾಂಗ್